ಸುಳ್ಳು ಕೊಲೆ ಕೇಸ್ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿ ಕೆಲಸ ಕಳೆದುಕೊಂಡ ಪೊಲೀಸರು

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಸುಳ್ಳು ಕೊಲೆ ಪ್ರಕರಣ ದಾಖಲಿಸಿ ಅಮಾಯಕನನ್ನು ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ. ನ್ಯಾಯಾಲಯದ ತನಿಖೆಯಿಂದ ಸುಳ್ಳು ಆರೋಪ ಸಾಬೀತಾಗಿದೆ. ಅಮಾಯಕನಾದ ಸುರೇಶ್ ಎರಡು ವರ್ಷಗಳ ಕಾಲ ಅನಗತ್ಯವಾಗಿ ಜೈಲಿನಲ್ಲಿ ಕಳೆದಿದ್ದಾನೆ. ಈ ಘಟನೆಯಿಂದ ಪೊಲೀಸ್ ಇಲಾಖೆಯ ಖ್ಯಾತಿಗೆ ಧಕ್ಕೆಯಾಗಿದೆ.

ಸುಳ್ಳು ಕೊಲೆ ಕೇಸ್ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿ ಕೆಲಸ ಕಳೆದುಕೊಂಡ ಪೊಲೀಸರು
ಅಮಾನತಾದ ಅಧಿಕಾರಿಗಳು
Updated By: ವಿವೇಕ ಬಿರಾದಾರ

Updated on: Jun 30, 2025 | 7:10 PM

ಮೈಸೂರು, ಜೂನ್​ 30: ಸುಳ್ಳು ಕೊಲೆ ಕೇಸ್​ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್ಸ್​ಪೆಕ್ಟರ್ ಮತ್ತು ಇಬ್ಬರು ಸಬ್​ ಇನ್ಸ್​ಪೆಕ್ಟರ್​ಗಳನ್ನು ಅಮಾನತು ಮಾಡಲಾಗಿದೆ. ಮೈಸೂರು (Mysore) ಜಿಲ್ಲೆಯ ಪಿರಿಯಾಪಟ್ಟಣ (Periyapatna) ತಾಲೂಕಿನ ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್, ಇಲವಾಲ ಸಬ್​​ ಇನ್ಸ್​​ಪೆಕ್ಟರ್​​ ಮಹೇಶ್‌ ಕುಮಾರ್ ಹಾಗೂ ಜಯಪುರ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಪ್ರಕಾಶ್ ಎತ್ತಿನಮನೆಯವರನ್ನು ಅಮಾನತು ಮಾಡಲಾಗಿದೆ. ಕೊಲೆ ಪ್ರಕರಣದ ವಿಚಾರಣಾಧಿಕಾರಿಗಳಾದ ಇವರು ಸುಳ್ಳು ಚಾರ್ಜ್​​ಶೀಟ್ ಹಾಕಿ ಜೈಲಿಗೆ ಕಳುಹಿಸಿದ್ದರು.

ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಗಾಂಧಿ ಎಂಬುವರ ಪುತ್ರ ಸುರೇಶ್​ ಅಲಿಯಾಸ್ ಕುರುಬರ ಸುರೇಶ್ ಎಂಬುವನ ವಿರುದ್ಧ ಅಂದು ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್ ಸುಳ್ಳು ಚಾರ್ಜ್​ಶೀಟ್​​ ಸಲ್ಲಿಸಿದ್ದರು. ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದಾಗ ಸುಳ್ಳು ಚಾರ್ಜ್​​ಶೀಟ್​ ಹಾಕಿರುವುದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ

2020ರ ನವೆಂಬರ್​ 12 ರಂದು ಬೆಟ್ಟದಪುರದಲ್ಲಿ ಓರ್ವ ಮಹಿಳೆಯ ಮೃತದೇಹ ಸಿಕ್ಕಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಬಲವಾದ ಏಟಿನಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಅದು ಕೊಲೆ ಎಂದು ಸ್ಪಷ್ಟಪವಾಗಿತ್ತು. ಈ ಮೃತ ಮಹಿಳೆ ಯಾರು? ಕೊಲೆ ಮಾಡಿದವರು ಯಾರು? ಎಂಬ ಪ್ರಶ್ನೆಗಳು ಮೂಡಿದ್ದವು.

ಇದನ್ನೂ ಓದಿ
ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಐಶ್ವರ್ಯಾ ಮಹಾದೇವ್ ನೂತನ ಮುಖ್ಯಸ್ಥೆ
ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಜಿಂಕೆ ಮಾಂಸ ಕಟ್​ ಮಾಡುತ್ತಿದ್ದವ ಅರೆಸ್ಟ್
ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಕಸದ ಲಾರಿಯಲ್ಲಿಟ್ಟು ಪರಾರಿ

ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಜೇನುಕುರುಬ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಸುರೇಶ್​ ಅಲಿಯಾಸ್ ಕುರುಬರ ಸುರೇಶ್ ಅವರು 2020ರ ನವೆಂಬರ್​​ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್​ ಎಂಬಾತನೇ ಕಾರಣ ಎಂದು ತಿಳಿಸಿದ್ದರು. ಬಳಿಕ, ಮಲ್ಲಿಗೆಯ ತಾಯಿ ಗೌರಿ ಅವರು ಮಗಳು ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಸುರೇಶ್​ ಅವರನ್ನೇ ಆರೋಪಿಯಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾಧಿಕಾರಿಗಳು ಕಟ್ಟು ಕಥೆ ಕಟ್ಟಿದ್ದರು. ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್ ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್​ಶೀಟ್​​ ಸಲ್ಲಿಸಿದ್ದರು.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್​​ನಲ್ಲಿದ್ದ ಆಶಾ ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ!

ಕೋರ್ಟ್​ನಲ್ಲಿ ಸತ್ಯ ಬಯಲು

ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ 9 ಜನ ಸಾಕ್ಷಿದಾರರ ವಿಚಾರಣೆಯೂ ನಡೆದಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ, ನಾನು (ಸುರೇಶ್) ನನ್ನ ಪತ್ನಿಯನ್ನು ಕೊಂದಿಲ್ಲ, ಆಕೆ ಬದುಕಿದ್ದಾಳೆ ಎಂದು ಸುರೇಶ್​ ಅವರು ಪದೇ ಪದೆ ಮನವಿ ಮಾಡುತ್ತಿದ್ದರು.

ಅಷ್ಟೇ ಅಲ್ಲದೆ ನಮ್ಮ ತಾಯಿ ಬದುಕಿದ್ದಾಳೆ, ನಮ್ಮ ತಾಯಿ ಸತ್ತಿಲ್ಲ ಎಂದು ಸುರೇಶ್​ ಮತ್ತು ಮಲ್ಲಿಗೆ ದಂಪತಿಯ ಮಕ್ಕಳಾದ ಕೃಷ್ಣ, ಕೀರ್ತಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಕ್ಕಪಕ್ಕದ ಮನೆಯವರೂ ಸಹಿತ ಮಲ್ಲಿಗೆ ಸತ್ತಿಲ್ಲ ಎಂದು ಸಾಕ್ಷ್ಯ ಹೇಳಿದ್ದರು.

ಕೊನೆಗೆ 2025ರ ಏಪ್ರಿಲ್ 2ರಂದು ಮಲ್ಲಿಗೆ ಜಡ್ಜ್ ಮುಂದೆ ಹಾಜರಾಗಿದ್ದರು. ಕೋರ್ಟ್​ನಲ್ಲಿ ಪೊಲೀಸರು ಹೇಳಿದ್ದು ಕಟ್ಟುಕತೆ ಎಂದು ಸಾಬೀತಾಗಿತ್ತು. ಆದರೆ, ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಸುರೇಶ್​ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ. ಇದೀಗ, ಸತ್ಯ ಹೊರ ಬಂದಿರುವುದರಿಂದ ಸುರೇಶ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುರೇಶ್ ವಿರುದ್ಧ ಸುಳ್ಳು ಕೇಸ್ ಹಾಕಿದ್ದ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Mon, 30 June 25