Mysore Bangalore Expressway: ಮೈಸೂರು-ಬೆಂಗಳೂರು ಹೆದ್ದಾರಿಗೆ ಒಡೆಯರ್ ಹೆಸರಿಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದ ಮಾಜಿ ಸಿಎಂ ಎಸ್.ಎಂ.ಕೃಷ್ಣ
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಎರಡನೇ ಹೆಸರು ಮುನ್ನಲೆಗೆ ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡುವಂತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ (Mysore-Bengaluru Expressway)ಗೆ ಎರಡನೇ ಹೆಸರು ಮುನ್ನಲೆಗೆ ಬಂದಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ (Nalwadi Krishnaraja Wadiyar) ಅವರ ಹೆಸರು ಇಡುವಂತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ (S.M Krishna) ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೂ ಪತ್ರ ಬರೆದು ಒಡೆಯರ್ ಹೆಸರು ಇಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಇದೇ ಹೆದ್ದಾರಿಗೆ ಕಾವೇರಿ ನದಿ (Kaveri River) ಹೆಸರು ಇಡುವಂತೆ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಕಾವೇರಿ ನದಿಯ ಹೆಸರು ಇಡಬೇಕೆಂದು ಸಂಸದ ಪ್ರತಾಪ ಸಿಂಹ್ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದರು. 10ಲೇನ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಭಾರತಮಾಲಾ ಪರಿಯೋಜನಾ ಹಂತ-ಎಲ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಎಕ್ಸ್‌ಪ್ರೆಸ್‌ವೇಯ ಪ್ರಯೋಜನವು ಬಹು ಆಯಾಮಗಳಾಗಿದ್ದು, ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಮುಂತಾದವು ಪ್ರಮುಖ ಪ್ರಯೋಜನಗಳಿವೆ ಎಂದು ಹೇಳಿದ್ದರು.
ಇಷ್ಟೇ ಅಲ್ಲದೇ ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇ, ಗಂಗಾ ಎಕ್ಸ್‌ಪ್ರೆಸ್‌ವೇ, ಮಧ್ಯಪ್ರದೇಶದ ನರ್ಮದಾ ಎಕ್ಸ್‌ಪ್ರೆಸ್‌ವೇ ನಂತೆಯೇ ಮೈಸೂರು-ಬೆಂಗಳೂರು ಹೈವೇಗೆ ಕಾವೇರಿ ಎಕ್ಸ್ಪ್ರೆಸ್ ವೇ ಎಂದು ಹೆಸರಿಡುವಂತೆ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದರು. ದಶಪಥ ಹೆದ್ದಾರಿಯಿಂದಾಗಿ ಮೈಸೂರು ಬೆಂಗಳೂರು ಮಧ್ಯದ ಸುಮಾರು 140 ಕಿ.ಮೀ. ದೂರದ ಪ್ರಯಾಣ ವ್ಯಾಪ್ತಿಯನ್ನು ಕೇವಲ 90 ನಿಮಿಷದಲ್ಲಿ ಕ್ರಮಿಸಬಹುದಾಗಿದೆ. ಸದ್ಯ ಇವೆರಡು ನಗರದ ನಡುವಿನ ಸಂಚಾರ ಸಮಯ ಮೂರು ಗಂಟೆ ಹಿಡಿಯುತ್ತಿದೆ. ಕಾಮಗಾರಿ ಬಳಿಕ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ ಆಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಈ ಹಿಂದೆ ತಿಳಿಸಿದ್ದರು.
ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಕೆಲವೇ ತಿಂಗಳುಗಳ ಕೆಳಗೆ ನಿರ್ಮಾಣವಾಗಿರುವ ಈ ಹೆದ್ದಾರಿ ಕೆಲವೇ ಗಂಟೆಗಳಲ್ಲಿ ಎರಡು ಪ್ರಮುಖ ನಗರಗಳನ್ನ ಬೆಸೆಯುತ್ತದೆ. ಆದರೆ ಇದೇ ಹೆದ್ದಾರಿ ಮೃತ್ಯುಕೂಪವಾಗಿಯೂ ಪ್ರಯಾಣಿಕರನ್ನು ಕಾಡುತ್ತಿದೆ. ಹೆದ್ದಾರಿ ಉದ್ಘಾಟನೆಗೂ ಮೊದಲೇ ಅಪಘಾತಗಳ ಸಂಖ್ಯೆ, ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಂದರವಾದ ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಇದುವರೆಗೂ ಕಡಿವಾಣ ಬಿದ್ದಿಲ್ಲ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ, ಅಪಘಾತದಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇದು ವಾಹನ ಸವಾರರು, ಸ್ಥಳೀಯರ ಆತಂಕಕ್ಕೂ ಕೂಡ ಕಾರಣವಾಗಿದೆ. ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳ ವೇಗದ ಮಿತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Sun, 1 January 23