ಮೈಸೂರು, (ನವೆಂಬರ್ 25): ಜೆಡಿಎಸ್ ನಾಯಕರಾದ ಜಿಟಿ ದೇವೇಗೌಡ ಮತ್ತು ಸಾ.ರಾ ಮಹೇಶ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತೇನೂ ನಡೆಯುವುದಿಲ್ಲ. ನನ್ನಿಂದ ರಾಜಕೀಯವಾಗಿ ತೊಂದರೆ ಆಗಿದೆ ಎಂದು ಭಾವಿಸಿದ್ದರೆ ಆಣೆ ಪ್ರಮಾಣ ಮಾಡಲು ಚಾಮುಂಡಿಬೆಟ್ಟಕ್ಕೆ ಬರಲಿ ಎಂದು ಸಾ.ರಾ ಮಹೇಶ್ ಸವಾಲ್ ಹಾಕಿದ್ದರು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಜಿಟಿ ದೇವೇಗೌಡ, ಎಚ್.ಡಿ.ದೇವೆಗೌಡರು ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ನಾನು ಅಂದೆ ರಾಜಕಾರಣವನ್ನ ಬಿಟ್ಟುಬಿಡುತ್ತೇನೆ ಮಹೇಶ್ಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ, ಎಚ್.ಡಿ.ದೇವೆಗೌಡರು ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ನಾನು ಅಂದೆ ರಾಜಕಾರಣವನ್ನ ಬಿಟ್ಟುಬಿಡುತ್ತೇನೆ. ಸಾ.ರಾ.ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಚಾಮುಂಡಿಬೆಟ್ಟಕ್ಕೆ ಬಾ ಅಲ್ಲಿಗೆ ಬಾ ಅಂದರೆ ಹೋಗಲು ಆಗುತ್ತದ. ಈ ಹಿಂದೆ ವಿಶ್ವನಾಥ್ ಜೊತೆ ಚಾಮುಂಡಿಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು. ಆ ಕಥೆ ನನಗು ಆಗಬೇಕಾ ಎಂದು ಖಾರವಾಗಿ ಮಾತನಾಡಿದರು.
ಇದನ್ನೂ ಓದಿ: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡ್ತಿದ್ದಾರೆ: ಜಿಟಿ ದೇವೇಗೌಡ ವಾಗ್ದಾಳಿ
ನಾನು ಹೇಳುತ್ತಿರೋದೆ ಸತ್ಯ. ನಾನು ತಪ್ಪು ಮಾಡಿದ್ದರೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು ಮಾಡಿದ್ದೆ. ಅಂದು ಸಂಜೆಯೆ ನನ್ನ ತಾಯಿ ಬಳಿ ಹೋಗಿ ತಪ್ಪು ಒಪ್ಪುಕೊಂಡಿದ್ದೆ. ನಾನು ಯಾವುದಕ್ಕೂ ಹೆದರುವುದಿಲ್ಲ ಸುಳ್ಳು ಹೇಳುವವನು ಅಲ್ಲ. ಸುಮ್ಮನೆ ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ವಾಗ್ದಾಳಿ ನಡೆಸಿದರು.
ನನಗೆ ಯಾರೋ ಒಬ್ಬರ ಹೆಸರು ಇಟ್ಟುಕೊಂಡ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ. ಯಾರು ಇಲ್ಲದಿದ್ದರು ನಾನು ರಾಜಕಾರಣ ಮಾಡಿದ್ದೇನೆ. ನನಗೆ ರಾಜಕೀಯ ಮಾಡುವುದು ಗೊತ್ತು. ನಾನು ಯಾರ ಕತ್ತನ್ನು ಕೊಯ್ದಿಲ್ಲ. ನನ್ನನ್ನು ಯಾರು ಯಾವ ಪಕ್ಷಕ್ಕೂ ಕರೆ ತಂದಿಲ್ಲ. ನಾನು ಸ್ವಂತವಾಗಿ ರಾಜಕಾರಣ ಮಾಡಿದವನು ಎಂದು ವಿರೋಧಿಗಳಿಗೆ ಸಂದೇಶ ರವಾನಿಸಿದರು.
ಜೆಡಿಎಸ್ ನಲ್ಲಿ ನೋವು ನನಗೆ ಹೊಸದಲ್ಲ. ನನಗೆ ಹಲವು ಬಾರಿ ಜೆಡಿಎಸ್ ನಲ್ಲಿ ಇಂತಹ ನೋವು ಉಂಟಾಗಿದೆ. ಈಗಲೂ ಮತ್ತೊಂದು ನೋವು ಆಗುತ್ತಿದೆ. ಏನು ಮಾಡೋಣ. ನನಗೆ ಪದೇ ಪದೇ ಈ ರೀತಿ ಉಂಟಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಇದೇ ವೇಳೆ ಸಿ.ಎಂ ಇಬ್ರಾಹಿಂ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಇಬ್ರಾಹಿಂಗೆ ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟುವ ಉತ್ಸಾಹ ಇದೆ. ಅದನ್ನ ನನ್ನ ಬಳಿ ಹೇಳಿಕೊಂಡಿದ್ದಾರೆ. ರಾಜ್ಯ ಪ್ರವಾಸ ಮುಗಿಸಿ, ಮತ್ತೆ ಮಾತನಾಡುತ್ತೇನೆ ಎಂದು ಹೇಳಿ ಹೋಗಿದ್ದಾರೆ. ಶಾಸಕರನ್ನ ಕಟ್ಟಿಕೊಂಡು ಪಕ್ಷಗಳನ್ನ ಕಟ್ಟಲು ಆಗಲ್ಲ. ಪಕ್ಷ ಕಟ್ಟಲು ಕಾರ್ಯಕರ್ತರು ಬೇಕು. ನಾನು ಅವರು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೆ. ನಾನು ಇಂದಿನವರೆಗೂ ಯಾವ ಜೆಡಿಎಸ್ ಶಾಸಕರ ಜೊತೆಯು ಮಾತನಾಡಿಲ್ಲ. ಯಾರಿಗಾದ್ರು ನೋವಾಗಿದ್ದರೆ ಅವರಾಗೆ ಅವರೇ ಮಾತನಾಡಿದರೆ ಮಾತನಾಡುತ್ತೇನೆ. ನಾನಾಗೇ ನಾನು ಯಾರ ಜೊತೆಯು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ