ಮೈಸೂರು ದಸರಾ; ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ತೂಕ ಪರಿಶೀಲನೆ, ಯಾವ ಆನೆ ಎಷ್ಟು ಭಾರ? ಇಲ್ಲಿದೆ ಮಾಹಿತಿ
ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿರುವ ಅಭಿಮನ್ಯು 5,160 ಕೆಜಿ ತೂಕ ಹೊಂದಿದ್ದು, ಆನೆ ವಿಜಯ 2,830 ಕೆಜಿ ತೂಕವನ್ನು ಹೊಂದಿದೆ. ಧನಂಜಯ 4,940 ಕೆಜಿ, ಮಹೇಂದ್ರ 4,530 ಕೆಜಿ, ಭೀಮ 4,370 ಕೆಜಿ, ಕಂಜನ್ 4,240 ಕೆಜಿ ಮತ್ತು ಗೋಪಿ 5,080 ಕೆಜಿ ತೂಕ ಹೊಂದಿವೆ
ಮೈಸೂರು, ಸೆಪ್ಟೆಂಬರ್ 6: ಪ್ರಸಿದ್ಧ ಮೈಸೂರು ದಸರಾ (Mysore Dasara 2023) ಮಹೋತ್ಸವದ ಜಂಬೂ ಸವಾರಿಯಲ್ಲಿ (Jamboo Savari) ಪಾಲ್ಗೊಳ್ಳಲಿರುವ 14 ಆನೆಗಳ ಪೈಕಿ ಎಂಟು ಆನೆಗಳ ತೂಕ ಪರಿಶೀಲನಾ ಪ್ರಕ್ರಿಯೆ ಬುಧವಾರ ನಡೆಸಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿ ವೇಬ್ರಿಡ್ಜ್‌ನಲ್ಲಿ ನಿತ್ಯ ನಡೆಯುವ ಆನೆಗಳ ತಾಲೀಮು ವೇಳೆ ತೂಕ ತಪಾಸಣೆ ಪ್ರಕ್ರಿಯೆ ನಡೆಯಿತು. ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿರುವ ಅಭಿಮನ್ಯು 5,160 ಕೆಜಿ ತೂಕ ಹೊಂದಿದ್ದು, ಆನೆ ವಿಜಯ 2,830 ಕೆಜಿ ತೂಕವನ್ನು ಹೊಂದಿದೆ. ಧನಂಜಯ 4,940 ಕೆಜಿ, ಮಹೇಂದ್ರ 4,530 ಕೆಜಿ, ಭೀಮ 4,370 ಕೆಜಿ, ಕಂಜನ್ 4,240 ಕೆಜಿ ಮತ್ತು ಗೋಪಿ 5,080 ಕೆಜಿ ತೂಕ ಹೊಂದಿವೆ.
ಆನೆಗಳ ಆರೋಗ್ಯ ಮತ್ತು ತೂಕವನ್ನು ಕಾಪಾಡಿಕೊಳ್ಳಲು ದಸರಾ ಮೆರವಣಿಗೆ ಮುಗಿಯುವವರೆಗೆ ವಿಶೇಷ ಆಹಾರಕ್ರಮವನ್ನು ಅನುಸರಿಸುವಂತೆ ಮಾಡಲಾಗುತ್ತದೆ.
ಆನೆಗಳು ಮೈಸೂರು ಅರಮನೆಯ ಉತ್ತರ ದ್ವಾರದಿಂದ 3 ಕಿಲೋಮೀಟರ್‌ಗಳಷ್ಟು ನಡೆದು ಧನ್ವಂತರಿ ರಸ್ತೆಯಲ್ಲಿರುವ ತೂಕ ಪರೀಕ್ಷೆ ಸ್ಥಳವನ್ನು ತಲುಪಿದವು. ಆನೆಗಳಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ವಾಹನಗಳ ಬೆಂಗಾವಲು ಇತ್ತು. ಆನೆಗಳ ಉಗುರುಗಳು ಮತ್ತು ಮೆರವಣಿಗೆಯ ಮಾರ್ಗವನ್ನು ಸ್ಕ್ಯಾನ್ ಮಾಡಲಾದ ಮ್ಯಾಗ್ನೆಟಿಕ್ ಸ್ಕ್ಯಾನರ್‌ಗಳನ್ನು ಬೆಂಗಾವಲು ವಾಹನಗಳಿಗೆ ಜೋಡಿಸಲಾಗಿತ್ತು.
ಇದನ್ನೂ ಓದಿ: ಮೈಸೂರು ದಸರಾವನ್ನು ವ್ಯವಸ್ಥಿತವಾಗಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ
ಮೈಸೂರು ದಸರಾ ಸಮೀಪಿಸುತ್ತಿರುವಂತೆಯೇ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸುವಂತೆ ಸಚಿವ ಡಾ. ಹೆಚ್ಸಿ ಮಹದೇವಪ್ಪ ಅವರು ಮಂಗಳವಾರದಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ್ದ ಅವರು, ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಸೂಚನೆ ನೀಡಿದ್ದರು.
ಈ ಮಧ್ಯೆ, ದಸರಾ ಪುಷ್ಪ ಪ್ರದರ್ಶನಕ್ಕೂ ಭರದಿಂದ ಸಿದ್ಧತೆ ನಡೆಯುತ್ತಿದ್ದು, ವೈವಿಧ್ಯಮಯ ಹೂವುಗಳು ಮತ್ತು ಅಲಂಕಾರಿಕ ಸಸ್ಯಗಳ ಸಂಗ್ರಹ, ಪೋಷಣೆ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷ ಪುಷ್ಪ ಪ್ರದರ್ಶನದಲ್ಲಿ ಬರೋಬ್ಬರಿ 85,000 ಹೂದಾನಿಗಳು ಇರಲಿವೆ ಎಂದು ಮೂಲಗಳು ಈಗಾಗಲೇ ತಿಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ