ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ ಚಿರತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 12, 2022 | 3:36 PM

ಟಿ ನರಸೀಪುರದಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ನಡುವೆಯೂ ಕಳ್ಳ ಚಿರತೆ ಸಿಬ್ಬಂದಿ ಕಣ್ಣು ತಪ್ಪಿಸಿ ಬಂದು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಹೋಗಿದೆ.

ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ ಚಿರತೆ
ಟಿ.ನರಸೀಪುರದಲ್ಲಿ ಮತ್ತೆ ಚಿರತೆ ದಾಳಿ
Image Credit source: ಸಾಂದರ್ಭಿಕ ಚಿತ್ರ
Follow us on

ಮೈಸೂರು: ಟಿ.ನರಸೀಪುರ (T. Narasipur) ತಾಲೂಕಿನ ಜನರ ನಿದ್ದೆಗೆಡಿಸಿರುವ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೂ ಬೀಳದೆ ತಪ್ಪಿಸಿಕೊಳ್ಳುತ್ತಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ತಂಡ ಹರಸಾಹಸ ಪಡುತ್ತಿದೆ. ಈ ನಡುವೆ ಸಿಬ್ಬಂದಿ ಕಣ್ಣು ತಪ್ಪಿಸಿಕೊಂಡು ಬಂದ ಚಿರತೆ ಕುರಿ, ಮೇಕೆ ಮೇಲೆ ದಾಳಿ (Leopard attack) ನಡೆಸಿದ ಘಟನೆ ಟಿ.ನರಸೀಪುರ ತಾಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡುವೆಯೂ ಚಿರತೆ ದಾಳಿ ನಡೆದಿರುವುದರಿಂದ ಜನರಲ್ಲಿನ ಭೀತಿ ಮತ್ತಷ್ಟು ಹೆಚ್ಚಾಗಿದೆ. ಈ ತಾಲೂಕಿನಲ್ಲಿ ಓರ್ವ ಯುವಕನನ್ನು ಬಲಿ ಪಡೆದಿದ್ದ ಚಿರತೆ ದಾಳಿಗೆ ಮೇಘನಾ ಸಾವನ್ನಪ್ಪಿದ್ದಳು. ಒಂದೇ ತಿಂಗಳಲ್ಲಿ ಚಿರತೆಯು ಎರಡು ನರಬಲಿ ಪಡೆದ ಹಿನ್ನೆಲೆ ಜನರಲ್ಲಿ ಆತಂಕ ಮನೆಮಾಡಿತ್ತು.

ಟಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮನೆ ಮುಂದೆ ಕುಳಿತಿದ್ದಾಗ ಗುರುವಾರ ಸಂಜೆ ಚಿರತೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮೇಘನಾಳನ್ನ (20) ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆಯ ಕೊನೆಯುಸಿರೆಳೆದಿದ್ದಳು.

ಇದನ್ನೂ ಓದಿ: ಕೋಟೆನಾಡು ಚಿತ್ರದುರ್ಗದಲ್ಲಿ ಚಿರತೆ ಭೀತಿ: ಮನೆಯಿಂದ ಹೊರಬರಲು ಭಯ ಪಡುತ್ತಿರುವ ಜನರು

ಟಿ.ನರಸೀಪುರ ತಾಲೂಕಿನಲ್ಲೇ ಚಿರತೆ ದಾಳಿಗೆ ಎರಡನೇ ಬಲಿಯಾಗಿದೆ. ಕಳೆದ ತಿಂಗಳಷ್ಟೇ ಟಿ.ನರಸಿಪುರ ತಾಲೂಕಿನಲ್ಲೇ ಚಿರತೆ ಓರ್ವ ಯುವಕನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಇದೀಗ ಮೇಘನಾಳನ್ನ ಬಲಿಪಡೆದುಕೊಂಡಿದೆ. ಒಂದು ತಿಂಗಳಲ್ಲೇ ಚಿರತೆ ದಾಳಿಗೆ 2ನೇ ಬಲಿಯಾಗಿರುವುದರಿಂದ ಟಿ. ನರಸೀಪುರ ತಾಲೂಕಿನ ಜನರಲ್ಲಿ ಚಿರತೆ ಭಯ ಶುರುವಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಹೀಗಾಗಿ ಚಿರತೆಯನ್ನು ಆದಷ್ಟು ಬೇಗ ಸೆರೆಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

ಎರಡು ಬಲಿ ಪಡೆದ ನಂತರ ಎಚ್ಚೆತ್ತ ಅರಣ್ಯ ಇಲಾಖೆ, ತಾಲೂಕಿನಲ್ಲಿ ಚಿರತೆ ಹಿಡಿಯಲು ಬೋನು ಇರಿಸಿದ್ದಾರೆ. ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಆರಂಭಿಸಿದ ವಿಶೇಷ ಕಾರ್ಯಾಚರಣೆ ಫಲ ನೀಡದ ಹಿನ್ನೆಲೆ ಚಿರತೆ ಪತ್ತೆ ಕಾರ್ಯತಂತ್ರ ಬದಲಿಸಿ ಉತ್ತಮ ಗುಣಮಟ್ಟದ ಥರ್ಮಲ್ ಕ್ಯಾಮೆರಾ ಮತ್ತು ಡ್ರೋನ್‌ ಮೂಲಕ ಕಾರ್ಯಾಚರಣೆಗೆ ಇಳಿದರು. ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಈ ರೀತಿಯ ಕ್ಯಾಮೆರಾವನ್ನು ಪ್ರಾಯೋಗಿಕವಾಗಿ ಬಳಸುತ್ತಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Mon, 12 December 22