ಗಣರಾಜ್ಯೋತ್ಸವದ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ್ದ ಪ್ರಮೀಳಾ ಕುವರ್​ಗೆ ಯುದ್ದ ವಿಮಾನದ ಪೈಲೆಟ್ ಆಗುವ ಕನಸು

ಸಾಂಸ್ಕೃತಿಕ ನಗರಿ ಮೈಸೂರಿನ ಗೌರವ ಹೆಚ್ಚಿಸಿದ ಪ್ರಮೀಳಾಗೆ ಭಾರತೀಯ ಸೇನೆಯ ಪೈಲೆಟ್ ಆಗುವ ಆಸೆಯಿದೆ. ಇದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರುವ ಪ್ರಮೀಳಾ ಅದಕ್ಕೆ ಬೇಕಾದ ಅಗತ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ.

ಗಣರಾಜ್ಯೋತ್ಸವದ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ್ದ ಪ್ರಮೀಳಾ ಕುವರ್​ಗೆ ಯುದ್ದ ವಿಮಾನದ ಪೈಲೆಟ್ ಆಗುವ ಕನಸು
ಪ್ರಮೀಳಾ ಕುವರ್
TV9kannada Web Team

| Edited By: Ayesha Banu

Feb 07, 2022 | 3:25 PM

ಮೈಸೂರು: ಜನವರಿ 26ರಂದು ದೆಹಲಿಯಲ್ಲಿ ನಡೆದ 73ನೇ ಗಣರಾಜ್ಯೋತ್ಸವದ (Republic Day) ಐತಿಹಾಸಿಕ ಪರೇಡ್ನಲ್ಲಿ (Parade) ಭಾಗವಹಿಸಿದ್ದ ಎನ್ಸಿಸಿ (NCC) ತಂಡವನ್ನು ಮುನ್ನಡೆಸಿದ್ದ ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್ ಇಂದು ಟಿವಿ9 ಜೊತೆ ಮಾತನಾಡುತ್ತ ನಾನು ಯುದ್ದ ವಿಮಾನದ ಪೈಲೆಟ್ ಆಗುತ್ತೇನೆ ಎಂದು ತಮ್ಮ ಗುರಿಯನ್ನು ವ್ಯಕ್ತಪಡಿಸಿದ್ದಾರೆ.

ಜನವರಿ 26 ದೇಶದ‌ ಜನರ ಪಾಲಿನ ಹೆಮ್ಮೆಯ ದಿನ. ನಮ್ಮ ಸಂವಿಧಾನ ಜಾರಿಗೆ ಬಂದ‌ ಸುದಿ‌ನ. ಇದನ್ನು ದೇಶದಾದ್ಯಂತ ನಾಡಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಸಡಗರ ಸಂಭ್ರಮಕ್ಕೆ ತನ್ನದೇ ಆದ ಮಹತ್ವವಿದೆ. ದೆಹಲಿಯ ರಾಜಪಥ್ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ ವಿಶ್ವದ ಗಮನ ಸೆಳೆಯುತ್ತದೆ. ದೇಶದ ಸೈನಿಕರು, ದೇಶದ ವಿವಿಧ ರಾಜ್ಯದ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು, ಯುದ್ಧ ಟ್ಯಾಂಕರ್‌ಗಳು ಎನ್ಸಿಸಿ ಸೇರಿ ವಿವಿಧ ತುಕಡಿಗಳ ಶಿಸ್ತುಬದ್ದ ಮಾರ್ಚ್‌ ಫಾಸ್ಟ್ ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಪ್ರಮುಖ ಪೆರೇಡ್‌ನಲ್ಲಿ ಈ ಬಾರಿ ಎನ್ಸಿಸಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕನ್ನಡತಿಯೊಬ್ಬರಿಗೆ ಸಿಕ್ಕಿದ್ದು ನಿಜಕ್ಕೂ ಕನ್ನಡಿಗರ ಪಾಲಿಗೆ ಹೆಮ್ಮೆ. ಹೌದು ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆಯ ಕುವರಿ ಪ್ರಮೀಳಾ ಕುವರ್ ಈ ಬಾರಿ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ NCC ನೇತೃತ್ವ ವಹಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಪ್ರಮೀಳಾ ಕುವರ್ ಮೈಸೂರಿನ ವಿವಿ ಮೊಹಲ್ಲಾದ ನಿವಾಸಿ. ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಪ್ರಮೀಳಾ ಅವರು ಪ್ರತಾಪ್ ಸಿಂಗ್ ಪುಷ್ಪಾ ಕುವರ್ ಅವರ ಪುತ್ರಿ. ಪ್ರಮೀಳಾ ಮಹಾರಾಣಿ ಕಾಲೇಜಿನಲ್ಲಿ BSc ಓದುತ್ತಿದ್ದಾರೆ ಹಾಗೂ ಜಯಲಕ್ಷ್ಮಿಪುರಂನ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಕೆಡೆಟ್ ಆಗಿದ್ದಾರೆ. ಪ್ರಮೀಳಾ ಮೂಲತಃ ರಾಜಸ್ಥಾನದವರು. ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ಪ್ರಮೀಳಾಗೆ ಚಿಕ್ಕಂದಿನಿಂದಲೂ ಪೆರೇಡ್ ಮೆರವಣಿಗೆ ಅಂದರೆ ಅಚ್ಚು ಮೆಚ್ಚು. ಇದಕ್ಕೆ ಕಾರಣವಾಗಿದ್ದು ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ. ತಂದೆ ತಾಯಿಯ ಜೊತೆ ದಸರಾ ಜಂಬೂಸವಾರಿ ಮೆರವಣಿಗೆ ನೋಡಲು ಹೋಗುತ್ತಿದ್ದ ಪ್ರಮೀಳಾಗೆ ಮೆರವಣಿಗೆಯಲ್ಲಿ ಭಾಗಿಯಾಗುತ್ತಿದ್ದ ಪೊಲೀಸರು, ಎನ್ಸಿಸಿ ಕೆಡೆಟ್‌ಗಳು ವಿದ್ಯಾರ್ಥಿಗಳನ್ನು ನೋಡುವುದು ಖುಷಿ. ಅವರನ್ನು ನೋಡಿ ಬಂದ ದಿನದಿಂದ ಪ್ರಮೀಳಾ ತಾನು‌ ಅವರಂತೆ ಆಗಬೇಕು ಅಂತಾ ಪಣತೊಟ್ಟಿದ್ದರು. ತನ್ನ ಆಸೆಯನ್ನು ಅಪ್ಪ ಅಮ್ಮನ ಬಳಿ ಹೇಳಿಕೊಂಡರು. ಅಪ್ಪ ಅಮ್ಮ ಮಗಳ ಆಸೆಗೆ ನೀರೆರೆದು ಪೋಷಿಸಿದರು. ಮಗಳನನ್ನು ಸ್ಕೌಟ್ ಅಂಡ್ ಗೈಡ್ಸ್‌ಗೆ ಸೇರಿಸಿದರು.

ರಾಜಫಥಕ್ಕೆ ರಹದಾರಿಯಾದ ಅಚಲ ವಿಶ್ವಾಸ, ಶಿಸ್ತು ಇಂದು ಜಗತ್ತಿ‌ನ ಗಮನ ಸೆಳೆದ ಪ್ರತಿಷ್ಠಿತ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಪ್ರಮೀಳಾ ಯಶಸ್ವಿಯಾಗಿ ಎನ್ಸಿಸಿ ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅದಕ್ಕಾಗಿ ಅವರು ಸವೆಸಿದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕಠಿಣಾತಿ ಕಠಿಣ ಸವಾಲುಗಳನ್ನು ಎದುರಿಸಿ‌ ಪ್ರಮೀಳಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಮೀಳಾ ಸ್ಕೌಟ್ ಅಂಡ್ ಗೈಡ್ಸ್‌ನಲ್ಲಿದ್ದಾಗಲೇ ಶಿಸ್ತನ್ನು ಮೈ ಗೂಡಿಸಿಕೊಂಡಿದ್ದರು. ಅದಾದ ನಂತರ ಎನ್ಸಿಸಿಗೆ ಸೇರ್ಪಡೆಯಾದರು. ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಎನ್ಸಿಸಿ ತಂಡಕ್ಕೆ ಸೇರ್ಪಡೆಯಾದರು. ಸದಾ ಕಾಲ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮೀಳಾಗೆ ಎನ್ಸಿಸಿ ಸೇರಿದ ನಂತರ ಉತ್ತಮವಾದ ಅವಕಾಶಗಳು ಒಲಿದು ಬಂದವು. ಬಂದ ಅವಕಾಶಗಳನ್ನು ಪ್ರಮೀಳಾ ಸಮರ್ಥವಾಗಿ ಬಳಸಿಕೊಂಡರು. ಮಡಿಕೇರಿ‌ ಸೇರಿ ಎತ್ತರದ ಬೆಟ್ಟ ಗುಡ್ಡ ಕಾಡುಗಳಿಗೆ ಚಾರಣ ಹೊರಟಾಗ ಎಲ್ಲರದಲ್ಲೂ ಪ್ರಮೀಳಾ‌ ಮುಂದೆ ಇರುತ್ತಿದ್ದರು. ಈಕೆಯ ಆಸಕ್ತಿ ಬದ್ದತೆ ಗಮನಿಸಿದ‌ ಅಧಿಕಾರಿಗಳು ಈಕೆಯನ್ನು ಹೊರಗಿನಿಂದ ಬರುವ ಎನ್ಸಿಸಿಯ ಕೆಡೆಟ್‌ಗಳು ಹಾಗೂ ಅಧಿಕಾರಿಗಳ ಉಸ್ತುವಾರಿ ವಹಿಸುವ ಜವಾಬ್ದಾರಿ‌ ನೀಡಿದರು. ಈ ವೇಳೆ ಪ್ರಮೀಳಾ ಭಾಷಾ ಕೌಶಲ್ಯ ಸಹಾ ಆಕೆಯ ಸಹಾಯಕ್ಕೆ ಬಂತು. ನಿರಾಯಾಸವಾಗಿ ಕನ್ನಡ ಹಿಂದಿ ಇಂಗ್ಲಿಷ್ ಮಾತನಾಡುವ ಪ್ರಮೀಳಾ ಬಹು ಬೇಗ ದೆಹಲಿಯಿಂದ ಬರುತ್ತಿದ್ದ ಎನ್ಸಿಸಿ ಹಿರಿಯ ಅಧಿಕಾರಿಗಳ‌ ನೆಚ್ಚಿನ ಕೆಡೆಟ್ ಆಗಿದ್ದಳು.

ಗಣರಾಜ್ಯೋತ್ಸವ ಪೆರೇಡ್ ಆಯ್ಕೆ -ಸಹಕಾರಿಯಾಯ್ತು ಕಮಾಂಡಿಂಗ್ ಶೈಲಿ ಅದಾಗಲೇ ದಸರಾ ಜಂಬೂಸವಾರಿ ಮೆರವಣಿಗೆ, ದಸರಾ ಪಂಜಿನ ಕವಾಯತು ಮೆರವಣಿಗೆ ಸೇರಿ ಹಲವು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಪ್ರಮೀಳಾಗೆ ದೇಶದ ಅತ್ಯುನ್ನತ ಪೆರೇಡ್‌ ಆದ ಗಣರಾಜ್ಯೋತ್ಸವದ‌ ಪೆರೇಡ್‌ನಲ್ಲಿ ಭಾಗವಹಿಸಬೇಕೆಂಬ ಮಹದಾಶೆಯಿತ್ತು. ಆದರೆ ಆ ಪೆರೇಡ್‌ನ ನಾಯಕತ್ವ ಸಿಗುತ್ತದೆ ಅಂತಾ ಆಕೆ ಕನಸು‌ ಮನಸಿನಲ್ಲೂ ಯೋಚಿಸಿರಲಿಲ್ಲ. ತನ್ನ ಪಾಡಿಗೆ ತಾನು ತನ್ನ ವಿದ್ಯಾಭ್ಯಾಸ ಹಾಗೂ ಎನ್ಸಿಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದರ ನಡುವೆ ಗಣರಾಜ್ಯೋತ್ಸವದ‌ ಪೆರೇಡ್‌ಗಾಗಿ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ಮೊದಲ ಆಯ್ಕೆಯ ಪ್ರಕ್ರಿಯೆ ಮೈಸೂರು ಮಾನಸ ಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿವಿಯ ಆವರಣದಲ್ಲಿ ನಡೆಯಿತು. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಸೇರಿ ಸುಮಾರು 100ಕ್ಕೂ ಹೆಚ್ಚು ಕೆಡೆಟ್‌ಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮೊದಲು ಪ್ರಮೀಳಾ ಹಾಗೂ ಮತ್ತಷ್ಟು ಯುವತಿಯರು ಅಲ್ಲಿ ಆಯ್ಕೆಯಾದರು. ತದ ನಂತರ ಮಂಡ್ಯ ಜಿಲ್ಲೆ ಮಳವಳ್ಳಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂತಿಮ ಹಂತದ ಆಯ್ಕೆ ನಡೆಯಿತು. ದೆಹಲಿಯ ಹಿರಿಯ ಅಧಿಕಾರಿಗಳು ಆಯ್ಕೆ‌ ಪ್ರಕ್ರಿಯೆಗೆ ಆಗಮಿಸಿದ್ದರು. ಅವರೆಲ್ಲರಿಗೂ ಪ್ರಮೀಳಾ ಅವರ ಶಿಸ್ತು ಸಂಯಮ ಹಾಗೂ ಇದೆಲ್ಲಕ್ಕಿಂದ ಹೆಚ್ಚಾಗಿ ಆಕೆ ನೀಡುತ್ತಿದ್ದ ಕಮಾಂಡಿಗ್ ಶೈಲಿ ಮತ್ತು ಆಕೆಯ ಆತ್ಮ ವಿಶ್ವಾಸ ಗಮನ ಸೆಳೆಯಿತು. ಇದೆಲ್ಲದರ ಪರಿಣಾಮವಾಗಿ ಆಕೆಯನ್ನು ಕರ್ನಾಟಕ ಗೋವಾ ರಾಜ್ಯದ ಕಮಾಂಡರ್ ಆಗಿ ಆಯ್ಕೆ‌ ಮಾಡಲಾಯಿತು. ಜೊತೆಗೆ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿದ್ದ ದೇಶದ ವಿವಿಧ ರಾಜ್ಯಗಳ 125 ಕೆಡೆಟ್‌ಗಳನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಯ್ತು. 17 ಎನ್ಸಿಸಿ ಬೆಟಾಲಿಯನ್‌ಗೆ ಕಮಾಂಡಿಂಗ್ ಡೈರೆಕ್ಟರ್ ಆಗಿ ನೇಮಿಸಲಾಯ್ತು.

NCC Senior Under Officer Pramila Kunawar

ಎನ್​ಸಿಸಿ ಸೀನಿಯರ್ ಅಂಡರ್​ ಆಫೀಸರ್ ಪ್ರಮೀಳಾ ಕುನಾವರ್

ಚಹಾ ಮಾರಾಟ ಮಾಡುವವರ ಮಗಳು -ಪೈಲೆಟ್ ಆಗುವ ಕನಸು ಗಣರಾಜ್ಯೋತ್ಸವದ‌ ಪೆರೇಡ್‌ನ ಎನ್ಸಿಸಿ ಬೆಟಾಲಿಯನ್ ಮುನ್ನಡೆಸಿದ ಪ್ರಮೀಳಾ ಕುವರ್ ತಂದೆ ಪ್ರತಾಪ್ ಸಿಂಗ್ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಚಹಾದ ಅಂಗಡಿಯಿದೆ. ಚಹಾ ಮಾರಾಟದಿಂದ ಬರುವ ಹಣದಲ್ಲೇ ಇವರ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ಆದರೂ ಪ್ರತಾಪ್ ಸಿಂಗ್ ಯಾವತ್ತು ಮಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಆಕೆಯ ಎಲ್ಲಾ ಕನಸುಗಳಿಗೂ ಒತ್ತಾಸೆಯಾಗಿ ನಿಂತಿದ್ದಾರೆ. ಪ್ರಮೀಳಾ ಸಹಾ ಎಂದೂ ತನಗೆ ಸಿಕ್ಕ ಅವಕಾಶವನ್ನು ದುರುಪಯೋಗಪಡಿಸಿಕೊಂಡಿಲ್ಲ. ಕೊರೊನಾ ಸಂದರ್ಭದಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ‌ ಮಾಡಿದ್ದಾರೆ. ಲಾಕ್‌ಡೌನ್ ಕರ್ಫೂ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಕೋವಿಡ್ ಸ್ವಯಂ ಸೇವಕಿಯಾಗಿ ಜನರಿಗಾಗಿ ಕೆಲಸ ಮಾಡಿದ್ದಾರೆ. ಇನ್ನು ಗಣರಾಜ್ಯೋತ್ಸವದ ಪೆರೇಡ್‌ಗಾಗಿ ಆಕೆ ಮನೆ ಬಿಟ್ಟು ಸುಮಾರು ಮೂರು ತಿಂಗಳಾಗಿದೆ. ಅಕ್ಟೋಬರ್‌ನಿಂದಲೇ ಇದಕ್ಕಾಗಿ ಪ್ರಮೀಳಾ ವಿವಿಧ ಕ್ಯಾಂಪ್‌ಗಳಲ್ಲಿ ಭಾಗಿಯಾಗಿದ್ದಾರೆ. ನವೆಂಬರ್‌ನಲ್ಲಿ ದೆಹಲಿಗೆ ತಲುಪಿ ಇಂದಿನವರೆಗೂ ಪೆರೇಡ್‌ನ ಸಿದ್ದತೆಯಲ್ಲೇ ತೊಡಗಿಕೊಂಡಿದ್ದರು. ಈಗಲೂ ಫೆಬ್ರವರಿ 5 ರಂದು ಪ್ರಮೀಳಾ ಮೈಸೂರಿಗೆ ವಾಪಾಸ್ಸಾಗಿದ್ದಾರೆ.

ಸದ್ಯ ಸಾಂಸ್ಕೃತಿಕ ನಗರಿ ಮೈಸೂರಿನ ಗೌರವ ಹೆಚ್ಚಿಸಿದ ಪ್ರಮೀಳಾಗೆ ಭಾರತೀಯ ಸೇನೆಯ ಪೈಲೆಟ್ ಆಗುವ ಆಸೆಯಿದೆ. ಇದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರುವ ಪ್ರಮೀಳಾ ಅದಕ್ಕೆ ಬೇಕಾದ ಅಗತ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಪ್ರಮೀಳಾಗೆ ತನ್ನ ರಾಜಸ್ಥಾನದ ರಜಪೂತ ಹೆಣ್ಣು ಮಕ್ಕಳಿಗೆ ಮಾದರಿಯಾಗಬೇಕೆಂಬ ಮಹಾದಶೆಯಿದೆ. ಆಕೆಯ ಪ್ರಕಾರ ನಾವು 22ನೇ ಶತಮಾನದಲ್ಲಿದ್ದರು ರಾಜಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಕಡಿಮೆ. ಹೆಣ್ಣು‌ ಮಕ್ಕಳಿಗೆ ಮದುವೆ ಮಾಡಿದ ನಂತರ ಶಿಕ್ಷಣ ಅನ್ನೋದು ಮರಿಚಿಕೆಯಾಗಿದೆ. ಇದಕ್ಕೆ ಬ್ರೇಕ್ ಹಾಕಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು ಎಂಬುದು ಪ್ರಮೀಳಾ ಅಭಿಪ್ರಾಯ. ದೇಶ ಸೇವೆ ಸಮಾಜಮುಖಿ ಕಾರ್ಯದ ಜೊತೆಗೆ ತನ್ನ ಊರಿನ ತನ್ನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಪ್ರಮೀಳಾಗಿರುವ ಕಾಳಜಿ ಅನನ್ಯ. ಆಕೆಯ ಎಲ್ಲಾ‌ ಕನಸುಗಳು ಈಡೇರಲಿ. ನಾಡಿನ ಕೀರ್ತಿಯನ್ನು ಆಕೆ‌ ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲಿ ಅನ್ನೋದೆ ನಮ್ಮ ಆಶಯ.

ವರದಿ: ರಾಮ್, ಟಿವಿ9 ಮೈಸೂರು

ಇದನ್ನೂ ಓದಿ: Republic Day 2022 Parade: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada