ನಂಜನಗೂಡು: ಕಬಿನಿ ಬಲದಂಡೆ ನೀರಿನಿಂದ ಕೃಷಿ ಮಾಡ್ತಿದ್ದೇವೆ, ಪ್ರಾಣ ಬಿಟ್ಟರೂ ಅದನ್ನ ಕೈಗಾರಿಕೆಗಾಗಿ ಕೆಐಎಡಿಬಿಗೆ ಕೊಡುವುದಿಲ್ಲ- ರೊಚ್ಚಿಗೆದ್ದ ರೈತರು
KIADB: ಒಟ್ಟಾರೆ ಕೋಟಿ ಕೊಟ್ಟರೂ ನಾವು ಜಮೀನು ಬಿಡೋದಿಲ್ಲ ಅನ್ನೋದು ಗ್ರಾಮಸ್ಥರ ಪಟ್ಟಾಗಿದೆ. ಹೀಗಾಗಿ ಕೆಐಎಡಿಬಿ ಬಲವಂತವಾಗಿ ನಮ್ಮ ಜಮೀನನ್ನು ಪಡೆಯಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ
ಅದು ಫಲವತ್ತಾದ ಭೂಮಿ. ತಲೆತಲಾಂತರದಿಂದ ರೈತರು ಉಳುಮೆ ಮಾಡುತ್ತಿದ್ದ ಜಮೀನು. ಬದುಕು ಕಟ್ಟಿಕೊಟ್ಟಿದ್ದ ಭೂಮಿಗೆ ಇದೀಗ ಕಂಟಕ ಎದುರಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಭೂಮಿ ತಾಯಿಯ ಒಡಲು ಬಗೆಯಲು ಕೆಐಎಡಿಬಿ (KIADB) ಮುಂದಾಗಿರೋದು ರೈತರನ್ನು ರೊಚ್ಚಿಗೇಳಿಸಿದೆ. ಪ್ರಾಣ ಬೇಕಾದರೆ ಕೊಟ್ಟೇವು ಜಮೀನು ಬಿಡೆವು ಎಂದು ಆಕ್ರೋಶಭರಿತರಾಗಿ ಮಾತನಾಡುತ್ತಿರುವ ರೈತಾಪಿ ಜನ (Farmers) ಮೈಸೂರು ಜಿಲ್ಲೆ ನಂಜನಗೂಡು (Nanjangud) ತಾಲೂಕು, ಮುದ್ದನಹಳ್ಳಿ ಗ್ರಾಮಸ್ಥರು. ಇವರ ಈ ಆಕ್ರೋಶಕ್ಕೆ ಕಾರಣ ಕೆಐಎಡಿಬಿ ಅಧಿಕಾರಿಗಳು. ಹೌದು ಮುದ್ದನಹಳ್ಳಿ ಗ್ರಾಮದ ಸುಮಾರು 438 ಎಕರೆ ಜಮೀನನ್ನ (Land) ಕೈಗಾರಿಕೆಗಾಗಿ ಅಧಿಕಾರಿಗಳು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ರೈತರಿಗೆ ನೋಟಿಸ್ ಸಹ ನೀಡಲಾಗಿದೆ. ಆದರೆ ರೈತರು ಸುತಾರಾಂ ಜಮೀನು ಕೊಡಲು ಸಿದ್ದರಿಲ್ಲ. ಈ ಬಗ್ಗೆ ಈ ಹಿಂದೆ ನಡೆದ ಸಭೆ ಸಹ ಗದ್ದಲಕ್ಕೆ ಕಾರಣವಾಗಿತ್ತು.
ಇಲ್ಲಿ ಸುಮಾರು 250 ಕುಟುಂಬಗಳು ಇವೆ. ಭೂಮಿಯನ್ನೇ ಆಶ್ರಯಿಸಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿವೆ. ಈ ಭೂಮಿ ಸಹ ಫಲವತ್ತಾಗಿದ್ದು ಇಲ್ಲಿ ಕಬ್ಬು, ಬಾಳೆ, ತೆಂಗು, ತರಕಾರಿ, ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಹೈನುಗಾರಿಕೆ ಸಹಾ ಇದೆ. ಸಾಕಷ್ಟು ಕೊಳವೆ ಬಾವಿಗಳು ಇಲ್ಲಿವೆ. ಇಲ್ಲಿ ಬೋರ್ ತೆಗೆದರೆ 50 ರಿಂದ 70 ಅಡಿಗೆ ನೀರು ಸಿಗುತ್ತಿದೆ. ಕಬಿನಿ ಬಲದಂಡೆ ನಾಲೆಯ ನೀರಿನಿಂದ ಕೃಷಿ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕೆಐಎಡಿಬಿ ಅಧಿಕಾರಿಗಳು ಫಲವತ್ತಾದ ಜಮೀನನ್ನ ವಶಪಡಿಸಿಕೊಳ್ಳಲು ಮುಂದಾಗಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಎಐಡಿಬಿ ಅಧಿಕಾರಿಗಳು ಜಮೀನು ವಶಕ್ಕೆ ಪಡೆದು ನಂತರ ಇಲ್ಲಿ ಅಧಿಕೃತವಾಗಿ ಏನು ಮಾಡುತ್ತೇವೆ ಅಂತಾ ಹೇಳಿಲ್ಲ. ಜೊತೆಗೆ ಈಗಾಗಲೇ ಹಿಮ್ಮಾವು ತಾಂಡ್ಯ ಅಡಕನಹಳ್ಳಿ ಹುಂಡಿಯಲ್ಲಿ ವಶಕ್ಕೆ ಪಡೆದಿರುವ 1,800 ಎಕರೆಯಲ್ಲಿ 450 ಎಕರೆ ಮಾತ್ರ ಕೈಗಾರಿಕೆ ಮಾಡಲಾಗಿದೆ. ಉಳಿದ ಜಮೀನು ಹಾಗೆಯೇ ಇದೆ. ಹೀಗಾಗಿ ಮೊದಲು ಅಲ್ಲಿ ಕೈಗಾರಿಕೆ ಸ್ಥಾಪಿಸಲಿ ನಂತರ ನಮ್ಮ ಗ್ರಾಮಕ್ಕೆ ಬರಲಿ ಅಂತ ಗ್ರಾಮಸ್ಥರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ವಿಚಾರವಾಗಿ ಶಾಸಕ ಹರ್ಷವರ್ಧನ್ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಹರಿಹಾಯ್ದಿದ್ದಾರೆ ಗ್ರಾಮಸ್ಥರು.
ಒಟ್ಟಾರೆ ಕೋಟಿ ಕೊಟ್ಟರೂ ನಾವು ಜಮೀನು ಬಿಡೋದಿಲ್ಲ ಅನ್ನೋದು ಗ್ರಾಮಸ್ಥರ ಪಟ್ಟಾಗಿದೆ. ಹೀಗಾಗಿ ಬಲವಂತವಾಗಿ ನಮ್ಮ ಜಮೀನನ್ನು ಪಡೆಯಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ
ವರದಿ: ರಾಮ್, ಟಿವಿ 9, ಮೈಸೂರು
Published On - 4:23 pm, Sat, 4 February 23