ಮೈಸೂರು: ಐತಿಹಾಸಿಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೈಸೂರು ಅರಮನೆಗೆ ಇಂದು ದಸರಾ ಗಜಪಡೆ ಎಂಟ್ರಿಕೊಡಲಿದ್ದು, ಸಂಭ್ರಮ ಆರಂಭವಾಗಲಿದೆ. ರಾಜ ಬೀದಿಯ ಮೆರವಣಿಗೆಯೇ ಆಗಲಿ.. ಅರಮನೆ ಅಂಗಳಕ್ಕಷ್ಟೇ ಸವಾರಿ ಇರಲಿ.. ಮೈಸೂರು ದಸರಾ ಅಂದ ಮೇಲೆ ಗಜಪಡೆ ಇರಲೇಬೇಕು. ಹೀಗಾಗಿ, ಐತಿಹಾಸಿಕ ದಸರಾದ ಜಂಬೂಸವಾರಿಗಾಗಿ, ಆನೆಗಳ ತಂಡ ಸೆಪ್ಟೆಂಬರ್ 13ರಂದು ಕಾಡಿನಿಂದ ನಾಡಿನತ್ತ ಹೊರಟಿದ್ದು ಇಂದು (ಸೆಪ್ಟೆಂಬರ್ 16) ಮೈಸೂರು ಅರಮನೆಗೆ ಆಗಮಿಸಲಿವೆ.
ಕ್ಯಾಪ್ಟನ್ ಅಭಿಮನ್ಯು, ಅಶ್ವತ್ಥಾಮ, ಧನಂಜಯ, ವಿಕ್ರಮ, ಗೋಪಾಲಸ್ವಾಮಿ, ಕಾವೇರಿ, ಚೈತ್ರ, ಲಕ್ಷ್ಮೀ ಆನೆಗಳು ಸದ್ಯ ಅಶೋಕಪುರಂನ ಅರಣ್ಯ ಭವನದಲ್ಲಿದ್ದು ಬೆಳಗ್ಗೆ 7.30ಕ್ಕೆ ಅರಣ್ಯ ಭವನದಿಂದ ಹೊರಡಲಿವೆ. ಕಾಲ್ನಡಿಗೆಯ ಮೂಲಕ ಮೈಸೂರು ಅರಮನೆಗೆ ಆಗಮಿಸಲಿವೆ. ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣಕ್ಕೆ ಗಜಪಡೆ ಪ್ರವೇಶ ಮಾಡಲಿದ್ದು ಬೆಳಗ್ಗೆ 8.36ರಿಂದ 9.11ರ ಶುಭ ಲಗ್ನದಲ್ಲಿ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ S.T.ಸೋಮಶೇಖರ್‌ರಿಂದ ಪೂಜೆ ಸಲ್ಲಿಸಲಾಗುತ್ತೆ. ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಯನ್ನು ಗಣ್ಯರು ಸ್ವಾಗತಿಸಲಿದ್ದಾರೆ.
ಸೆ.8ಕ್ಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆನೆ ಪಟ್ಟಿ ಬಿಡುಗಡೆಯಾಗಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಬಣ್ಣದ ಚಿತ್ರವುಳ್ಳ ಕೈಪಿಡಿ ತಯಾರಿಸಲಾಗಿದೆ. ಗಜಪಯಣಕ್ಕೆ ಸೆ.13, 15 ಹಾಗೂ 16 ಒಳ್ಳೆ ದಿನವಾಗಿದೆ. ಅದರಲ್ಲೂ ಸೆ.13 ಭಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ ಒಳ್ಳೆದಿನ. ಅಂದು ಆನೆಗಳು ಅರಮನೆ ಪ್ರವೇಶಿಸುವುದು ಸೂಕ್ತ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.13 ರಂದು ಬೆಳಿಗ್ಗೆ 11 ಗಂಟೆ ನಂತರ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಸೆ.16 ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಕರೆದುಕೊಂಡು ಬರಲು ನಿರ್ಧಾರ ಮಾಡಲಾಗಿತ್ತು.
ಇದನ್ನೂ ಓದಿ: Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭ