ನಾಡದೇವತೆ ನೆಲೆ ನಿಂತ ಚಾಮುಂಡಿ ಬೆಟ್ಟ, ಮಹಿಷ ಬೆಟ್ಟವೇ? ಏನಿದು ವಿವಾದ
ಚಾಮುಂಡಿ ಬೆಟ್ಟದ ಹೆಸರನ್ನು ಮಹಿಷ ಬೆಟ್ಟ ಎಂದು ಮರು ನಾಮಕರಣ ಮಾಡುವ ಬಗ್ಗೆ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅಕ್ಟೋಬರ್ 13 ರಂದು ಮಹಿಷ ದಸರಾ ನಡೆಸಲು ಮಹಿಷಾಸುರ ಮಂಡಳಿ ಕರೆ ಕೊಟ್ಟಿದೆ. ಜೊತೆಗೆ ಅದರ ಆಹ್ವಾನ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಅಂತಾ ನಮೂದು ಮಾಡಲಾಗಿದೆ.
ಮೈಸೂರಿಗೆ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬರು ಒಮ್ಮೆಯಾದರೂ ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡೇ ನೀಡುತ್ತಾರೆ. ಅದರಲ್ಲೂ ಆಧ್ಯಾತ್ಮಿಕ ಭಾವನೆಯೊಳ್ಳವರು ತಪ್ಪದೇ ನಾಡದೇವತೆಯ ಸನ್ನಿಧಿಗೆ ತೆರಳಿ ತಾಯಿಯ ದರ್ಶನ ಮಾಡದೆ ಹಿಂತಿರುಗರು. ಆದರೆ ಈಗ ಚಾಮುಂಡಿ ಬೆಟ್ಟದ ಹೆಸರನ್ನು ಮಹಿಷ ಬೆಟ್ಟ (Mahisha Betta) ಎಂದು ಮರು ನಾಮಕರಣ ಮಾಡುವ ಬಗ್ಗೆ ಸುದ್ದಿಯೊಂದು ಸದ್ದು ಮಾಡುತ್ತಿದೆ.
ಹೌದು, ವಿಶ್ವವಿಖ್ಯಾತ ಮೈಸೂರು ದಸರಾ ಬಂತೆಂದರೆ ಸಾಕು ಮಹಿಷ ದಸರಾ ಮಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತದೆ. ಪರ-ವಿರೋಧ ಚರ್ಚೆಗಳು, ಹೋರಾಟಗಳು ಮುನ್ನೆಲೆಗೆ ಬರುತ್ತವೆ. ಇದರ ನಡುವೆ ಈಗ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಎನ್ನಬೇಕು ಎಂಬ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಗಲಿರುವ ಎರಡು ದಿನ ಮುಂಚೆ ಅಂದರೆ ಅಕ್ಟೋಬರ್ 13 ರಂದು ಮಹಿಷ ದಸರಾ ನಡೆಸಲು ಮಹಿಷಾಸುರ ಮಂಡಳಿ ಕರೆ ಕೊಟ್ಟಿದೆ. ಜೊತೆಗೆ ಅದರ ಆಹ್ವಾನ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಅಂತಾ ನಮೂದು ಮಾಡಲಾಗಿದೆ. ಹೀಗಾಗಿ ಚಾಮುಂಡಿ ದೇವತೆ ನೆಲೆಸಿರುವ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ಹೆಸರಿಡಲಾಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಮಹಿಷ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹರನ್ನ ಬಂಧಿಸಿ: ಮಾಜಿ ಮೇಯರ್ ಪುರುಷೋತ್ತಮ
ಮಹಿಷಾಸುರನ್ಯಾರು?
ಕಳಿಂಗ ಯುದ್ಧದ ನಂತರ ಅಶೋಕ ಮಹಾರಾಜನು ಬೌದ್ಧ ಧರ್ಮ ಸ್ವೀಕಾರ ಮಾಡಿದ. ನಂತರ ಬೌದ್ಧ ಧರ್ಮ ಪ್ರಚಾರ ಮಾಡಲು ಧರ್ಮ ಪ್ರಚಾರಕರನ್ನು ನೇಮಕ ಮಾಡಿದ. ಈ ಪೈಕಿ ಇಂದಿನ ಮೈಸೂರಿಗೆ ಧರ್ಮ ಪ್ರಚಾರಕನಾಗಿ ದ್ರಾವಿಡ ದೊರೆ ಮಹಿಷ ನೇಮಕಗೊಂಡ. ಹೀಗಾಗಿ ಮೈಸೂರು ನಗರ, ಸಂಸ್ಥಾನದ ಹೆಸರಿಗೂ ಕೂಡಾ ಮಹಿಷನ ಹೆಸರು ಸಂಬಂಧಿಸಿದೆ. 1449ರಲ್ಲಿ ಈ ಪ್ರಾಂತ್ಯಕ್ಕೆ ಮಹಿಷ ಎಂದು ಹೆಸರಿಡಲಾಗಿದೆ ಎಂದು ಕೆಲವರು ವಾದಿಸುತ್ತಾರೆ. ಇನ್ನು ಮಹಿಷಾಸುರ ಮಾನವೀಯ ಕಾಳಜಿ ಉಳ್ಳ ಬೌದ್ಧ ರಾಜ. ಬುಡಕಟ್ಟು ನಿವಾಸಿಗಳ ಜನಪ್ರಿಯ ನಾಯಕ. ಇವನ್ನೆಲ್ಲ ಸಹಿಸದ ಪುರೋಹಿತ ಶಾಹಿ, ಆರ್ಯರು ಆತ ಅಸುರ, ಆತನನ್ನು ಚಾಮುಂಡಿ ಮರ್ಧಿಸಿದಳು ಎಂದು ಕಥೆ ಕಟ್ಟಿದ್ದಾರೆ ಎಂದು ಕೆಲವರು ವಾದಿಸುತ್ತಾರೆ.
ಮತ್ತೊಂದೆಡೆ ದುರ್ಗೆ ಮತ್ತು ಮಹಿಷಾಸುರನ ನಡುವೆ ಒಂಬತ್ತು ದಿನಗಳ ಕಾಲ ಭೀಕರ ಯುದ್ಧ ನಡೆದು ಹತ್ತನೇ ದಿನ ದುರ್ಗಾ ದೇವಿ ಮಹಿಷಾಸುರನನ್ನು ಕೊಂದಳು ಎನ್ನಲಾಗುತ್ತದೆ. ಮಹಿಷಾಸುರನೆಂಬ ರಾಕ್ಷಸ ಭೂ ಲೋಕದಲ್ಲಿ ಬಹಳಷ್ಟು ದೌರ್ಜನ್ಯವೆಸಗುತ್ತಿದ್ದನಂತೆ. ಹೀಗಾಗಿ ದಶಮಿಯ ದಿನದಂದು, ಮಹಿಷಾಸುರನನ್ನು ತಾಯಿ ಕೊಂದಳು ಎನ್ನಲಾಗುತ್ತದೆ. ಸದ್ಯ ಈ ಬಗ್ಗೆ ನೂರಾರು ಕಥೆಗಳಿದ್ದು ಒಬ್ಬಬ್ಬರು ಒಂದೊಂದರ ಪರವಾಗಿ ವಾದ ಮಾಡುತ್ತಿದ್ದಾರೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ