ಮೈಸೂರಿನ ಲಲಿತ್ ಮಹಲ್ನಲ್ಲಿ ಕೆ.ಎಸ್.ಈಶ್ವರಪ್ಪ ವಾಸ್ತವ್ಯ ಹೂಡಿದ್ದರು. ಲಲಿತ್ ಮಹಲ್ನ ಒಳ ಆವರಣದಲ್ಲಿ ಏಕಾಂಗಿಯಾಗಿ ಫೋನ್ನಲ್ಲಿ ಬಿರುಸಿನ ಮಾತುಕತೆ ನಡೆಸಿದರು. ಫೋನ್ ಮಾತುಕತೆಯ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಭೇಟಿಗೆ ಯತ್ನಿಸಿದರಾದರೂ ಅದು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ರೂಮಿಗೆ ತೆರಳಿ ವಾಪಸ್ ಬಂದರು. ತಿಂಡಿ ಮುಗಿಸಿ ಮತ್ತೆ ಫೋನ್ ಸಂಭಾಷಣೆ ನಡೆಸುತ್ತಲೇ ಕಾರು ಹತ್ತಿ ಬೆಂಗಳೂರಿಗೆ ಹೊರಟರು.
ರಾಜೀನಾಮೆ ಪರಿಸ್ಥಿತಿ ನಿರ್ಮಾಣವಾಗಿಲ್ಲ: ಕಟೀಲ್
ಸಂತೋಷ್ ಪಾಟೀಲ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಪಕ್ಷದವರು ಪ್ರತಿ ಸಣ್ಣ ವಿಚಾರಕ್ಕೂ ರಾಜೀನಾಮೆ ಕೇಳುತ್ತಾರೆ. ಅವರು ಕೇಳಿದ್ದಕ್ಕೆಲ್ಲಾ ರಾಜೀನಾಮೆ ಕೊಡಲು ಆಗುವುದಿಲ್ಲ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ 7 ತಿಂಗಳ ಬಳಿಕ ರಾಜೀನಾಮೆ ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಸರ್ಕಾರ ತಕ್ಷಣ ತನಿಖೆಗೆ ಆದೇಶಿಸಿದೆ. ಈಶ್ವರಪ್ಪ ರಾಜೀನಾಮೆ ಪಡೆಯುವ ಸ್ಥಿತಿ ಈಗ ನಿರ್ಮಾಣವಾಗಿಲ್ಲ. ತನಿಖೆ ಬಳಿಕ ತಪ್ಪಿತಸ್ಥರು ಎಂದು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿರೋಧ ಪಕ್ಷಗಳು ಇಂದು ರಾಜ್ಯಪಾಲರ ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರನ್ನೇಕೆ ಸಮಯ ಸಿಕ್ಕರೆ ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ ಎಂದರು. ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಸಿಎಂಗೆ ಬಿಟ್ಟ ವಿಚಾರ. ರಾಜ್ಯಾಧ್ಯಕ್ಷನಾಗಿ ನಾನು ನನ್ನ ಹೇಳಿಕೆ ತಿಳಿಸಿದ್ದೇನೆ. ಸಿಎಂಗೆ ಈ ಬಗ್ಗೆ ನಾನು ಏನಾದರೂ ಹೇಳುವುದಿದ್ದರೆ ಅವರನ್ನು ಭೇಟಿ ಮಾಡಿ ಹೇಳುತ್ತೇನ ಎಂದರು.
ಇದನ್ನೂ ಓದಿ:ಸಚಿವ ಈಶ್ವರಪ್ಪ ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಕಾಂಗ್ರೆಸ್ ನಿಯೋಗ
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ; ಇಂದು ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ಸಾಧ್ಯತೆ