ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021 ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ವಿಶೇಷ ವಿಭಿನ್ನವಾದ ದೀಪಾಲಂಕಾರ ಮಾಡಲಾಗಿದೆ. ರಾತ್ರಿ 10ರವರೆಗೆ ವಿದ್ಯುತ್ ದೀಪಾಲಂಕಾರದ ಸಮಯ ವಿಸ್ತರಿಸಲಾಗಿತ್ತು. 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗುವ ಹಿನ್ನೆಲೆ ರಾತ್ರಿ 10 ಗಂಟೆಯವರೆಗೆ ಮಾತ್ರ ವಿದ್ಯುತ್ ದೀಪಾಲಂಕಾರಕ್ಕೆ ಅನುಮತಿ ನೀಡಲಾಗಿದೆ.
ಈ ದೀಪಾಲಂಕಾರ ವ್ಯವಸ್ಥೆ 102.9 ಕಿಲೋ ಮೀಟರ್ ಮಾಡಲಾಗಿದೆ. ಬರೋಬ್ಬರಿ 40 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ರಾತ್ರಿ 6.30 ರಿಂದ ರಾತ್ರಿ 10 ಗಂಟೆಯವರೆಗೂ ದೀಪಾಲಂಕಾರ ವ್ಯವಸ್ಥೆ ಇರಲಿದೆ. ಮೈಸೂರಿನ ಪ್ರಮುಖ ರಸ್ತೆಗಳಾದ ಜಂಬೂ ಸವಾರಿ ಸಾಗುತ್ತಿದ್ದ ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಅರಮನೆ ಸುತ್ತಮುತ್ತಲಿನ ರಸ್ತೆ, ಚಾಮುಂಡಿಬೆಟ್ಟದ ರಸ್ತೆ ಸೇರಿ ಹಲವು ರಸ್ತೆಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಇದರ ಜೊತೆಗೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಗಳಿಂದ ಆಕರ್ಷಕ ಚಿತ್ತಾರವನ್ನು ಮೂಡಿಸಲಾಗಿದೆ. ದಸರಾ ಉದ್ಘಾಟನೆಯಾದ ಅಕ್ಟೋಬರ್ 7 ರಿಂದ ಜಂಬೂಸವಾರಿ ಮೆರವಣಿಗೆ ನಡೆಯುವ ಅಕ್ಟೋಬರ್ 15ರವರೆಗೆ ಈ ವಿದ್ಯುತ್ ದೀಪಾಲಂಕಾರ ಇರಲಿದೆ.
ಮೈಸೂರಿನಲ್ಲಿ ಸಾಂಪ್ರದಾಯಿಕ ಕುಸ್ತಿ ಆಯೋಜನೆ
ರಾಜ್ಯ ಸರ್ಕಾರ ಈ ಬಾರಿ ಕುಸ್ತಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಸಂಘದಿಂದ ಮೈಸೂರಿನಲ್ಲಿ ಸಾಂಪ್ರದಾಯಿಕ ಕುಸ್ತಿ ಆಯೋಜನೆ ಮಾಡಲಾಗಿದೆ. ಮೈಸೂರಿನ ಸಾಹುಕಾರ್ ಎಸ್.ಚನ್ನಯ್ಯ ಕುಸ್ತಿ ಅಖಾಡದಲ್ಲಿ ಆಯೋಜನೆ ಮಾಡಲಾಗಿದೆ. ಕುಸ್ತಿಯ ಅಖಾಡದಲ್ಲಿ ಹಿರಿಯ, ಕಿರಿಯ50 ಜೋಡಿಗಳ ಪೈಲ್ವಾನ್‌ಗಳು ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರ ಈ ಬಾರಿ ಕುಸ್ತಿ ರದ್ದು ಮಾಡಿದೆ ದಸರಾ ಕುಸ್ತಿ ಪರಂಪರೆ ನಿಲ್ಲಬಾರದು ಎಂದು ಕುಸ್ತಿ ಪಟುಗಳಿಂದ ಕುಸ್ತಿ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್; ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ ಬ್ಯಾನ್!