- Kannada News Karnataka Chitradurga Leopard scare in Kotenadu Chitradurga: People are afraid to step out of their homes
ಕೋಟೆನಾಡು ಚಿತ್ರದುರ್ಗದಲ್ಲಿ ಚಿರತೆ ಭೀತಿ: ಮನೆಯಿಂದ ಹೊರಬರಲು ಭಯ ಪಡುತ್ತಿರುವ ಜನರು
ಕೋಟೆನಾಡಿನ ಕುರುಡಿಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ ಜನರಲ್ಲಿ ಭಾರೀ ಭೀತಿ ಸೃಷ್ಠಿಸಿದೆ. ಗ್ರಾಮದ ನಾಯಿ, ಕುರಿ, ಮೇಕೆಗಳು ನಾಪತ್ತೆ ಆಗುತ್ತಿವೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದು ಜನರ ಭೀತಿ ಹೆಚ್ಚಿಸುತ್ತಿದೆ.
Updated on: Dec 10, 2022 | 5:11 PM

ಕೋಟೆನಾಡು ಚಿತ್ರದುರ್ಗದಲ್ಲೂ ಚಿರತೆ ಭೀತಿ ಶುರುವಾಗಿದೆ. ಕಳೆದ ಒಂದು ವಾರದ ಹಿಂದೆ ಕುರುಡಿಹಳ್ಳಿ ಬಳಿ ಕಾಣಿಸಿಕೊಂಡ ಚಿರತೆ ಭಯ ಸೃಷ್ಠಿಸಿದ್ದು. ಗ್ರಾಮದ ಜನರು ಕೃಷಿ ಕೆಲಸಕ್ಕಷ್ಟೇ ಅಲ್ಲದೆ ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ನಿರ್ಮಾಣ ಆಗಿದೆ.

ಕೂಲಿ ಕಾರ್ಮಿಕರು ಜಮೀನುಗಳಿಗೆ ಬರಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಗೆ ಚಿರತೆ ಸೆರೆಗೆ ಜನರು ಮನವಿ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್ ಇರಿಸಿ ಕೈತೊಳೆದುಕೊಂಡಿದೆ. ಹೀಗಾಗಿ ಕಳೆದ ನಾಲ್ಕಾರು ದಿನಗಳಿಂದ ಚಿರತೆ ಬೋನಿಗೂ ಬಿದ್ದಿಲ್ಲ.

ಕಳೆದ ಒಂದು ವಾರದ ಹಿಂದೆ ಕಾಣಿಸಿಕೊಂಡ ಚಿರತೆಯು ಗ್ರಾಮದ ಜನರಿಗೆ ಭಯ ಸೃಷ್ಟಿಸಿದೆ. ಇದರಿಂದ ಇಲ್ಲಿನ ರೈತರು ಹೊಲ ಗದ್ದೆಗಳಿಗೆ ಹೋಗದೆ ಮನೆಯ ಬಳಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಗ್ರಾಮದ ಬಾಬು ಎಂಬುವರ ಜಮೀನಿನ ಬಳಿ ವಾರದ ಹಿಂದೆ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ, ಗ್ರಾಮದ ಬಳಿ ನಾಯಿ ಬೇಟೆಗೆ ಚಿರತೆ ಓಡಾಡುತ್ತಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಪರಿಣಾಮ ಗ್ರಾಮದ ಜನರು ಕೃಷಿ ಕೆಲಸಕ್ಕೆ ತೆರಳಲು ಭಯ ಪಡುವಂತಾಗಿದೆ.

ಯಾವ ಜಮೀನು, ಗುಡ್ಡದಲ್ಲಿ ಅಡಗಿದೆಯೋ ಗೊತ್ತಿಲ್ಲದಂತಾಗಿದ್ದು ಈ ಭಾಗದ ಜನರು ಭಯಭೀತಿಗೆ ಒಳಗಾಗಿದ್ದಾರೆ. ಕೆಲ ಯುವಕರು ದೊಣ್ಣೆಗಳನ್ನು ಹಿಡಿದು ಚಿರತೆ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಹೀಗಾಗಿ, ಕಾಡು ಪ್ರಾಣಿ ಮತ್ತು ಮನುಷ್ಯ ಸಂಘರ್ಷಕ್ಕೂ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂಬುದು ಇವರ ಆಗ್ರಹ.

ಈ ಭಾಗದ ಗ್ರಾಮದ ಜನರು ಮನೆಯಿಂದ ಹೊರ ಬರಲು ಸಹ ಹೆದರುತ್ತಿದ್ದು ಬಹುತೇಕರು ಮನೆ ಸೇರುವಂಥ ವಾತಾವರಣ ನಿರ್ಮಾಣ ಆಗಿದೆ ಚಿರತೆ ಭೀತಿಯಿಂದ ಈ ಭಾಗದ ಕೃಷಿ ಕೆಲಸಗಳು ನಿಂತು ಹೋಗಿವೆ.

ಒಟ್ಟಾರೆಯಾಗಿ ಕೋಟೆನಾಡಿನ ಕುರುಡಿಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ ಜನರಲ್ಲಿ ಭಾರೀ ಭೀತಿ ಸೃಷ್ಠಿಸಿದೆ. ಗ್ರಾಮದ ನಾಯಿ, ಕುರಿ, ಮೇಕೆಗಳು ನಾಪತ್ತೆ ಆಗುತ್ತಿವೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದು ಜನರ ಭೀತಿ ಹೆಚ್ಚಿಸುತ್ತಿದೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆ ಹಚ್ಚಿ ಶೀಘ್ರ ಸೆರೆ ಹಿಡಿದು ಕಾಡಿಗೆ ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಆ ಮೂಲಕ ಈ ಭಾಗದ ಜನರ ಭೀತಿಗೆ ತೆರೆ ಎಳೆಯಬೇಕೆಂಬುದು ಜನರ ಆಗ್ರಹವಾಗಿದೆ.









