ಮೈಸೂರು: ಹಿಜಾಬ್ ಧರಿಸಿಯೇ (hijab controversy) ಅಸೆಂಬ್ಲಿ ಅಧಿವೇಶನಕ್ಕೆ ಬರುವೆ, ಯಾರಿಗಾದರೂ ಧೈರ್ಯವಿದ್ರೆ ತಡೆಯಲಿ ಎಂದು ಕಲಬುರಗಿ ಶಾಸಕಿ ಖನೀಜ್ ಫಾತೀಮಾ (kaneez fatima) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಕೆ ಎಸ್ ಈಶ್ವರಪ್ಪ ಹಿಜಾಬ್ ಹಾಕಿಕೊಂಡು ಅಧಿವೇಶನಕ್ಕೆ ಬರುವುದಲ್ಲ. ನೀವು ಮೊದಲು ಮಸೀದಿಗೆ ಹೋಗಿ, ದಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕೊಡಿಸಿ ಶಾಸಕಿಗೆ ಸವಾಲು ಹಾಕಿದ್ದಾರೆ. ನಾವು ಶಾಲೆಗೆ ಮಾತ್ರ ಹಿಜಾಬ್ ನಿಷೇಧಿಸಿದ್ದೇವೆ. ಹೊರಗಡೆಗೆ ನಿಷೇಧ ಮಾಡಿಲ್ಲ. ಎಲ್ಲಾ ಕಡೆ ಅದನ್ನು ಹಾಕಿಕೊಂಡು ಹೋಗಬಹುದು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಹಿಜಾಬ್ ವಿಚಾರದಲ್ಲಿ ಎಂ.ಎಲ್.ಸಿ. ಸಿಎಂ ಇಬ್ರಾಹಿಂ ಹೇಳಿಕೆ ವಿಚಾರವನ್ನೂ ಪ್ರಸ್ತಾಪಿಸಿದ ಸಚಿವ ಕೆ ಎಸ್ ಈಶ್ವರಪ್ಪ ಇದು ವಿಕೃತಿಯಿಂದ ಕೂಡಿದ ಹೇಳಿಕೆ. ಇದು ಮುಸ್ಲಿಂ ಮಹಿಳೆಯರಿಗೆ ಮಾಡಿದ ಅವಮಾನ. ಅವರ ಮುಖ ನೋಡಲು ಹಿಜಾಬ್ ತೆಗೆಯಬೇಕಾ? ಇಬ್ರಾಹಿಂ ಅವರ ಈ ಹೇಳಿಕೆ ಯಾರೂ ಒಪ್ಪುವಂತಹದ್ದಲ್ಲ ಎಂದು ಮೈಸೂರಿನಲ್ಲಿ ಈಶ್ವರಪ್ಪ (ks eshwarappa) ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ:
ರಾಜ್ಯದಲ್ಲಿ ಹಿಜಾಬ್ ವಿವಾದ/ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ. ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ. ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಸಿದ್ದರಾಮಯ್ಯ ಸಿಎಂ ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋತರು. ಈಗ ಅಲ್ಲಿಂದಲೇ ಹಿಜಾಬ್ ವಿವಾದವಾಗಿದೆ. ಹಿಜಾಬ್ ವಿವಾದದ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷ ಇದೆ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ಕೆಲಸ ನಡೆದಿದೆ. ಕಾಂಗ್ರೆಸ್ ಮುಖಂಡರು ಮನಸು ಮಾಡಿದ್ದರೆ ಸಮಸ್ಯೆ ಬಗರಹರಿಸಬಹುದಿತ್ತು. ಆ ಆರೂ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ನೀಡಬಹುದಿತ್ತು. ಆದರೆ ಕಾಂಗ್ರೆಸ್‌ಗೆ ಮುಸ್ಲಿಂ ಮತಗಳೇ ಮುಖ್ಯವಾದವು. ಕಾಂಗ್ರೆಸ್ ಎಂದಿನಂತೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹಿಂದೆ ವೀರಶೈವ ಲಿಂಗಾಯತ ಧರ್ಮ್, ನಂತರ ಮತಾಂತರದ ವಿಷಯ, ಗೋಹತ್ಯೆ. ಇದೀಗ ಹಿಜಾಬ್ ಅವರ ರಾಜಕೀಯ ವಿಚಾರವಾಗಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್, ಆದರೆ ಅದರ ಅಪವಾದ ನಮ್ಮ ಮೇಲೆ ಎಂದು ಮೈಸೂರಿನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸಿಎಂ ಆಗಿದ್ದ ಸಿದ್ದರಾಮಯ್ಯಗೆ ನ್ಯಾಯಾಲಯದ ಆದೇಶ ಗೊತ್ತಿಲ್ಲವಾ?
ರಾಜ್ಯದಲ್ಲಿ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದವೂ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ತಾನು ಎರಡನೇ ಅಂಬೇಡ್ಕರ್ ಅಂತಾ ಹೇಳಿಕೊಳ್ಳುತ್ತಾರೆ. ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲವಾ? ಸಿಎಂ ಆಗಿದ್ದವರಿಗೆ ನ್ಯಾಯಾಲಯದ ಆದೇಶ ಕಾನೂನು ಗೊತ್ತಿಲ್ಲವಾ? ಕೇರಳದ ಹೈಕೋರ್ಟ್ ಏನು ಹೇಳಿದೆ ಎಂಬುದನ್ನು ಸಿದ್ದರಾಮಯ್ಯ ಓದಿ ಕೊಳ್ಳಲಿ. ಸರ್ಕಾರದ ಆದೇಶ ಮಾಡಿದೆ, ಈ ಬಗ್ಗೆ ಕಾಂಗ್ರೆಸ್ ನಿಲುವ ಸ್ಪಷ್ಟನೆ ಮಾಡಲಿ. ಕಾನೂನು ಪಾಲನೆ ಮಾಡಬೇಕೋ ಬೇಡವೋ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಮೈಸೂರಿನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:
ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?
Published On - 8:34 am, Tue, 8 February 22