ಮುಡಾ ಹಗರಣ: ಸರ್ಚ್ ವಾರಂಟ್ ಜಾರಿಯಾಗಿದ್ರೂ ದಾಳಿ ಮಾಡಿರಲಿಲ್ಲ ಲೋಕಾಯುಕ್ತ, ಹಲವು ಅನುಮಾನ ಸೃಷ್ಟಿ

| Updated By: Ganapathi Sharma

Updated on: Nov 25, 2024 | 2:20 PM

ಉಪಚುನಾವಣೆ ಮುಗಿದಿದೆ. ಸಿಎಂ ಸಿದ್ದರಾಮಯ್ಯಗೆ ಶಕ್ತಿ ಬಂದಿದೆ. ಇದೇ ಹೊತ್ತಲ್ಲಿ ಮುಡಾ ಹಗರಣವನ್ನ ಸಿಬಿಐಗೆ ವಹಿಸುವಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಾಳೆ ಹೈಕೋರ್ಟ್‌ನಲ್ಲಿ ನಡೆಯಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸಲಾಗುತ್ತದೆಯೇ ಎಂಬ ಕುತೂಹಲದ ನಡುವೆ, ದಾಖಲೆ ಲೋಕಾಯುಕ್ತ ತನಿಖೆ ಮೇಲೆಯೂ ಅನುಮಾನವೊಂದು ಸೃಷ್ಟಿಯಾಗಿದೆ. ಏನದು? ವಿವರಗಳಿಗೆ ಮುಂದೆ ಓದಿ.

ಮುಡಾ ಹಗರಣ: ಸರ್ಚ್ ವಾರಂಟ್ ಜಾರಿಯಾಗಿದ್ರೂ ದಾಳಿ ಮಾಡಿರಲಿಲ್ಲ ಲೋಕಾಯುಕ್ತ, ಹಲವು ಅನುಮಾನ ಸೃಷ್ಟಿ
ಮುಡಾ ಹಗರಣ: ಸರ್ಚ್ ವಾರಂಟ್ ಜಾರಿಯಾಗಿದ್ರೂ ದಾಳಿ ಮಾಡಿರಲಿಲ್ಲ ಲೋಕಾಯುಕ್ತ, ಹಲವು ಅನುಮಾನ ಸೃಷ್ಟಿ
Follow us on

ಮೈಸೂರು, ನವೆಂಬರ್ 25: ಮುಡಾ ಹಗರಣದ ತನಿಖೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರುವಾಗಲೇ ಸ್ಫೋಟಕ ಸಂಗತಿಯೊಂದು ಹೊರಬಿದ್ದಿದೆ. ಲೋಕಾಯುಕ್ತಕ್ಕೆ ಮಧ್ಯಂತರ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದ್ದು, ಮಂಗಳವಾರ ತನಿಖಾ ವರದಿ ಸಲ್ಲಿಕೆಯಾಗಲಿದೆ. ಬಳಿಕ ಪ್ರಕರಣವನ್ನು ಸಿಬಿಐಗೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದೇ ವೇಳೆ, ಲೋಕಾಯುಕ್ತ ದಾಳಿಯ ಮಾಹಿತಿಯನ್ನ ಅಧಿಕಾರಿಗಳೇ ಸೋರಿಕೆ ಮಾಡಿದರಾ ಎಂಬ ಅನುಮಾನಕ್ಕೆ ಸೃಷ್ಟಿಯಾಗಿದೆ. ಸರ್ಚ್ ವಾರಂಟ್ ಜಾರಿಯಾದ್ರೂ, ದಾಳಿ ನಡೆಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಮುಡಾ ಕಚೇರಿ ಮೇಲೆ ದಾಳಿ ನಡೆಸಲು ಬೆಂಗಳೂರು ಲೋಕಾಯುಕ್ತದಿಂದ ವಾರಂಟ್ ರೆಡಿಯಾಗಿತ್ತು. ಜೂನ್ 28ರಂದು ದಾಳಿ ನಡೆಸಲು ಮೈಸೂರು ಲೋಕಾಯುಕ್ತ ಡಿವೈಎಸ್‌ಪಿ ಮಾಲ್ತೇಶ್ ಹೆಸರಿಗೆ ಸರ್ಚ್ ವಾರಂಟ್ ನೀಡಲಾಗಿತ್ತು. ಆದರೆ, ಜೂನ್ 29ರಂದು ಮುಡಾ ಕಚೇರಿಗೆ ಅಧಿಕಾರಿಗಳ ಎಂಟ್ರಿಯಾಗಿದೆ. ನಗಾರಭಿವೃದ್ಧಿ ಇಲಾಖೆಯ ಎಐಎಸ್ ಅಧಿಕಾರಿಗಳು ಬಂದು 140 ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಬೆಂಗಳೂರು ಲೋಕಾಯುಕ್ತದ ಟಿಪ್ಪಣಿಯಲ್ಲಿ ಉಲ್ಲೇಖವಾಗಿದೆ.

ಲೋಕಾಯುಕ್ತ ತನಿಖೆ ಬಗ್ಗೆ ಮೊದಲಿನಿಂದಲೂ ಅನುಮಾನದಲ್ಲಿರುವ ದೂರುದಾರ ಸ್ನೇಹಮಯಿ ಕೃಷ್ಣ, ಸರ್ಚ್ ವಾರಂಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಾಲ್ತೇಶ್ ಹೆಸರಿಗೆ ಜಾರಿಯಾಗಿದ್ದ ಸರ್ಚ್ ವಾರಂಟ್ ಕಾಪಿಯನ್ನು ಅಂದಿನ ಎಸ್‌ಪಿ ಸಜಿತ್, ಮಾಲ್ತೇಶ್‌ಗೆ ಕೊಟ್ಟಿರಲಿಲ್ಲ ಎಂದಿದ್ದಾರೆ. ಹಾಗೆಯೇ ದಾಳಿಗೂ ಮುನ್ನ ಭೈರತಿ ಸುರೇಶ್‌ಗೆ ಮಾಹಿತಿ ನೀಡಿದ್ದಾರೆ. ಭೈರತಿ ಸುರೇಶ್ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಶಾಸಕ ಶ್ರೀವತ್ಸ ಕೂಡಾ ಏಕಾಏಕಿ ಭೈರತಿ ಸುರೇಶ್ ಯಾಕೆ ಬಂದಿದ್ದರು? ಇದು ಕಳ್ಳತನ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

‘ಫೈಲ್ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ’ ಡಿಕೆ ಪ್ರಶ್ನೆ

ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಪ್ರತಿ ಫೈಲ್‌ಗಳ ಲೆಕ್ಕಾಚಾರ ಇರುತ್ತದೆ. ಅದ್ಹೇಗೆ ಫೈಲ್ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ‘ಕೈ’ ಹಿಡಿದ ಸಿದ್ದರಾಮಯ್ಯ ತಂತ್ರಗಳು ಇವುಗಳೇ ನೋಡಿ!

ಸದ್ಯ ಲೋಕಾಯುಕ್ತ ಪೊಲೀಸರು ಮಧ್ಯಂತರ ತನಿಖಾ ವರದಿ ಸಲ್ಲಿಸಲು ಸಜ್ಜಾಗಿದ್ದಾರೆ. ಇದೇ ವೇಳೆಯಲ್ಲಿ ಲೋಕಾಯುಕ್ತ ತನಿಖೆ ಬಗ್ಗೆಯೇ ಅನುಮಾನ ಮೂಡುವಂತಹ ಬೆಳವಣಿಗೆಗಳು ನಡೆದಿದ್ದು, ನಾಳೆ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಲು ಇದುವೇ ಆಧಾರವಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ