AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಕಳೆ ಹೆಚ್ಚಿಸಿದ ಹಂಸಲೇಖ ಸಂಗೀತ: ಗಾನದ ಮೋಡಿಯಲ್ಲಿ ತೇಲಿದ ಜನರು

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂಯೋಜಿಸಿದ ಸಂಗೀತದ ಅಲೆಗಳು ಸಂಗೀತ ರಸಿಕರ ಮನತಣಿಸುವಲ್ಲಿ ಯಶಸ್ವಿಯಾಯ್ತು.

ದಸರಾ ಕಳೆ ಹೆಚ್ಚಿಸಿದ ಹಂಸಲೇಖ ಸಂಗೀತ: ಗಾನದ ಮೋಡಿಯಲ್ಲಿ ತೇಲಿದ ಜನರು
ದಸರಾ ಪ್ರಯುಕ್ತ ಮೈಸೂರು ಅರಮನೆಯು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ
TV9 Web
| Edited By: |

Updated on: Oct 10, 2021 | 10:59 PM

Share

ಮೈಸೂರು: ಕೊರೊನಾ ಮಹಾಮಾರಿಯ ಭೀತಿಯ ನಡುವೆ ನಡೆಯುತ್ತಿರುವ ಸರಳ ದಸರಾ ದಿನೇದಿನೇ ಕಳೆಗಟ್ಟುತ್ತದೆ. ಮೈಸೂರು ಅರಮನೆಯ ಅಂಗಳದಲ್ಲಿ ನಡೆದ ಹಂಸಲೇಖ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ತಣ್ಣನೆಯ ತಿಳಿಗಾಳಿ, ಅಲ್ಲಲ್ಲಿ ವರುಣನ ಸಿಂಚನ, ಝಗಮಗಿಸುವ ದೀಪಗಳ ನಡುವೆ ಹೊಂಬೆಳಕಿನಿಂದ ಕಂಗೊಳಿಸುತ್ತಿದ್ದ ಮೈಸೂರು ಅರಮನೆ. ಅರಮನೆ ಆವರಣದಲ್ಲಿ ಸುಶ್ರಾವ್ಯ, ಸುಮಧುರ ಹಾಡು. ಹೌದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂಯೋಜಿಸಿದ ಸಂಗೀತದ ಅಲೆಗಳು ಸಂಗೀತ ರಸಿಕರ ಮನತಣಿಸುವಲ್ಲಿ ಯಶಸ್ವಿಯಾಯ್ತು.

ಮೊದಲಿಗೆ ರಾಜ ಮಹಾರಾಜ ಜನಗಳ ರಾಜ ಎಂದು ರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರನ್ನು ಸ್ಮರಿಸುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಂಡವು, ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಹಾಡುತ್ತಾ ಅರಮನೆ ಅಂಗಳದಲ್ಲಿ ಸುಮಧುರ ಗೀತೆಗಳ ಸುರಿಮಳೆಯನ್ನೇ ಸುರಿಸಿದರು.

ಗಾಯಕಿ ಪೃಥ್ವಿ ಅವರ ಸುಮಧುರ ಧ್ವನಿಯಲ್ಲಿ ಮೂಡಿಬಂದ ಓ ನನ್ನ ಚೇತನ ಆಗು ನೀ ಅನಿಕೇತನ, ಶ್ರೀ ಚಾಮುಂಡೇಶ್ವರಿ ಕುರಿತಾದ ಶ್ರೀ ಚಾಮುಂಡಿ ಮಹಾಮಾಯಾ, ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಅವರ ಕಂಠಸಿರಿಯಲ್ಲಿ ಮೂಡಿಬಂದ ಓಂ ಮಹಾಪ್ರಾಣ ದೀಪಂ ಶಿವಂ ಗೀತೆಯು ವೀಕ್ಷಕರನ್ನು ಭಕ್ತಿಯ ಕಡಲಲ್ಲಿ ತೇಲಿಸಿತು.

ನಮದೊಂದೇ ಭಾರತಂ ಗೀತೆಯನ್ನು ಹಾಡಿ ಸಭಿಕರೆಲ್ಲರಲ್ಲಿ ದೇಶಭಕ್ತಿ ಮೂಡಿಸಿದರು. ನಂತರ ಸರಿಗಮಪ ಚಾಂಪಿಯನ್ ಶಿಪ್‌ನ ಪುಟ್ಟ ಗಾಯಕಿ ಜ್ಞಾನ ಹಾಡಿದ ಆಗೋ ಕರ್ನಾಟಕ… ಎಂಬ ಸೊಗಸಾದ ಗೀತೆಯು ಸೂಜಿಗಲ್ಲಿನ ಹಾಗೆ ಎಲ್ಲರ ಗಮನ ಸೆಳೆಯಿತು. ಗಾಯಕ ಚಿನ್ಮಯ್ ಆತ್ರೇಯಾ ಅವರು ಹಾಡಿದ ಈ ಭೂಮಿ ಬಣ್ಣದ ಬುಗುರಿ ಗೀತೆಯು ಎಲ್ಲರೂ ತಲೆದೂಗುವಂತೆ ಮಾಡಿತು. ಬಳಿಕ ನೆನಪಿರಲಿ ಚಿತ್ರದ ಕೂರಕ್‌ ಕುಕ್ಕರಹಳ್ಳಿ ಕೆರೆ ಗೀತೆಯು ನೆರೆದಿದ್ದ ಯುವ ಮನಸುಗಳು ಹೆಜ್ಜೆಹಾಕುವಂತೆ ಮೋಡಿ ಮಾಡಿತು.

ಬಾಲ ಗಾಯಕ ಜ್ಞಾನೇಶ್ ಪ್ರಸ್ತುತಪಡಿಸಿದ ಪುಟ್ಟರಾಜ ಗವಾಯಿಗಳ ಗೀತೆಯು ಎಲ್ಲಾ ಪ್ರೇಕ್ಷಕರಿಂದಲೂ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು. ಗಾಯಕ ಮೋಹನ್ ಕೃಷ್ಣ ಅವರು ಹಾಡಿದ ಈ ಕನ್ನಡ ಮಣ್ಣನು ಮರಿಬೇಡ, ಓಂ ಬ್ರಹ್ಮಾನಂದ ಓಂಕಾರ ಹಾಗೂ ಲತಾ ಹಂಸಲೇಖ ಅವರು ಪ್ರಸ್ತುತಪಡಿಸಿದ ಎಲೆ ಹೊಂಬಿಸಿಲೆ.. ಮುಂತಾದ ಗೀತೆಗಳು ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಉಳಿದಂತೆ ಕನ್ನಡ ಚಿತ್ರಗಳ ಪ್ರಸಿದ್ದ ಹಾಡುಗಳು ಎಲ್ಲರನ್ನು ರಂಜಿಸಿದವು.

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ 2021: ಜಂಬೂಸವಾರಿಗೆ ದಿನಗಣನೆ, ಈ‌ ಬಾರಿ 6 ಸ್ತಬ್ಧಚಿತ್ರಗಳಿಗೆ ಅವಕಾಶ ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ: ಜಂಬೂಸವಾರಿ ವೇಳೆ ಬೆದರಿದ ಆನೆ; ತಪ್ಪಿದ ಅನಾಹುತ