ಅಪ್ಪ ಎಲ್ಐಸಿ ಏಜೆಂಟ್, ಕಷ್ಟಪಡ್ತಿದ್ದ ಬಾಲಕಿಗೆ ಸ್ಪೂರ್ತಿ ಆಯ್ತು ಶಾಸಕರ ಮಾತು! 625ಕ್ಕೆ 625 ಅಂಕ ಸಾಧಿಸಿದ ಮೈಸೂರು ಏಕ್ತಾಗೆ ಮುಂದೆ ಸೇನೆಗೆ ಸೇರುವ ಹಂಬಲ

| Updated By: ಆಯೇಷಾ ಬಾನು

Updated on: May 19, 2022 | 4:17 PM

ಏಕ್ತಾ ಎಂಜಿ ಮೈಸೂರಿನ ಗಣಪತಿ ಎಂಸಿ ಹಾಗೂ ಎಂಎಸ್ ಗಂಗಮ್ಮ ದಂಪತಿಯ ಹಿರಿಯ ಮಗಳು. ಮೂಲತಃ ಕೊಡಗು ಜಿಲ್ಲೆಯವರಾದ ಗಣಪತಿ ಮಗಳ ವಿದ್ಯಾಭ್ಯಾಸಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದವರು

ಅಪ್ಪ ಎಲ್ಐಸಿ ಏಜೆಂಟ್, ಕಷ್ಟಪಡ್ತಿದ್ದ ಬಾಲಕಿಗೆ ಸ್ಪೂರ್ತಿ ಆಯ್ತು ಶಾಸಕರ ಮಾತು! 625ಕ್ಕೆ 625 ಅಂಕ ಸಾಧಿಸಿದ ಮೈಸೂರು ಏಕ್ತಾಗೆ ಮುಂದೆ ಸೇನೆಗೆ ಸೇರುವ ಹಂಬಲ
ಗಣಪತಿ ಎಂಸಿ ಹಾಗೂ ಎಂಎಸ್ ಗಂಗಮ್ಮ ದಂಪತಿಯ ಹಿರಿಯ ಮಗಳು ಏಕ್ತಾ ಎಂಜಿ
Follow us on

ಮೈಸೂರು: ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು ಅನ್ನೋ ಮಾತು ಇತ್ತೀಚಿನ ದಿನಗಳಲ್ಲಿ ಅಪ್ರಸ್ತುತ ಅನ್ನಿಸತೊಡಗಿತ್ತು. ಕೆಲ ವಿದ್ಯಾರ್ಥಿಗಳ ವರ್ತನೆ, ಅವರು ನಡೆದುಕೊಳ್ಳುವ ರೀತಿ ಇದಕ್ಕೆ ಕಾರಣವಾಗಿತ್ತು. ಇಂತಹ ಅದ್ಬುತ ನಾಣ್ಣುಡಿಯನ್ನು ಜೀವಂತವಾಗಿರುಸುವ ನಿಟ್ಟಿನಲ್ಲಿ ಮೈಸೂರಿನ ವಿದ್ಯಾರ್ಥಿನಿಯೊಬ್ಬಳು ಸಾಧನೆ ಮಾಡಿದ್ದಾಳೆ. ಕೊರೊನಾದ ಭೀತಿಯ ನಡುವೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ(SSLC Result 2022) ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಏಕ್ತಾ ಎಂಜಿ 625ಕ್ಕೆ 625 ಅಂಕಗಳಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಯಾರಿದು ಏಕ್ತಾ ಎಂಜಿ ?
ಏಕ್ತಾ ಎಂಜಿ ಮೈಸೂರಿನ ಗಣಪತಿ ಎಂಸಿ ಹಾಗೂ ಎಂಎಸ್ ಗಂಗಮ್ಮ ದಂಪತಿಯ ಹಿರಿಯ ಮಗಳು. ಮೂಲತಃ ಕೊಡಗು ಜಿಲ್ಲೆಯವರಾದ ಗಣಪತಿ ಮಗಳ ವಿದ್ಯಾಭ್ಯಾಸಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದವರು. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ‌. ಮಗಳ ವಿದ್ಯಾಭ್ಯಾಸಕ್ಕಾಗಿ ಬಂದ ಗಣಪತಿ ಅವರಿಗೆ ಯಾವುದೇ ಸೂಕ್ತ ಉದ್ಯೋಗವಿರಲಿಲ್ಲ. ಈಗಾಗಿ ಮಗಳನ್ನು ಮೈಸೂರಿನ ಜಾಕಿ ಕ್ವಾಟ್ರಸ್‌ನಲ್ಲಿರುವ ಸರ್ಕಾರಿ ಆದರ್ಶ ಶಾಲೆಗೆ ಸೇರಿಸಿದರು. ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಮಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ವ್ಯವಸ್ಥೆ ಮಾಡಿದರು.

ಟ್ಯೂಷನ್‌ಗೂ ಹೋಗದೆ 625ಕ್ಕೆ 625
ಏಕ್ತಾ ಎಂಜಿ ಪ್ರತಿಭಾನ್ವಿತ ವಿದ್ಯಾರ್ಥಿನಿ. ಮೊದಲಿನಿಂದಲೂ ಓದಿನಲ್ಲಿ ಚುರುಕಾಗಿದ್ದಳು. ಸರ್ಕಾರಿ ಆದರ್ಶ ಶಾಲೆಗೆ 6ನೇ ತರಗತಿಗೆ ಸೇರಿದ ಏಕ್ತಾ ಬಹುಬೇಗ ಶಾಲೆಯ ಶಿಕ್ಷಕರು ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾದಳು‌. ಆಕೆಯ ಏಕಾಗ್ರತೆ, ಶಿಸ್ತು, ಆಸಕ್ತಿ ನೋಡಿದ ಶಾಲೆಯ ಶಿಕ್ಷಕರು ಆಕೆಗೆ ಖಂಡಿತವಾಗಿಯೂ ವಿಶೇಷವಾದ ಪ್ರತಿಭೆ ಇದೆ. ಆಕೆ ಖಂಡಿತಾ ಅಗಾಧವಾದ ಸಾಧನೆ ಮಾಡುತ್ತಾಳೆ, ಶಾಲೆಗೆ ಕೀರ್ತಿ ತರುತ್ತಾಳೆ ಅನ್ನೋ ವಿಶ್ವಾಸದಲ್ಲಿದ್ದರು. ಶಾಲೆಯ ಶಿಕ್ಷಕರ ನಿರೀಕ್ಷೆಯನ್ನು ಏಕ್ತಾ ಹುಸಿ ಮಾಡಲಿಲ್ಲ. 2021 – 2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದಾಳೆ‌. ವಿಶೇಷ ಅಂದರೆ ಈಕೆ ಯಾವುದೇ ಟ್ಯೂಷನ್‌ಗೂ ಸೇರದೆ ಕೇವಲ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠದಿಂದಲೇ ಈ ಸಾಧನೆ ಮಾಡಿದ್ದಾಳೆ. ಇದನ್ನೂ ಓದಿ: SSLC Toppers: ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ; ಇನ್ನೂ ಯಾರೆಲ್ಲ ಈ ಸಾಧನೆ ಮಾಡಿದ್ದಾರೆ?

ಸರ್ಕಾರಿ ಶಾಲೆ – ಮಧ್ಯಮ ವರ್ಗ ಯಾವತ್ತು ಸಾಧನೆಗೆ ಅಡ್ಡಿಯಾಗುವುದಿಲ್ಲ
ಸಾಧನೆ ಮಾಡಬೇಕೆಂಬ ಧೃಡ ನಿಶ್ಚಯವಿದ್ದರೆ ಬಡತನ, ಸರ್ಕಾರಿ ಶಾಲೆ, ಬೇರೆ ಯಾವುದು ಅಡ್ಡಿಯಾಗುವುದಿಲ್ಲ. ಧೃಡ ಸಂಕಲ್ಪ, ಛಲ, ಗುರಿಯಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಏಕ್ತಾ ಸಾಧಿಸಿ ತೋರಿಸಿದ್ದಾಳೆ. ಯಾಕಂದ್ರೆ ತಂದೆಗೆ ಯಾವುದೇ ನಿಗದಿಯಾದ ಸಂಬಳವಿಲ್ಲ. ಸಣ್ಣ ಪುಟ್ಟ ಕೆಲಸದ ಜೊತೆಗೆ ಎಲ್ಐಸಿ ಏಜೆಂಟ್ ಆಗಿದ್ದಾರೆ‌. ತಾಯಿ ಗೃಹಿಣಿ. ಸೇರಿಕೊಂಡಿದ್ದು ಸರ್ಕಾರಿ ಶಾಲೆಗೆ. ಆದರೂ ಏಕ್ತಾ ಸಾಧನೆಗೆ ಇದು ಯಾವುದು ಅಡ್ಡಿಯಾಗಲೇ ಇಲ್ಲ. ಇನ್ನು ಏಕ್ತಾ ಕಷ್ಟು ಪಟ್ಟು ಓದಲಿಲ್ಲ. ಇಷ್ಟಪಟ್ಟು ಓದಿದ್ರು. ಏಕ್ತಾ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು ಅದನ್ನು ಬಿಟ್ಟರೆ ಅಪರೂಪಕ್ಕೆ ಮನೆಯಲ್ಲಿ ಓದಿಕೊಳ್ಳುತ್ತಿದ್ದರಂತೆ. ಆದರೆ ನೋಟ್ಸ್ ಆಗಲಿ, ಹೋಮ್ ವರ್ಕ್ ಆಗಲಿ ಎಂದು ತಪ್ಪಿಸುತ್ತಿರಲಿಲ್ಲವಂತೆ. ಅನಾರೋಗ್ಯ ಅದು ಇದು ಅಂತಾ ಕುಂಟು ನೆಪ ಹೇಳಿ ಶಾಲೆಗೆ ಗೈರಾದ ಉದಾಹರಣೆಗಳೇ ಇಲ್ಲವಂತೆ. ತನಗೆ ಸಿಕ್ಕಷ್ಟೇ ಅವಕಾಶ ಸೌಲಭ್ಯವನ್ನು ಬಳಸಿಕೊಂಡು ಏಕ್ತಾ ಅಪರೂಪದ ಸಾಧನೆ ಮಾಡಿದ್ದಾಳೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆದರ್ಶವಾದ ಶಾಲೆ -ಮುಖ್ಯ ಶಿಕ್ಷಕರಿಂದ ನಗದು ಬಹುಮಾನ
ಏಕ್ತಾ ಓದಿದ ಸರ್ಕಾರಿ ಆದರ್ಶ ಶಾಲೆ ಇಷ್ಟು ದಿನ ಎಲೆ‌ ಮರೆಯ ಕಾಯಿಯಂತಿತ್ತು. ಬಹುತೇಕ ಮೈಸೂರಿನವರಿಗೆ ಸರ್ಕಾರಿ ಆದರ್ಶ ಶಾಲೆ ಎಲ್ಲಿದೆ ಅನ್ನೋದು ಗೊತ್ತಿರಲಿಲ್ಲ. 2010ರಲ್ಲಿ ಆರಂಭವಾದ ಈ ಶಾಲೆ ಕಳೆದ 12 ವರ್ಷಗಳಲ್ಲಿ ಉತ್ತಮವಾದಂತಹ ಸಾಧನೆ ಮಾಡಿದೆ. ಮೈಸೂರು ಮಾತ್ರವಲ್ಲ ಹೊರ ಜಿಲ್ಲೆಗಳಿಂದಲೂ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದಾರೆ. ಇನ್ನು ಈ ಶಾಲೆ ಹೆಸರಿಗೆ ತಕ್ಕಂತೆ ಹಲವು ಆದರ್ಶಗಳನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ದಾಖಲಾತಿ ಪಡೆಯಲು ವಿದ್ಯಾರ್ಥಿ ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ‌. ಯಾವುದೇ ಶಿಫಾರಸ್ಸು ಅಥವಾ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಯ ಪ್ರತಿಭೆಯಷ್ಟೇ ಇಲ್ಲಿಗೆ ಮಾನದಂಡ. ಪ್ರತಿವರ್ಷ ಇದೇ ವ್ಯವಸ್ಥೆ ಇಲ್ಲಿ ಪಾಲನೆಯಾಗುತ್ತಿದೆ. ಶಾಲೆಯಲ್ಲಿ ಬಡವ ಶ್ರೀಮಂತ ಭೇಧವಿಲ್ಲ ಕೇವಲ‌ ಪ್ರತಿಭೆಗಷ್ಟೇ ಆದ್ಯತೆ. ಸದ್ಯ ಎಲೆ ಮರೆಯ ಕಾಯಿಯಂತಿದ್ದ ಶಾಲೆ ಈಗ ಏಕ್ತಾಳ ಸಾಧನೆಯಿಂದಾಗಿ ಟಾಕ್ ಆಫ್ ದಿ‌ ಟೌನ್ ಆಗಿದೆ. ಇದು ಶಾಲೆಗೂ ಗೌರವವನ್ನು ತಂದುಕೊಟ್ಟಿದೆ. ಇದು ಶಾಲೆಯ ಮುಖ್ಯ ಶಿಕ್ಷಕ ಡಿ ಸತೀಶ್ ಅವರಿಗೆ ಸಾಕಷ್ಟು ಖುಷಿ ತಂದಿದೆ. ಶಾಲೆಗೆ ಕೀರ್ತಿ ತಂದ ಏಕ್ತಾ ಎಂಜಿಗೆ ಸತೀಶ್ ಸಿಹಿ ತಿನ್ನಿಸಿ 10 ಸಾವಿರ ನಗದು ಬಹುಮಾನ ನೀಡಿದ್ದಾರೆ. ಏಕ್ತಾ ಸಾಧನೆ ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರಿಗೆ ಉತ್ತರವಾಗಿದೆ. ಸರ್ಕಾರಿ ಶಾಲೆಯಲ್ಲೂ ಉತ್ತಮ ಶಿಕ್ಷಕರಿದ್ದಾರೆ. ಉತ್ತಮ ಶಿಕ್ಷಣ ಸಿಗುತ್ತದೆ ಅನ್ನೋದು ಇದರಿಂದ ಸಾಬೀತಾಗಿದೆ ಅಂತಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಸ್ಪೂರ್ತಿಯಾದ ತಂದೆ ತಾಯಿ ಶಿಕ್ಷಕರು -ಸ್ವಂತ ಮನೆಗಾಗಿ ಸಾಧನೆ ಮಾಡಿದ ಏಕ್ತಾ
ಏಕ್ತಾ ಈ ಅಪರೂಪದ ಸಾಧನೆಗೆ ಸ್ಪೂರ್ತಿ ತಂದೆ ಗಣಪತಿ ಹಾಗೂ ತಾಯಿ ಗಂಗಮ್ಮ ಮತ್ತು ಶಾಲೆಯ ಎಲ್ಲಾ ಶಿಕ್ಷಕರು. ಏಕ್ತಾಳ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಆಕೆಗೆ ಎಲ್ಲಾ ರೀತಿಯ ಅನುಕೂಲವನ್ನು ಮಾಡಿಕೊಟ್ಟರು. ಆಕೆ ಯಾವುದೇ ಸಂದರ್ಭದಲ್ಲಿ ಏನೇ ಕೇಳಿದರೂ ಅದಕ್ಕೆ ಸೂಕ್ತವಾದ ಪರಿಹಾರ ನೀಡುವ ಕೆಲಸವನ್ನು ಮಾಡಿದರು. ಪ್ರತಿ ಕ್ಷಣವೂ ಆಕೆಯ ಜೊತೆಯಿದ್ದು ಆಕೆಯನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಇನ್ನು ಪೋಷಕರು ಸಹಾ ಮಗಳ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ತ್ಯಾಗವನ್ನು ಮಾಡಿದ್ದಾರೆ ಅಂದರು ತಪ್ಪಾಗಲಾರದು. ಆಕೆಯ ವಿದ್ಯಾಭ್ಯಾಸಕ್ಕಾಗಿ ತಮ್ಮ ಮೂಲಃ ಊರು ಬಿಟ್ಟು ಮೈಸೂರಿಗೆ ಬಂದರು. ಸೂಕ್ತ ಕೆಲಸ ಆದಾಯವಿಲ್ಲದಿದ್ದರೂ ಮಗಳಿಗೆ ಯಾವತ್ತು ಯಾವುದರ ಕೊರತೆಯಾಗದಂತೆ ಎಚ್ಚರವಹಿಸಿದರು. ಆಕೆ ಬಯಸಿದೆಲ್ಲವನ್ನೂ ಸಿಗುವಂತೆ ನೋಡಿಕೊಂಡರು. ಇದೇ ಏಕ್ತಾಳ ಸಾಧನೆಗೆ ಸ್ಪೂರ್ತಿಯಾಯಿತು. ಇದನ್ನೂ ಓದಿ: ರಾಜಧಾನಿ ಮಳೆ ಗಂಡಾಂತರ! ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ -ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

ಇನ್ನು ಏಕ್ತಾ ಸಹಾ ತನಗೆ ಶಿಕ್ಷಕರು ಪೋಷಕರು ನೀಡಿದ ಸೌಲಭ್ಯಗಳನ್ನು ಎಂದೂ ದುರುಪಯೋಗಪಡಿಸಿಕೊಳ್ಳಲಿಲ್ಲ. ಇನ್ನು ಈಕೆ ಇಷ್ಟು ಕಷ್ಟಪಟ್ಟು ಈ ಸಾಧನೆ ಮಾಡಲು ಕಾರಣ ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರಾಮದಾಸ್. ಹೌದು ಒಮ್ಮೆ ಶಾಲೆಗೆ ಬಂದಿದ್ದ ಎಸ್ ಎ ರಾಮದಾಸ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರಂತೆ. ಅಷ್ಟೇ ಅಲ್ಲ ಸರ್ಕಾರಿ ಆದರ್ಶ ಶಾಲೆಯ ಯಾವುದೇ ವಿದ್ಯಾರ್ಥಿ ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿದರೆ ಅವರು ಬಾಡಿಗೆ ಮನೆಯಲ್ಲಿದ್ದರೆ ಅವರಿಗೆ ಸ್ವಂತ ಮನೆ ನೀಡುವ ಭರವಸೆ ನೀಡಿದ್ದರಂತೆ. ಅವರ ಆ ಭರವಸೆ ಏಕ್ತಾಳಿಗೆ ಸ್ಪೂರ್ತಿಯಾಗಿದೆ. ನನಗಾಗಿ ಎಷ್ಟೋಂದು ಕಷ್ಟಪಡುತ್ತಿರುವ ತಂದೆ ತಾಯಿಗಾಗಿ ನಾನು ಏನಾದರೂ ಮಾಡಬಹುದು. ನಾನು ಉತ್ತಮ ಸಾಧನೆ ಮಾಡಿದರೆ ಬಾಡಿಗೆ ಮನೆಯಲ್ಲಿರುವ ತಂದೆ ತಾಯಿಗೆ ಸ್ವಂತ ಸೂರು ಸಿಗುತ್ತದೆ ಅನ್ನೋದನ್ನು ಮನಸದಲ್ಲಿಟ್ಟುಕೊಂಡು ಛಲ ಬಿಡದೆ ಈ ಸಾಧನೆ ಮಾಡಿದ್ದಾಳೆ.

ಸೇನೆಗೆ ಸೇರುವ ಹಂಬಲ – ಕುಂಟು ನೆಪ ಬೇಡ ಎಲ್ಲರಿಗೂ ಕಿವಿ ಮಾತು
ಇನ್ನು ಏಕ್ತಾ ತನ್ನ ವಿದ್ಯಾಭ್ಯಾಸ ಮುಗಿದ ನಂತರ ಭಾರತೀಯ ಸೇನೆಗೆ ಸೇರುವ ಕನಸನ್ನು ಕಟ್ಟಿಕೊಂಡಿದ್ದಾರೆ. ಭಾರತೀಯ ಸೇನೆಯ ಅಧಿಕಾರಿಯಾಗಿ ದೇಶ ಸೇವೆ ಮಾಡುವುದು ನನ್ನ ಜೀವನ ಗುರಿ ಅಂತಾ ಹೇಳಿದ್ದಾರೆ. ಇನ್ನು ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡುವ ಧೃಡ ನಿರ್ಧಾರ ಮಾಡಿದರೆ ಬೇರೆ ಯಾವುದೇ ಅಡೆ ತಡೆಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಆತ್ಮ ವಿಶ್ವಾಸದಿಂದ ಎಲ್ಲರಿಗೂ ಕಿವಿ ಮಾತು ಹೇಳಿದ್ದಾರೆ. ವಿಶೇಷ ಸಾಧನೆ ಮೂಲಕ ಸರ್ಕಾರಿ ಶಾಲೆಗಳಿಗೆ ಗೌರವ ತಂದಕೊಟ್ಟ ಏಕ್ತಾಗೆ ಅಭಿನಂದನೆಗಳು. ಜೊತೆಗೆ ಆಕೆಯ ಭವಿಷ್ಯ ಉಜ್ವಲವಾಗಿರಲಿ ಅನ್ನೋದೆ ನಮ್ಮ ಆಶಯ.

ವರದಿ: ರಾಮ್, ಟಿವಿ9 ಮೈಸೂರು