ಮೈಸೂರು ದಸರಾದಲ್ಲಿ 3,473 ಡ್ರೋನ್ ಮೂಲಕ ಮೂಡಿದ ನವಿಲು ಪ್ರದರ್ಶನಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೇಳೆ ಸಾವಿರಾರು ಅತ್ಯಾಧುನಿಕ ಡ್ರೋನ್‌ಗಳು ರಾತ್ರಿ ವೇಳೆ ಆಕಾಶದಲ್ಲಿ ಮೂಡಿಸಿದ ಬೃಹತ್ ನವಿಲಿನ ಆಕೃತಿಯು 'ಗಿನ್ನೆಸ್ ವಿಶ್ವ ದಾಖಲೆ' ನಿರ್ಮಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಹಬ್ಬದ ಸಂಭ್ರಮದ ಸಾಂಪ್ರದಾಯಿಕ ಆಕರ್ಷಣೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈ ವೈಮಾನಿಕ ಪ್ರದರ್ಶನವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದ ರಾಷ್ಟ್ರಪಕ್ಷಿಯಾದ ನವಿಲು ನರ್ತಿಸುವ ಭಂಗಿಯನ್ನು ಆಕಾಶದಲ್ಲಿ ಮೂಡಿಸುವ ಮೂಲಕ, ಕರ್ನಾಟಕದ ಸಾಂಸ್ಕೃತಿಕ ಆಚರಣೆಯನ್ನು ತಂತ್ರಜ್ಞಾನದ ಜೊತೆ ಸುಂದರವಾಗಿ ಬೆಸೆಯಲಾಯಿತು.

ಮೈಸೂರು, ಅಕ್ಟೋಬರ್ 25: ವಿಶ್ವವಿಖ್ಯಾತ ‘ಮೈಸೂರು ದಸರಾ‘ ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ಬೃಹತ್ ಡ್ರೋನ್ ಪ್ರದರ್ಶನವು ನೂತನ ‘ಗಿನ್ನೆಸ್ ವಿಶ್ವ ದಾಖಲೆ’ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ರಾತ್ರಿ ವೇಳೆಯ ಆಕಾಶದಲ್ಲಿ ಬರೋಬ್ಬರಿ 3,473 ಅತ್ಯಾಧುನಿಕ ಡ್ರೋನ್‌ಗಳು ಒಂದಾಗಿ ಸೇರಿ ಮೂಡಿಸಿದ ಬೃಹತ್ ‘ನವಿಲಿನ’ ಆಕೃತಿಯು ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ವೈಮಾನಿಕ ಡ್ರೋನ್ ರೂಪಿಸಿದ ಸಾರ್ವಕಾಲಿಕ ದಾಖಲೆಗೆ ಪಾತ್ರವಾಗಿದೆ. ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಈ ವರ್ಣರಂಜಿತ ಡ್ರೋನ್ ಶೋ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.
ಅಕ್ಟೋಬರ್ 18ರಂದು ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಈ ಪ್ರದರ್ಶನ ನಡೆಯಿತು. ನರ್ತಿಸುವ ನವಿಲಿನ ರೂಪವನ್ನು ಸೃಷ್ಟಿಸಲು ಬರೋಬ್ಬರಿ 3,473 ಡ್ರೋನ್‌ಗಳನ್ನು ಬಳಸಲಾಗಿತ್ತು. ಮಲ್ಟಿರೋಟರ್ ಡ್ರೋನ್‌ಗಳ ಮೂಲಕ ಆಕಾಶದಲ್ಲಿ ಪಕ್ಷಿಯ ಆಕೃತಿಯನ್ನು ಮೂಡಿಸಿದ ಜಗತ್ತಿನ ಅತಿ ದೊಡ್ಡ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿ ಗಿನ್ನೆಸ್ ದಾಖಲೆ ಗಳಿಸಿತು.
ಇದನ್ನೂ ಓದಿ: ದಸರಾ ಅಂಬಾರಿ ಆನೆ ಆಯ್ಕೆ ವಿಚಾರ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ
ಆಕಾಶದಲ್ಲಿ ಸಾವಿರಾರು ಬಣ್ಣಬಣ್ಣದ ಡ್ರೋನ್‌ಗಳು ಏಕಕಾಲದಲ್ಲಿ ಹಾರಿ, ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ತನ್ನ ಗರಿಗಳನ್ನು ಬಿಚ್ಚಿ ನರ್ತಿಸುವ ರೋಮಾಂಚಕ ದೃಶ್ಯವನ್ನು ನಿಖರವಾಗಿ ಮರುಸೃಷ್ಟಿಸಿದವು. ಗಿನ್ನೆಸ್ ಸಂಸ್ಥೆಯ ಅಧಿಕೃತ ತೀರ್ಪುಗಾರರು ಸ್ಥಳದಲ್ಲೇ ಉಪಸ್ಥಿತರಿದ್ದು ಪ್ರದರ್ಶನವನ್ನು ವಿಶ್ಲೇಷಿಸಿ, ‘ಒಂದೇ ಬಾರಿಗೆ ಆಕಾಶದಲ್ಲಿ ಅತಿ ಹೆಚ್ಚು ಡ್ರೋನ್‌ಗಳನ್ನು ಬಳಸಿ ಮೂಡಿಸಿದ ಅತಿ ದೊಡ್ಡ ಪಕ್ಷಿಯ ಆಕೃತಿ’ ಎಂಬ ಅಧಿಕೃತ ಪ್ರಮಾಣಪತ್ರವನ್ನು ಸಂಘಟಕರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದರು.
‘ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ’ (ಸೆಸ್ಕ್) ಹಾಗೂ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ದೆಹಲಿ ಮೂಲದ ‘ಬೋಟ್‌ಲ್ಯಾಬ್ ಡೈನಾಮಿಕ್ಸ್’ ಸಂಸ್ಥೆಯು ಈ ಡ್ರೋನ್ ಶೋ ಅನ್ನು ಯಶಸ್ವಿಯಾಗಿ ನಿರ್ವಹಿಸಿತು.
ಇದನ್ನೂ ಓದಿ: ಶಿವಮೊಗ್ಗ ದಸರಾ ಅಂಬಾರಿ ಆನೆ ಸೋಮಣ್ಣ ಭಯಗೊಂಡು ಓಡಿದ್ದೇಕೆ? ತನಿಖಾ ವರದಿಯಲ್ಲಿ ಅಚ್ಚರಿಯ ಸಂಗತಿಗಳು ಬಹಿರಂಗ
2025ರ ದಸರಾ ಆಚರಣೆಯ ವೇಳೆ ಇದೇ ತಂಡ 2,983 ಡ್ರೋನ್‌ಗಳನ್ನು ಬಳಸಿ ಹಾರುವ ಹೂವಿನಿಂದ ಹಾರುವ ಹುಲಿಯ ಆಕೃತಿಯನ್ನು ಮೂಡಿಸಿ ದಾಖಲೆ ನಿರ್ಮಿಸಿತ್ತು.
ಮೈಸೂರು ದಸರಾವು ರಾಜಮನೆತನದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿದ್ಯುತ್ ದೀಪಾಲಂಕಾರಕ್ಕೆ ಹೆಸರುವಾಸಿಯಾಗಿದೆ. ಈ ಬಾರಿಯ ಡ್ರೋನ್ ಶೋ ಹಬ್ಬಕ್ಕೆ ಅತ್ಯಾಧುನಿಕ ರಂಗನ್ನು ನೀಡಿತು. ನವಿಲಿನ ಹೊರತಾಗಿ, 2026ರ ಈ ಪ್ರದರ್ಶನದಲ್ಲಿ ಸಿಂಹ, ಚಿಟ್ಟೆ, ತ್ರಿವರ್ಣ ಧ್ವಜ ಹಿಡಿದ ಯೋಧ ಹಾಗೂ ಚಾಮುಂಡೇಶ್ವರಿ ದೇವಿಯ ಆಕೃತಿಗಳು ಆಕಾಶದಲ್ಲಿ ಮೂಡಿಬಂದವು.
ಸಾವಿರಾರು ಡ್ರೋನ್‌ಗಳು ಏಕಕಾಲದಲ್ಲಿ ನಿಖರವಾಗಿ ಆಕೃತಿಗಳನ್ನು ರಚಿಸಲು ವಿಶೇಷ ಸಾಫ್ಟ್‌ವೇರ್‌ಗಳನ್ನು ಬಳಸಲಾಗುತ್ತದೆ. ‘ಸ್ಕೈಬ್ರಷ್’ ತಾಂತ್ರಿಕ ಮಾರ್ಗದರ್ಶನದ ಪ್ರಕಾರ, ಸಾಫ್ಟ್‌ವೇರ್ ಸಹಾಯದಿಂದ ಪ್ರತಿಯೊಂದು ಡ್ರೋನ್‌ಗೂ ನಿಗದಿತ ಹಾರಾಟದ ಹಾದಿ ಮತ್ತು ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಪ್ರತಿ ಡ್ರೋನ್‌ನಲ್ಲೂ ಬಣ್ಣ ಬದಲಾಯಿಸುವ ಎಲ್‌ಇಡಿ ದೀಪಗಳಿದ್ದು, ಅವುಗಳನ್ನು ಸೂಕ್ತ ತಂತ್ರಜ್ಞಾನದ ಮೂಲಕ ಸಂಯೋಜಿಸಿ ರೋಮಾಂಚಕ ವೈಮಾನಿಕ ಪ್ರದರ್ಶನಗಳನ್ನು ನೀಡಲಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




