ಮೈಸೂರು, ಅ.27: ನಾಳೆ ಚಂದ್ರ ಗ್ರಹಣ ಹಿನ್ನೆಲೆ (Lunar Eclipse) ರಾಜ್ಯದ ಕೆಲ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜಾ, ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮೈಸೂರು ಚಾಮುಂಡೇಶ್ವರಿ ದೇಗುಲ (Mysuru Chamundeshwari Temple), ಕುಕ್ಕೆ ಸುಬ್ರಹ್ಮಣ್ಯ(Kukke Subramanya Temple), ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (Kateel Shri Durgaparameshwari Temple) ಸೇರಿದಂತೆ ಹಲವು ದೇವಸ್ಥಾನಗಳ ಸಮಯ ಬದಲಾವಣೆ ಮಾಡಲಾಗಿದೆ. ನಾಳೆ ಸಂಜೆ 6ರ ಬಳಿಕ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ರಾಹು ಗ್ರಸ್ತ ಚಂದ್ರ ಗ್ರಹಣ ಎಂದು ಹೇಳಲಾಗುವ ಚಂದ್ರ ಗ್ರಹಣವು ಅಕ್ಟೋಬರ್ 28ರ ಶನಿವಾರ ರಾತ್ರಿ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣ. ಹೀಗಾಗಿ ಪ್ರಸಿದ್ಧ ದೇವಸ್ಥಾನಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ.28ರ ಶನಿವಾರ ಸಂಜೆ 6ರ ಬಳಿಕ ನಾಡ ದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಸಂಜೆ 5ಗಂಟೆಗೆ ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತೆ. ತೆಪ್ಪೋತ್ಸವ ಮುಗಿಸಿದ ಬಳಿಕ ದೇಗುಲಕ್ಕೆ ಉತ್ಸವಮೂರ್ತಿ ವಾಪಸ್ ತರಲಾಗುತ್ತೆ. ನಂತರ ತಾಯಿ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಭಾನುವಾರ ಬೆಳಗ್ಗೆ 7.30ಕ್ಕೆ ಮತ್ತೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಅಧಿಕಾರಿ ಸಿ.ಜಿ.ಕೃಷ್ಣ ಮಾಹಿತಿ ನೀಡಿದ್ದಾರೆ. ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹದಿನೈದು ದಿನದ ಅಂತರದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ; ಏನು ಇದರ ಪರಿಣಾಮ?
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ಮುಕ್ತಾಯವಾಗಲಿದ್ದು ಬಳಿಕ ದೇವರ ದರ್ಶನ ಮತ್ತು ರಾತ್ರಿಯ ಅನ್ನದಾನ ಇರುವುದಿಲ್ಲ. ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆಯು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ರಾತ್ರಿಯ ಮಹಾಪೂಜೆ ಸಂಜೆ 6.30ರ ಒಳಗೆ ಮುಗಿಯುತ್ತದೆ. ಆದರೆ ದರ್ಶನ ಸಮಯದಲ್ಲಿ ಬದಲಾವಣೆ ಇಲ್ಲ. ಗ್ರಹಣ ಸಮಯಕ್ಕೆ ದೇವಿಯ ದರ್ಶನಕ್ಕೆ ತುಪ್ಪ ಎಣ್ಣೆ ಸಮರ್ಪಣೆಗೆ ಅವಕಾಶ ಇದೆ ಎನ್ನಲಾಗಿದೆ.
ಉಡುಪಿಯ ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ದರ್ಶನಕ್ಕೆ ಸಮಯ ಬದಲಾವಣೆ ಮಾಡಲಾಗಿದೆ. ಅ.28ರ ಸಂಜೆ 4 ಗಂಟೆಯ ನಂತರ ಊಟದ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ರಾತ್ರಿ ಮಠಕ್ಕೆ ಬಂದ ಭಕ್ತರಿಗೆ ನೀಡುತ್ತಿದ್ದ ಅನ್ನ ಪ್ರಸಾದ ರದ್ದಿಗೆ ಆದೇಶ ನೀಡಲಾಗಿದೆ. ಮಠಾಧೀಶರು ಉಪವಾಸ ಕೈಗೊಳ್ಳುವ ಮೂಲಕ ವ್ರತ ಆಚರಿಸಲಿದ್ದಾರೆ. ಮಠದ ಒಳಗಿರುವ ಮುಖ್ಯಪ್ರಾಣ ದೇವರಿಗೆ ರಂಗ ಪೂಜೆ ಇರುವುದಿಲ್ಲ. ಆದರೆ ಭೋಜನಾಲಯದ ಮುಖ್ಯಪ್ರಾಣ ದೇವರಿಗೆ ಶನಿವಾರ ಸಂಜೆ ರಂಗ ಪೂಜೆ ಇರುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ