
ಮೈಸೂರು: ಚಾಮುಂಡಿ ಬೆಟ್ಟದ (Chamundi Hill) ನಂದಿ ಮಾರ್ಗದಲ್ಲಿ ಮತ್ತೆ ಭೂ ಕುಸಿತ (Landslide) ಉಂಟಾಗಿರುವಂತಹ ಘಟನೆ ನಡೆದಿದೆ. ಮಳೆಯಿಂದ ವೀಕ್ಷಣಾ ಗೋಪುರ ಪಕ್ಕದ ರಸ್ತೆ ಕುಸಿದಿದೆ. ಮೈಸೂರಿನಲ್ಲಿ ಕಳೆದ 3 ದಿನಗಳಿಂದ ಮಳೆ ಸುರಿಯುತ್ತಿದೆ. ಒಂದು ಕಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ, ಮತ್ತೊಂದೆಡೆ ಭೂ ಕುಸಿತವಾಗುತ್ತಿದೆ. ಈ ಹಿಂದೆಯೂ ಮಳೆಯಿಂದಾಗಿ ರಸ್ತೆ ಕುಸಿದಿತ್ತು. ಕುಸಿತವಾದ ಜೊತೆಗೆ ಮತ್ತೊಂದಿಷ್ಟು ಭಾಗದ ರಸ್ತೆಯು ಬಿರುಕು ಬಿಟ್ಟಿರುವ ಕಾರಣ ಇದೇ ಭಾಗದಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಯಲಕ್ಷ್ಮಿಪುರಂನ ಹಲವೆಡೆ ದೊಡ್ಡ ಗಾತ್ರದ ಮರಗಳು ಬುಡಸಮೇತ ಮನೆಗಳ ಮೇಲೆ ಉರುಳಿ ಬಿದ್ದಿವೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಕೂಡ ಮುರಿದು ನೆಲಕಚ್ಚಿವೆ.
ಮಳೆಯಿಂದಾಗಿ ಕಾಲೇಜು ಗೋಡೆ ಕುಸಿತ
ಇನ್ನು ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ನೂರು ವರ್ಷ ಹಳೆಯದಾದ ಮೈಸೂರು ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನ ಕಟ್ಟಡದ ಗೋಡೆ ಕುಸಿದು ಬಿದಿದ್ದೆ. ಘಟನೆ ವೇಳೆ ಯಾರು ಇಲ್ಲದ ಕಾರಣ ಅಪಾಯ ತಪ್ಪಿದೆ. ಕಟ್ಟಡದ ಗೋಡೆ ಕುಸಿದು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಅರಮನೆಯ ಕೋಟೆ ಗೋಡೆ ಕುಸಿತಕ್ಕೆ ಮಳೆ ಹಾಗೂ ಸಿಡಿಮದ್ದು ತಾಲೀಮು ಕಾರಣ
ಐತಿಹಾಸಿಕ ಮೈಸೂರು ಅರಮನೆಗೆ (Mysuru Palace) ಹೊಂದಿಕೊಂಡಿರುವ ಕೋಟೆ ಮಾರಮ್ಮ ದೇಗುಲದ ಹಿಂಭಾಗದ ಗೋಡೆ ಕುಸಿದಿತ್ತು. ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಕೋಟೆಯ ಗೋಡೆ ಕುಸಿದು ಬಿದ್ದಿತ್ತು. ಅಂದಿನ ಅರಸರ ಕಾಲದಲ್ಲಿ ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು, ಅರಮನೆಯ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಕೋಟೆಯ ಗೋಡೆ ಕುಸಿದಿತ್ತು. ಸದ್ಯ ಕುಸಿದಿರುವ ಭಾಗಕ್ಕೆ ಟಾರ್ಪಾಲ್ ಹೊದಿಸಲಾಗಿದೆ. ನೂರಕ್ಕೂ ಹೆಚ್ಚು ಹಳೆಯ ಕಾಲದ ಕಲ್ಲುಗಳು ನೆಲಕ್ಕೆ ಉರುಳಿದ್ದವು. ಗೋಡೆ ಕುಸಿತಕ್ಕೆ ಮಳೆ ಹಾಗೂ ಸಿಡಿಮದ್ದು ತಾಲೀಮು ಕಾರಣ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಪ್ರತಿವರ್ಷ ದಸರಾ ಮಹೋತ್ಸವದ ವೇಳೆ ಅರಮನೆಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ತಾಲೀಮು ನಡೆಯುತ್ತದೆ. ಹೀಗಾಗಿ ಫಿರಂಗಿಯ ಶಬ್ದ ಮತ್ತು ಮಳೆಯಿಂದ ಕೋಟೆ ಗೋಡೆಯಲ್ಲಿ ಬಿರುಕು ಬಿದ್ದಿದೆ.
ಅರಮನೆಯ ಮುಖ್ಯ ಕಟ್ಟಡ, ಅರಮನೆಯ ಆವರಣದಲ್ಲಿ ಬರುವ ಎಲ್ಲಾ ದೇವಸ್ಥಾನಗಳು ತುಂಬಾ ಹಳೆಯ ಕಟ್ಟಡಗಳಾಗಿದ್ದು, ಸುರಕ್ಷತೆಯ ಹಿತದೃಷ್ಟಿಯಿಂದ ಸಿಡಿಮದ್ದು ಸಿಡಿಸುವ ತಾಲೀಮು ಬೇರೆಡೆ ವರ್ಗಾಯಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಮತ್ತು ಕೋಟೆ ಗೋಡೆ ಕುಸಿತ ದುರಸ್ತಿ ಕಾರ್ಯ ಆರಂಭಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.