ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು, ಉಚ್ಚಾಟನೆಗೆ ಪತ್ರ..!

ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರ ವಿರುದ್ಧ ಸ್ವಪಕ್ಷ ಬಿಜೆಪಿಯಲ್ಲೇ (BJP) ಆಕ್ರೋಶ ವ್ಯಕ್ತವಾಗಿದೆ. ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರ ವಿರುದ್ಧ ಮೈಸೂರಿನಲ್ಲೇ ಕೆಲ ಮುಖಂಡರು ಸಿಡಿದೆದ್ದಿದ್ದು, ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಪತ್ರ ಬರೆದಿದ್ದಾರೆ.

ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು, ಉಚ್ಚಾಟನೆಗೆ ಪತ್ರ..!
Pratap Simha
Follow us
ರಮೇಶ್ ಬಿ. ಜವಳಗೇರಾ
|

Updated on: Jan 10, 2025 | 4:10 PM

ಮೈಸೂರು, (ಜನವರಿ 10): ಮಾಜಿ ಸಂಸದ ಪ್ರತಾಪ್ ಸಿಂಹ್ ಅವರು ಮೈಸೂರು ಕ್ಷೇತ್ರದ ಬಾಕಿ ಉಳಿದ ಅಭಿವೃದ್ಧಿ ಕೆಲಸ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು ಸ್ವಪಕ್ಷದ ಕೆಲ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಹಾಲಿ ಸಂಸದರಿಗೆ ಮುಜುಗರ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು,   ಬಸನಗೌಡ ಪಾಟೀಲ್ ಯತ್ನಾಳ್​ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ. ಪ್ರತಾಪ್ ಸಿಂಹ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಲ ಬಿಜೆಪಿ ಮುಖಂಡರು ಪತ್ರ ಬರೆದು ಪಕ್ಷದಿಂದ ಉಚ್ಛಾಟನೆಗೆ ಆಗ್ರಹಿಸಿದ್ದಾರೆ. ಚಾಮರಾಜ ಕ್ಷೇತ್ರದ ನಿಕಟ ಪೂರ್ವ ಉಪಾಧ್ಯಕ್ಷ ಕುಮಾರ್ ಗೌಡ, ಪರಿಶಿಷ್ಟ ಪಂಗಡಗಳ ಮೋರ್ಚಾದ ಮಾಜಿ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿಗೆ ಪತ್ರ ಬರೆದಿದ್ದಾರೆ. ಪ್ರತಾಪ್ ಸಿಂಹ ಹಾಲಿ ಸಂಸದರಿಗೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿಲ್ಲ. ಕೇವಲ ವರುಣ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿ ಸೋಲಿಗೆ ಕಾರಣರಾದರು. ಪ್ರತಾಪ್ ಸಿಂಹ ಅವರು ವಕ್ಫ್ ವಿಚಾರದಲ್ಲಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ಮಾಡದೆ ವಿಜಯೇಂದ್ರ ಅವರಿಗೆ ಮುಜುಗರ ಮಾಡಿದ್ದಾರೆ. ಇನ್ನೂ ಅನೇಕ ಕಾರಣ ನೀಡಿ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಏನಂದ್ರು ನೋಡಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈ.ಕಾ ಪ್ರೇಮ್ ಕುಮಾರ್, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನ ಸಂಸದ ಪ್ರತಾಪ್ ಸಿಂಹ ಮಾಡುತ್ತಿದ್ದಾರೆ. ಮಾಜಿಯಾದರೂ ಹಾಲಿ ಸಂಸದರಿಗೆ ಮುಜುಗರ ತರುವ ನಿಟ್ಟಿನಲ್ಲಿ ಕೇಂದ್ರದ ಮಂತ್ರಿಗಳ ಭೇಟಿ ಮಾಡುವುದು ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳಿಕೊಂಡು ಹಾಲಿ ಸಂಸದರಿಗೆ ಕೆಲಸವೇ ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಜೊತೆಗೆ ಪಕ್ಷದಲ್ಲಿ ಒಂದು ರೀತಿ ಸೋತು ಮನೆಯಲ್ಲಿ ಕೂತಿದ್ದರೂ ಚಾಲ್ತಿಯಲ್ಲಿರಬೇಕು ಎಂಬ ಭ್ರಮೆಯಲ್ಲಿದ್ದಾರೆ. ಇವರು ಬಿಜೆಪಿ ರಾಜ್ಯಾಧ್ಯಕ್ಷರ ವಿಜಯೇಂದ್ರ ವಿರುದ್ಧ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲೂ ಹೋಗಿ ಅಲ್ಲೂ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಪ್ರಿನ್ಸಸ್ ರಸ್ತೆ ಹೆಸರೇ ಇಲ್ಲ ಅಂತ ಹೇಳುತ್ತಾರೆ. ನಂತರ ಉಲ್ಟಾ ಹೇಳಿಕೆ ನೀಡುತ್ತಾರೆ. ಇವರೊಬ್ಬ ಪತ್ರಕರ್ತರಾಗಿದ್ದೂ ಪ್ರಿನ್ಸಸ್ ರಸ್ತೆ ಹೆಸರು ಇರುವುದು ಗೊತ್ತಿಲ್ಲವಾ ಇವರಿಗೆ. ಜೊತೆಗೆ ಪಾರ್ಟಿಯನ್ನ ಸಾಕಷ್ಟು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಾರೆ. ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದಿದ್ದರೂ ಬಂದು ಬಿಲ್ಡಪ್ ತೆಗೆದುಕೊಳ್ಳುತ್ತಾರೆ. ಇವರ ನಡವಳಿಕೆ ಬಹಳ ಬೇಸರ ತಂದಿದೆ. ಇವರಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಹಾಗಾಗಿ ಇವರನ್ನ ಪಕ್ಷದಿಂದ ವಜಾ ಮಾಡಬೇಕು ಎಂದು ನಾನು ಬಿಜೆಪಿ ನಗರ ಘಟಕ ಮತ್ತು ಗ್ರಾಮಾಂತರ ಘಟಕ ಅಧ್ಯಕ್ಷ ಇಬ್ಬರಿಗೂ ಮನವಿ ಪತ್ರ ಕೊಟ್ಟಿದ್ದೇನೆ . ಇದರ ಜೊತೆ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ದೂರು ಕೊಡಲು ಹೋಗುತ್ತಿದ್ದೇನೆ ಎಂದು ಮೈ.ಕಾ ಪ್ರೇಮ್ ಕುಮಾರ್ ಹೇಳಿದ್ದಾರೆ.

ಕೆಂಗಣ್ಣಿಗೆ ಗುರಿಯಾಗುತ್ತಿರುವ ಸಿಂಹ

ಪ್ರತಾಪ್ ಸಿಂಹ ಒಂದಲ್ಲ ಒಂದು ವಿಚಾರಕ್ಕೆ ಸ್ವಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರೋಧಿ ಬಣದಲ್ಲಿ ಗುರುತಿಸಿಕೊಂಡು ರಹಸ್ಯ ಸಭೆಯಲ್ಲಿ ಭಾಗಿಯಾಗಿದ್ದರು. ಬಳಿಕ ವಕ್ಫ್​ ಆಸ್ತಿ ವಿವಾದದಲ್ಲಿ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡು ವಿಜಯೇಂದ್ರ ಬೆಂಬಲರ ಕಣ್ಣು ಕೆಂಪಾಗಿಸಿದ್ದರು. ಬಳಿಕ ಮೈಸೂರಿನಲ್ಲಿ ರಸ್ತೆಗೆ ಹೆಸರಿಡುವ ವಿಚಾರಕ್ಕೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಅಲ್ಲದೇ ಪರೋಕ್ಷವಾಗಿ ಸ್ವಪಕ್ಷದ ಕೆಲ ನಾಯಕರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿ ಟಾಂಗ್ ಕೊಟ್ಟಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಮೈಸೂರು ಬಿಜೆಪಿಯ ಕೆಲ ಮುಖಂಡರು ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದಿದ್ದಾರೆ.

ಸಿದ್ದರಾಮಯ್ಯನವರನ್ನು ಹಾಡಿಹೊಳಿದ್ದ ಪ್ರತಾಪ್

ಮೈಸೂರಿನಲ್ಲಿ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಬಿಜೆಪಿಯಲ್ಲೇ ಇದಕ್ಕೆ ಭಿನ್ನರಾಗ ಕೇಳಿಬಂದಿತ್ತು. ಹಲವು ಬಿಜೆಪಿ ನಾಯಕರು ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ಸಿದ್ದರಾಮಯ್ಯ ಅವರ ಹೆಸರಿಟ್ಟರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಸಿಎಂ ಪರ ಬ್ಯಾಟ್ ಬೀಸಿದ್ದರು. ಇದಕ್ಕೆ ಪ್ರತಾಪ್ ಸಿಂಹ ವಿರುದ್ಧ ಸಂಸದ ಯದುವೀರ್ ಸೇರಿ ಹಲವರು ಬೇಸರ ವ್ಯಕ್ತಪಡಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ