ಮೈಸೂರು: ಮತದಾರರ ಪಟ್ಟಿಯಿಂದ 1.20 ಲಕ್ಷ ಹೆಸರುಗಳನ್ನು ಕೈಬಿಟ್ಟ ಜಿಲ್ಲಾಡಳಿತ; ಆಕ್ಷೇಪಕ್ಕೆ ಡಿ 12 ಕೊನೆಯ ದಿನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 30, 2022 | 10:14 AM

ಒಟ್ಟು 1,20,786 (1.20 ಲಕ್ಷ) ಮತದಾರರ ಹೆಸರುಗಳನ್ನು ಕಾನೂನಾತ್ಮಕವಾಗಿಯೇ ಕೈ ಬಿಡಲಾಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಮಾಹಿತಿಯನ್ನೂ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಹೇಳಿದ್ದಾರೆ.

ಮೈಸೂರು: ಮತದಾರರ ಪಟ್ಟಿಯಿಂದ 1.20 ಲಕ್ಷ ಹೆಸರುಗಳನ್ನು ಕೈಬಿಟ್ಟ ಜಿಲ್ಲಾಡಳಿತ; ಆಕ್ಷೇಪಕ್ಕೆ ಡಿ 12 ಕೊನೆಯ ದಿನ
ಮೈಸೂರು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ
Follow us on

ಮೈಸೂರು: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ (Voters List) ಅಕ್ರಮ ನಡೆದಿರುವ ಆರೋಪ ಕುರಿತು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ (DC Dr KV Rajendra) ಪತ್ರಿಕಾ ಪ್ರಕಟಣೆ ಮೂಲಕ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ. ‘ಮೈಸೂರು ಜಿಲ್ಲೆಯಲ್ಲಿ ಲಕ್ಷಾಂತರ ಮತದಾರರನ್ನು ಅಕ್ರಮವಾಗಿ ಕೈಬಿಡಲಾಗಿದೆ’ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆರೋಪ ಮಾಡಿದ್ದರು. ಈ ಬಗ್ಗೆ ದಾಖಲೆಗಳ ಸಮೇತ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಒಟ್ಟು 1,20,786 (1.20 ಲಕ್ಷ) ಮತದಾರರ ಹೆಸರುಗಳನ್ನು ಕಾನೂನಾತ್ಮಕವಾಗಿಯೇ ಕೈ ಬಿಡಲಾಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಮಾಹಿತಿಯನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಬೂತ್ ಮಟ್ಟದ ಅಧಿಕಾರಿಗಳ ವರದಿ ಆಧಾರಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿಯೇ ನಡೆದಿವೆ. ಮರಣ ಹೊಂದಿದ, ಸ್ಥಳಾಂತರವಾದ ಹಾಗೂ ಒಂದೇ ರೀತಿಯ ಭಾವಚಿತ್ರ ಹಾಗೂ ಪುನರಾವರ್ತಿತ ಮತದಾರರನ್ನು ಕೈ ಬಿಡಲಾಗಿದೆ. 11 ಕ್ಷೇತ್ರದ ಮತದಾರರ ಪಟ್ಟಿಯಿಂದಲೂ ಇಂಥವರ ಹೆಸರುಗಳನ್ನು ಕೈಬಿಡಲಾಗಿದೆ.

ಜಿಲ್ಲಾಧಿಕಾರಿ ನೀಡಿರುವ ದಾಖಲೆಯ ಪ್ರಕಾರ ಮರಣ ಹೊಂದಿರುವ 20,440, ಸ್ಥಳಾಂತರಗೊಂಡ 16,993, ಪುನರಾವರ್ತನೆಯಿದ್ದ 2,227, ಒಂದೇ ರೀತಿಯ ಭಾವಚಿತ್ರ ಇದ್ದ 80,930, ಇತರ ಕಾರಣಳಿಂದ 256 ಮಂದಿಯ ಹೆಸರುಗಳನ್ನು ಕೈಬಿಡಲಾಗಿದೆ. ಹೀಗೆ ವಿವಿಧ ಕಾರಣಗಳಿಂದ ಕೈಬಿಡಲಾದ ಒಟ್ಟು ಮತದಾರರ ಸಂಖ್ಯೆ 1,20,786 ಎಂದು ಅವರು ಹೇಳಿದ್ದಾರೆ.

ಪಿರಿಯಾಪಟ್ಟಣ 3,333, ಕೆ.ಆರ್.ನಗರ 4,986, ಹುಣಸೂರು 6,835, ಹೆಗ್ಗಡದೇವನಕೋಟೆ 5,565, ನಂಜನಗೂಡು 10,331, ಚಾಮುಂಡೇಶ್ವರಿ 19,428, ಕೃಷ್ಣರಾಜ 13,782, ಚಾಮರಾಜ 14,271, ನರಸಿಂಹರಾಜ 22,835, ವರುಣ 10,812, ಟಿ ನರಸೀಪುರ 8,908 ಮಂದಿಯ ಹೆಸರುಗಳನ್ನು ಕೈಬಿಡಲಾಗಿದೆ. ಹೆಸರು ಬಿಟ್ಟು ಹೋಗಿದ್ದರೆ ಅಥವಾ ಹೊಸದಾಗಿ ಸೇರಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಮತದಾರರು ಈ ಸಂಬಂಧ ಹಕ್ಕು ಮಂಡಿಸಲು ಮತ್ತು ಆಕ್ಷೇಪ ಸಲ್ಲಿಸಲು ಡಿಸೆಂಬರ್ 8ರವರೆಗೆ ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನೀಡಿರುವ ಮಾಹಿತಿ

ಇದನ್ನೂ ಓದಿ: ಮೈಸೂರಿನಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ: ಜಿಲ್ಲೆಗೆ ಬಂದ ಹೊಸ ಮತ ಯಂತ್ರಗಳ ಬಗ್ಗೆಯೂ ಕೈ ನಾಯಕರ ಅನುಮಾನ

Published On - 10:14 am, Wed, 30 November 22