ಮುಡಾ ಹಗರಣ: ಲೋಕಾಯುಕ್ತ ಸರ್ಚ್ ವಾರೆಂಟ್ ಮಾಹಿತಿ ಸೋರಿಕೆಗೆ 8 ಕೋಟಿ ರೂ. ಡೀಲ್, ಗಂಗರಾಜು ಆರೋಪ

| Updated By: Ganapathi Sharma

Updated on: Nov 27, 2024 | 10:05 AM

ಮುಡಾ ಹಗರಣ ಸಂಬಂಧ ಸರ್ಚ್ ವಾರಂಟ್ ಜಾರಿಯಾಗಿದ್ರೂ ಲೋಕಾಯುಕ್ತ ದಾಳಿ ಮಾಡದೇ ಇದ್ದುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮುಡಾ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಕುರಿತಾದ ಮಾಹಿತಿ ಸೋರಿಕೆಯಾಗಿದ್ದು ಹೇಗೆ? ಆರ್​ಟಿಐ ಕಾರ್ಯಕರ್ತ ಗಂಗರಾಜು ಮಾಡಿರುವ ಗಂಭೀರ ಆರೋಪವೇನು? ಇಲ್ಲಿದೆ ವಿವರ.

ಮುಡಾ ಹಗರಣ: ಲೋಕಾಯುಕ್ತ ಸರ್ಚ್ ವಾರೆಂಟ್ ಮಾಹಿತಿ ಸೋರಿಕೆಗೆ 8 ಕೋಟಿ ರೂ. ಡೀಲ್, ಗಂಗರಾಜು ಆರೋಪ
ಆರ್​​ಟಿಐ ಕಾರ್ಯಕರ್ತ ಗಂಗರಾಜು
Follow us on

ಮೈಸೂರು, ನವೆಂಬರ್ 27: ಮುಡಾ ಹಗರಣ ಸಂಬಂಧ ಲೋಕಾಯುಕ್ತ ಸರ್ಚ್ ವಾರೆಂಟ್ ಮಾಹಿತಿ ಸೋರಿಕೆಗೆ 8 ಕೋಟಿ ರೂಪಾಯಿ ಡೀಲ್ ನಡೆದಿತ್ತು ಎಂದು ಆರ್​​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಡೀಲ್ ನಡೆದಿರುವ ಬಗ್ಗೆ ನನ್ನ ಬಳಿ ದಾಖಲೆ‌ ಇದೆ. ಇವತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ವಿಚಾರಣೆಗಾಗಿ ಇಂದು ಇಡಿ ಕಚೇರಿಗೆ ಬರಲು ಹೇಳಿದ್ದಾರೆ ಎಂದು ಅವರು ತಿಳಿಸಿದ್ದು, ವಿಚಾರಣೆಗೆ ಹಾಜರಾಗುವ ಮುನ್ನ ‘ಟಿವಿ9’ ಜತೆ ಮಾತನಾಡಿದ್ದಾರೆ.

ಮೈಸೂರು ಮುಡಾ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲು ಲೋಕಾಯುಕ್ತ ವಾರೆಂಟ್ ಪಡೆದಿತ್ತು. ಆದರೆ, ನಂತರ ಸರ್ಚ್ ಮಾಡದೆ ಸರ್ಚ್ ವಾರೆಂಟ್ ವಾಪಸ್ಸು ಕೊಡಲಾಗಿತ್ತು. ಸರ್ಚ್ ವಾರೆಂಟ್ ಬಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಮಾಲ್ತೇಶ್‌‌ರಿಂದ ಮಾಹಿತಿ ಸೋರಿಕೆಯಾಗಿತ್ತು. ಸಚಿವ ಬೈರತಿ ಸುರೇಶ್ ಹಿಂದಿನ ಆಯುಕ್ತಾದ ಜಿಟಿ ದಿನೇಶ್ ಕುಮಾರ್ ಹಾಗೂ ನಟೇಶ್‌ಗೆ ಮಾಹಿತಿ ನೀಡಿದ್ದರು. ಇದಕ್ಕಾಗಿ 8 ಕೋಟಿ ರೂಪಾಯಿ ಹಣದ ಡೀಲ್ ನಡೆದಿದ್ದ ದಾಖಲೆ ನನ್ನ ಬಳಿ ಇದೆ. ಆ ದಾಖಲೆಯನ್ನು ಇಡಿಗೆ ನೀಡುತ್ತೇನೆ. ತನಿಖೆಯ ದೃಷ್ಟಿಯಿಂದ ಮಾಧ್ಯಮಗಳಿಗೆ ನೀಡುವುದಿಲ್ಲ. ಈಗಾಗಲೆ ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿದ್ದೇನೆ ಎಂದು ಗಂಗರಾಜು ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸರ್ಚ್ ವಾರಂಟ್ ಜಾರಿಯಾಗಿದ್ರೂ ದಾಳಿ ಮಾಡಿರಲಿಲ್ಲ ಲೋಕಾಯುಕ್ತ, ಹಲವು ಅನುಮಾನ ಸೃಷ್ಟಿ

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಯಾವುದೇ ಮಾಹಿತಿ‌ ಕೇಳಿದರೂ ನೀಡುವೆ. ಮುಡಾದಲ್ಲಿ ಸಿದ್ದರಾಮಯ್ಯ ಅವರದ್ದು 20 ರಿಂದ 25 ಕೋಟಿ‌ ರೂ. ಅಕ್ರಮ. ಆದರೆ, ಒಟ್ಟಾರೆಯಾಗಿ 5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. 50:50 ಅನುಪಾತದಲ್ಲಿ ಬದಲಿ ಭೂಮಿಯನ್ನು ಖಾತೆ ಕಂದಾಯ ಸೆಟಲ್​ಮೆಂಟ್ ಡೀಡ್‌ಗಳ ಮೂಲಕ ಕಿಕ್ ಬ್ಯಾಕ್ ಪಡೆಯಲಾಗಿದೆ. ಇದರ ದಾಖಲೆ ಹೀಗಾಗಲೇ ಇಡಿಗೆ ನೀಡಿದ್ದೇನೆ. ಈ ತನಿಖೆಗಳು ಏನೇ ಇರಲಿ. ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಗಂಗರಾಜು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ