Wayanad Landslide: ವಯನಾಡು ದುರಂತದಲ್ಲಿ ಪ್ರಾಣ ಬಿಟ್ಟವರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಸಿಎಂ ಸಿದ್ದರಾಮಯ್ಯ

| Updated By: ಆಯೇಷಾ ಬಾನು

Updated on: Aug 01, 2024 | 9:40 AM

ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ಮೃತಪಟ್ಟ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ನಿನ್ನೆ ದೂರವಾಣಿ ಮೂಲಕ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸಂತ್ರಸ್ಥರು ಸಿಎಂ ಬಳಿ ತಮ್ಮ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದಾರೆ.

ಮೈಸೂರು, ಆಗಸ್ಟ್.01: ಕೇರಳದ ವಯನಾಡಿನಲ್ಲಿ ನಡೆದ ಗುಡ್ಡ ಕುಸಿತ (Wayanad Landslide) ದುರಂತವೂ ಅನೇಕ ಬದುಕುಗಳನ್ನ ಕಸಿದುಕೊಂಡಿದೆ. ಜೀವನ ಕಟ್ಟಿಕೊಳ್ಳುವ ಆಸೆಯಿಂದ ಹುಟ್ಟೂರು ಬಿಟ್ಟು ವಯನಾಡಿನಲ್ಲಿ ನೆಲೆಸಿದ್ದ ಮೂವರು ಕನ್ನಡಿಗರು ಉಸಿರು ಚೆಲ್ಲಿದ್ದಾರೆ. ಹಾಗೂ 9 ಮಂದಿ ನಾಪತ್ತೆಯಾಗಿದ್ದಾರೆ. ಇತ್ತ ಮಕ್ಕಳ ದುರಂತ ಕಥೆ ಇಳಿಯುತ್ತಿದ್ದಂತೆ ಕರ್ನಾಟಕದಲ್ಲಿ ನೆಲೆಸಿರುವ ಹೆತ್ತವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ನಿವಾಸಿ ಮಾದೇವಿ ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ದೂರವಾಣಿ ಮೂಲಕ ತಮ್ಮ ಮಕ್ಕಳ ಧಾರುಣ ಅಂತ್ಯದ ಬಗ್ಗೆ ವಿವರಿಸುತ್ತ ಕಣ್ಣೀರು ಹಾಕಿರೋದು ಕಲ್ಲು ಹೃದಯವನ್ನೂ ಕರಗಿಸುವಂತಿದೆ.

ಕೇರಳದ ವಯನಾಡಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 300 ಗಡಿಯತ್ತ ಸಾಗಿದೆ. ಈ ಪೈಕಿ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್ 10 ಕನ್ನಡಿಗರು ಬಚಾವ್ ಆಗಿದ್ದಾರೆ. ಹುಟ್ಟೂರು ಬಿಟ್ಟು ಬದುಕು ಕಟ್ಟಿಕೊಳ್ಳಲು ಹೋಗಿದ್ದವರ ದುರಂತ ಅಂತ್ಯದಿಂದ ಕುಟುಂಬದವರು ದಿಗ್ಭ್ರಾಂತರಾಗಿದ್ದಾರೆ.

ಸಿಎಂ ಬಳಿ ಕೇರಳ ದುರಂತದ ಬಗ್ಗೆ ವಿವರಿಸಿದ ಸಂತ್ರಸ್ತೆ ಮಾದೇವಿ

ಇನ್ನು ವಯನಾಡಿನ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಹಾಗೂ ನಾಪತ್ತೆಯಾದ ಕನ್ನಡಿಗರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ನಿವಾಸಿ ಮಾದೇವಿ ಅವರು ಸಿಎಂ ಬಳಿ ತಮ್ಮ ದುಃಖ ಹೇಳುತ್ತ ಕಣ್ಣೀರು ಹಾಕಿದ್ದಾರೆ. ಎಲ್ಲಾ ನೀರು ಹೊತ್ತಕೊಂಡು ಹೊಯ್ತು ಸ್ವಾಮಿ. ನನ್ನ ಮಕ್ಕಳು‌ 9 ಜನ ಹೋದ್ರು. ಕಳೆದ 18 ವರ್ಷಗಳಿಂದ ಕೇರಳದ ವಯನಾಡು ಭಾಗದಲ್ಲಿ ಕೆಲಸ ಮಾಡ್ತಿದ್ರು ಎಂದು ಸಿಎಂಗೆ ದುರಂತದ ಬಗ್ಗೆ ವಿವರಿಸುತ್ತ ಸಂತ್ರಸ್ಥೆ ಮಾದೇವಿ ಕಣ್ಣೀರು ಹಾಕಿದ್ದಾರೆ. ಸದ್ಯ ಈಗ ಮಾದೇವಿ ಅವರು ಕೇರಳದ ನಿರಾಶ್ರಿತ ಕೇಂದ್ರದಲ್ಲಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ; ಸಾಲ ಮಾಡಿ ಕಟ್ಟಿದ್ದ ಸೂರು ವಯನಾಡು ಭೂಕುಸಿಕ್ಕೆ ಸರ್ವನಾಶ, ಮಗಳು ಅಳಿಯನ ಸಾವಿನ ಸುದ್ದಿ ಕೇಳಿ ಗಳಗಳನೆ ಅತ್ತ ತಂದೆ

ಮತ್ತೊಂದೆಡೆ ಮಂಡ್ಯ ನಿವಾಸಿ ಚೈತ್ರ ಎಂಬುವವರೊಂದಿಗೂ ಸಿಎಂ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಮೃತ ದೇಹಗಳನ್ನ ಪತ್ತೆ ಹಚ್ಚಲು ಕಷ್ಟವಾಗುತ್ತಿದೆ. ಅಧಿಕಾರಿಗಳನ್ನ ಕಳುಹಿಸಿಕೊಟ್ಟಿದ್ದೇನೆ. ನಿಮಗೆ ಸಹಾಯ ಮಾಡುತ್ತಾರೆ ಎಂದ ಸಿಎಂ ಸಾಂತ್ವಾನ ಮಾಡಿದ್ದು ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದ ಸಂತ್ರಸ್ಥರು ಮನವಿ ಮಾಡಿದ್ದಾರೆ.

ವಯನಾಡಿನ ಗುಡ್ಡ ಕುಸಿತ ಪ್ರಕರಣದಲ್ಲಿ ಮೈಸೂರಿನ ಟಿ.ನರಸೀಪುರದ ಮೂವರು ಮೃತಪಟ್ಟಿದ್ದು 9 ಮಂದಿ ನಾಪತ್ತೆಯಾಗಿದ್ದಾರೆ. ಮೂಲತಃ ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ನಿವಾಸಿಗಳಾದ ಸಾವಿತ್ರಿ, ಅಚ್ಚು, ಶ್ರೀಕುಟ್ಟಿ ಸಾವನ್ನಪ್ಪಿದ್ದಾರೆ. ಗುರುಮಲ್ಲ, ಸಾವಿತ್ರಿ, ಸಬೀತಾ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜಿತು, ದಿವ್ಯ, ರತ್ನ ನಾಪತ್ತೆಯಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:34 am, Thu, 1 August 24