ದಿನ ಬೆಳಗಾದರೆ ಹೈವೇನಲ್ಲಿ ಫೇಸ್ಬುಕ್ ಲೈವ್, ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ ನೋಡಪ್ಪ: ಸಿಂಹ ವಿರುದ್ಧ ವಿಶ್ವನಾಥ್ ಕಿಡಿ
ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ನಲ್ಲಿ ದುಬಾರಿ ಹಣ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಹೆದ್ದಾರಿ ಪಕ್ಕ ಕುಳಿತು ಕೈಗೆ ಕಪ್ಪು ಪಟ್ಟಿ ಧರಿಸಿ, ಘೋಷಣಾ ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ನಲ್ಲಿ (Bengaluru-Mysore Expressway) ದುಬಾರಿ ಹಣ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath), ಹೆದ್ದಾರಿ ಪಕ್ಕ ಕುಳಿತು, ಕೈಗೆ ಕಪ್ಪು ಪಟ್ಟಿ ಧರಿಸಿ, ಘೋಷಣಾ ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ವಪಕ್ಷದ ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಮಿನಿ ಕಂಟ್ರ್ಯಾಕ್ಟರ್, ನಿನ್ನ ಕೆಲಸ ಏನು ? ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು ? ರಸ್ತೆ ಕಾಮಗಾರಿಗೆ ಸಾಮಾಗ್ರಿಗಳನ್ನು ಸಾಗಿಸಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೈವೇಯಲ್ಲಿ ನಿಂತು ಫೇಸ್ ಬುಕ್ ಲೈವ್ ಮಾಡುತ್ತಿದ್ದ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನು ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ. ಅವನು ಯಾರೋ ಶ್ರೀಧರ್ ಅನ್ನೋ ಅಧಿಕಾರಿ (ದಶಪಥ ಹೆದ್ದಾರಿ ಯೋಜನಾ ನಿರ್ದೇಶಕ) ಸರ್ವಿಸ್ ರಸ್ತೆ ಮಾಡವ ಕಾನೂನು ಎಲ್ಲಿದೆ ಅಂತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ತೆರಿಗೆ ಹಣದಿಂದ ಹೈವೇ ನಿರ್ಮಾಣ, ಮೋದಿ ಅವರಪ್ಪನ ಮನೆಯ ಹಣ ಅಲ್ಲ: ಹೆಚ್.ವಿಶ್ವನಾಥ್
ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತೆ, ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. 2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆಳಿದಿದ್ದೀರಿ. ರಸ್ತೆ ಬೇಕು ಅಂತ ಯಾರು ಕೇಳಿದ್ರು ? ನಾಲ್ಕು ಪಥನೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Fri, 17 March 23