ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್
ಬೆಂಗಳೂರು: ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ (Maharaja Nalwadi Krishna Raja Wadiyar) ಅವರ ಹೆಸರು ನಾಮಕರಣ ಮಾಡಲು ಕರ್ನಾಟಕ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಈ ವಿಷಯವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಮೈಸೂರು ಸಂಸ್ಥಾನದಲ್ಲಿ ಹಲವು ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಕರ್ನಾಟಕದಲ್ಲಿ ಇಂದಿಗೂ ಕೃತಜ್ಞತೆ ಇದೆ. ಇದೇ ಕಾರಣಕ್ಕೆ ಸರ್ಕಾರದ ಈ ನಿರ್ಧಾರವನ್ನು ಜನರು ಖುಷಿಯಿಂದ ಸ್ವಾಗತಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ, ‘ಸಚಿವ ಸಂಪುಟ ನಿರ್ಧಾರವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ, ದಕ್ಷ ಆಡಳಿತ ಮತ್ತು ಸಾಮಾಜಿಕ ಕಳಕಳಿ ನಮಗೆ ಪ್ರೇರಣೆ’ ಎಂದು ಹೇಳಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ನೀವು ತಿಳಿಯಬೇಕಾದ ಐದು ಮುಖ್ಯ ಅಂಶಗಳಿವು…
- ಮೈಸೂರು ಸಂಸ್ಥಾನದ 24ನೇ ಮಹಾರಾಜರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ನಡೆಸಿದರು.
- 1894ರಿಂದ 1940ರವರೆಗೆ ಅವರು ಮೈಸೂರು ಸಂಸ್ಥಾನವನ್ನು ಆಳಿದರು.
- ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ವೈಖರಿ ಮತ್ತು ಜನಪ್ರೀತಿ ಕಂಡ ಮಹಾತ್ಮ ಗಾಂಧಿ ಅವರು ‘ರಾಜರ್ಶಿ’ ಎಂದು ಗೌರವಿಸಿದ್ದರು. ಋಷಿ ಸದೃಶ ಜೀವನ ನಡೆಸುತ್ತಿರುವ ರಾಜ ಎಂದು ಇದರ ಅರ್ಥ.
- ಮೃತಪಟ್ಟಾಗ ನಾಲ್ವಡಿ ಅವರ ಬಳಿ 4 ಕೋಟಿ ಡಾಲರ್ ಮೊತ್ತದಷ್ಟು ಸಂಪತ್ತು ಇತ್ತು. ಅದನ್ನು ಇಂದಿನ ರೂಪಾಯಿ-ಡಾಲರ್ ವಿನಿಮಯ ಮೊತ್ತಕ್ಕೆ ಲೆಕ್ಕ ಹಾಕಿದರೆ 7 ಶತಕೋಟಿ ಡಾಲರ್ ಮೊತ್ತವಾಗುತ್ತದೆ.
- ನಾಲ್ವಡಿ ಎಂದರೆ ನಾಲ್ಕನೆಯವರು ಎಂದು ಅರ್ಥ. ಇವರಿಗೆ ಮೊದಲು ಕೃಷ್ಣರಾಜ ಹೆಸರಿನ ಮೂವರು ಮೈಸೂರಿನ ರಾಜರಾಗಿದ್ದರು.
- ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಕೃಷ್ಣರಾಜ ಸಾಗರ ಜಲಾಶಯ (Krishnaraja Sagara Dam – KRS) ನಾಲ್ವಡಿ ಅವರ ದೂರದೃಷ್ಟಿಯ ಫಲ. ಜಲಾಶಯ ನಿರ್ಮಾಣಕ್ಕೆ ಹಣದ ಕೊರತೆ ಎದುರಾದಾಗ ಮಹಾರಾಜರು ತಮ್ಮ ಖಾಸಗಿ ಚಿನ್ನವನ್ನು ಮಾರಿ ಹಣ ಹೊಂದಿಸಿದ್ದರು.
- ಸಮಾನತೆಯ ಆಶಯಗಳನ್ನು ಆಡಳಿತದಲ್ಲಿ ತರಲು ಇಚ್ಛಿಸಿದ್ದ ಮಹಾರಾಜರು ದಲಿತರಿಗೆ ಮೀಸಲಾತಿ ನೀಡುವ ಪ್ರಯತ್ನಕ್ಕೆ ಮುನ್ನುಡಿ ಬರೆದರು.
- ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಬ್ಯಾಂಕ್ ಸೇರಿದಂತೆ ಹಲವು ಪ್ರಮುಖ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಸ್ಥೆಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.