ಮೈಸೂರು: ಬೇಕಾಗಿದ್ದಾರೆ.. ಶಸ್ತ್ರಸಜ್ಜಿತ ದರೋಡೆಕೋರರು; ಫೇಸ್ಬುಕ್ ಪೋಸ್ಟ್ ಮೂಲಕ ಸಾರ್ವಜನಿಕರ ಸಹಕಾರ ಕೇಳಿದ ಪೊಲೀಸರು
‘ಬೇಕಾಗಿದ್ದಾರೆ.. ಶಸ್ತ್ರಸಜ್ಜಿತ ದರೋಡೆಕೋರರು’ ಎಂದು ಮೈಸೂರು ಸಿಟಿ ಪೊಲೀಸ್ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಖದೀಮರ ಫೋಟೋವನ್ನೂ ಪೋಸ್ಟ್ನಲ್ಲಿ ಹಾಕಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದ ಆಭರಣ ಮಳಿಗೆ ದರೋಡೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ದರೋಡೆಕೋರರನ್ನು ಹುಡುಕಲು ಸಹಕರಿಸುವಂತೆ ಮನವಿ ಮಾಡಿದ್ದಾರೆ. ‘ಬೇಕಾಗಿದ್ದಾರೆ.. ಶಸ್ತ್ರಸಜ್ಜಿತ ದರೋಡೆಕೋರರು’ ಎಂದು ಮೈಸೂರು ಸಿಟಿ ಪೊಲೀಸ್ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಖದೀಮರ ಫೋಟೋವನ್ನೂ ಪೋಸ್ಟ್ನಲ್ಲಿ ಹಾಕಿದ್ದಾರೆ.
ಮೈಸೂರಿನಲ್ಲಿ ತಲ್ಲಣ ಮೂಡಿಸಿರುವ ಶಸ್ತ್ರಸಜ್ಜಿತ ದರೋಡೆಕೋರರ ಕೃತ್ಯ ದೊಡ್ಡ ಮಟ್ಟದಲ್ಲೇ ಸುದ್ದಿ ಮಾಡುತ್ತಿದ್ದು, ಅಮಾಯಕ ಯುವಕನೋರ್ವ ಬಲಿಯಾಗಿರುವುದಕ್ಕೆ ಜನ ಕಂಬನಿ ಮಿಡಿದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣುವಂತೆ ನೀಲಿ ಅಂಗಿ ಧರಿಸಿ ಆಭರಣ ಮಳಿಗೆ ಹೊಕ್ಕಿರುವ ಕಳ್ಳರು ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿದ್ದಾರೆ. ಆದರೆ, ಹೊರಗೆ ಬರುತ್ತಿದ್ದಂತೆಯೇ ಒಬ್ಬಾತ ಅಂಗಿ ಬಿಚ್ಚಿದ್ದು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ಇದೀಗ ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಮಾಹಿತಿ ಕಲೆಹಾಕಲು ಸಾರ್ವಜನಿಕರಲ್ಲೂ ಸಹಾಯ ಕೇಳಿದ್ದಾರೆ. ಶಸ್ತ್ರಸಜ್ಜಿತ ದರೋಡೆಕೋರರು ಪತ್ತೆಯಾದರೆ ಮೈಸೂರು ನಗರ ಪೊಲೀಸರನ್ನು ಸದರಿ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ತಿಳಿಸಲಾಗಿದೆ: 9480802203, 9480802264, 9480802200.
ಮೈಸೂರು ತಾಲ್ಲೂಕಿನ ದಡದಹಳ್ಳಿ ಗ್ರಾಮದ ಚಂದ್ರು (23) ಈ ಘಟನೆಯಲ್ಲಿ ದುರ್ಮರಣಕ್ಕೀಡಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ ಅವರು ತನ್ನ ಚಿಕ್ಕಪ್ಪನ ಮಗ ರಂಗಸ್ವಾಮಿ ಜತೆ ಓಲೆ ಖರೀದಿಸಲು ಬಂದಿದ್ದರು ಎಂದು ತಿಳಿದುಬಂದಿದೆ. ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ಗೆ ನುಗ್ಗಿದ್ದ ಕಳ್ಳರು ಕಳ್ಳತನ ನಡೆಸುತ್ತಿದ್ದರು. ಚಂದ್ರು ಬರುವ ಮುನ್ನವೇ ಅಂಗಡಿ ಒಳಗೆ ಇದ್ದ ದರೋಡೆಕೋರರು ಬಾಗಿಲು ಹಾಕಿದ್ದ ಕಾರಣ ಚಂದ್ರು ಹೊರಗೆ ನಿಂತಿದ್ದರು. ದರೋಡೆಕೋರರು ಕಳ್ಳತನ ಮಾಡಿ ಶಟರ್ ತೆಗೆದಾಗ ಚಂದ್ರು ಅಂಗಡಿ ಕಡೆ ಹೆಜ್ಜೆ ಹಾಕಿದ್ದು, ತಪ್ಪಿಸಿಕೊಳ್ಳುವಾಗ ಅಡ್ಡ ಬಂದ ಕಾರಣ ಆತ ನಮ್ಮನ್ನು ಹಿಡಿಯಬಹುದು ಎಂದು ಹೆದರಿದ ಕಳ್ಳರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ನೇರವಾಗಿ ಚಂದ್ರು ತಲೆಗೆ ಹೊಕ್ಕು ಅವರು ಮೃತಪಟ್ಟಿದ್ದಾರೆ ಎನ್ನುವುದು ಗೊತ್ತಾಗಿದೆ. ದರೋಡೆಕೋರನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದರೋಡೆಕೋರರ ಪತ್ತೆಗಾಗಿ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ರಚನೆಯಾಗಿದೆ.
ಕಳ್ಳತನ ಮಾಡಿ ಸಿಸಿಟಿವಿಯ ಹಾರ್ಡ್ ಡಿಸ್ಕ್ ಮತ್ತು ಮಾನಿಟರ್ ಹೊತ್ತೊಯ್ದ ಖತರ್ನಾಕ್ ಕಳ್ಳರು ಇತ್ತ ಮೈಸೂರಿನ ದಟ್ಟಗಳ್ಳಿ ರಿಂಗ್ ರೋಡ್ ಬಳಿಯ ಶ್ರೀನಿವಾಸ ಸ್ಟೀಲ್ ಮತ್ತು ಹಾರ್ಡ್ವೇರ್ ಅಂಗಡಿಯಲ್ಲೂ ಕಳ್ಳತನ ನಡೆದಿದೆ. ಆದರೆ ಅಲ್ಲಿ ಕಳ್ಳತನ ಮಾಡಿದ ಖದೀಮರು ಸಿಸಿಟಿವಿಯ ಹಾರ್ಡ್ ಡಿಸ್ಕ್ ಮತ್ತು ಮಾನಿಟರ್ ಹೊತ್ತೊಯ್ದಿದ್ದಾರೆ. ಸ್ಟೀಲ್ ಅಂಗಡಿಯಲ್ಲಿ ಕಳ್ಳತನ ಮಾಡಿ, ಸಾಕ್ಷಿ ನಾಶ ಮಾಡಿರುವ ಖತರ್ನಾಕ್ ಖದೀಮರು ನಗದು, ಕಂಪ್ಯೂಟರ್ ಸಿಸ್ಟಂ ಸೇರಿದಂತೆ ಕೆಲವು ವಸ್ತು ದೋಚಿದ್ದಾರೆ. ಅಂಗಡಿಯ ರೋಲಿಂಗ್ ಶೆಟ್ಟರ್ ಮೀಟಿ ಒಳ ನುಗ್ಗಿರುವ ಕಳ್ಳರು ಪೋಲಿಸರಿಗೆ ಸಿಕ್ಕಿ ಬೀಳಬಾರದೆಂದು ಸಿಸಿಟಿವಿ ಕ್ಯಾಮರಾವನ್ನೂ ಧ್ವಂಸಮಾಡಿ ಸಾಕ್ಷಿ ನಾಶ ಮಾಡಿದ್ದಾರೆ. ಮೈಸೂರಿನ ಕುವೆಂಪುನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(Mysuru City Police shares wanted post on Facebook seeking citizens help to find Robbers regarding shoot out case)