AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾದಲ್ಲಿ ಈ ಬಾರಿ ಜಟ್ಟಿ ಕಾಳಗ ನಡೆಯದ್ದೇಕೆ? ಆ ದಿನ ನಡೆದ ಘಟನಾವಳಿಗಳ ಬಗ್ಗೆ ಉಸ್ತಾದ್ ಕೃಷ್ಣಾ ಜೆಟ್ಟಿ ಗಂಭೀರ ಆರೋಪ

ಮೈಸೂರು ದಸರಾ ವಿಜಯದಶಮಿಯಂದು ಜಟ್ಟಿ ಕಾಳಗದ ಸಿದ್ಧತೆ ವೇಳೆ ಪೊಲೀಸರು ತೊಂದರೆ ನೀಡಿದ್ದಾರೆ ಎಂದು ಉಸ್ತಾದ್ ಕೃಷ್ಣಾ ಜೆಟ್ಟಿ ಆರೋಪಿಸಿದ್ದಾರೆ. ಈ ಕುರಿತು ಪ್ರಮೋದಾದೇವಿ ಒಡೆಯರ್ ಅವರಿಗೆ ದೂರು ನೀಡಲು ನಿರ್ಧರಿಸಿದ್ದು, ಕಳೆದ ವರ್ಷವೂ ಕಿರುಕುಳ ಎದುರಿಸಿದ್ದಾಗಿ ಹೇಳಿದ್ದಾರೆ. ಸಮನ್ವಯದ ಕೊರತೆಯಿಂದ ಸಮಸ್ಯೆ ಉಂಟಾಗಿದೆ ಎಂದು ಪ್ರಮೋದಾದೇವಿ ಸೋಮವಾರ ಸ್ಪಷ್ಟನೆ ನೀಡಿದ್ದರು.

ಮೈಸೂರು ದಸರಾದಲ್ಲಿ ಈ ಬಾರಿ ಜಟ್ಟಿ ಕಾಳಗ ನಡೆಯದ್ದೇಕೆ? ಆ ದಿನ ನಡೆದ ಘಟನಾವಳಿಗಳ ಬಗ್ಗೆ ಉಸ್ತಾದ್ ಕೃಷ್ಣಾ ಜೆಟ್ಟಿ ಗಂಭೀರ ಆರೋಪ
ಉಸ್ತಾದ್ ಕೃಷ್ಣಾ ಜೆಟ್ಟಿ
ರಾಮ್​, ಮೈಸೂರು
| Edited By: |

Updated on:Oct 27, 2026 | 1:07 PM

Share

ಮೈಸೂರು, ಅಕ್ಟೋಬರ್ 27: ವಿಶ್ವವಿಖ್ಯಾತ ಮೈಸೂರು ದಸರಾ ವಿಜಯದಶಮಿಯಂದು ನಡೆಯಬೇಕಿದ್ದ ಜಟ್ಟಿ ಕಾಳಗಕ್ಕೆ ಸಂಬಂಧಿಸಿದಂತೆ ಈ ಬಾರಿ ಉಂಟಾದ ಅಡಚಣೆ ವಿವಾದಕ್ಕೆ ಕಾರಣವಾಗಿದೆ. ಜಟ್ಟಿ ಕಾಳಗದ ಸಿದ್ಧತೆ ವೇಳೆ ಪೊಲೀಸರು ತಮಗೆ ತೊಂದರೆ ನೀಡಿದ್ದಾರೆ ಎಂದು ಬೆಂಗಳೂರಿನ ಉಸ್ತಾದ್ ಕೃಷ್ಣಾ ಜೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ವರ್ಷವೂ ಇದೇ ರೀತಿಯ ಕಿರುಕುಳ ಎದುರಿಸಿದ್ದೇವೆ ಎಂದು ಜಟ್ಟಿಗಳು ಆರೋಪಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಅರಮನೆಯ ಭದ್ರತಾ ವ್ಯವಸ್ಥೆಯಲ್ಲಿ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬದಲಾಯಿಸಬೇಕು ಎಂಬ ಆಗ್ರಹವನ್ನೂ ಅವರು ಮುಂದಿಟ್ಟಿದ್ದಾರೆ.

ವಿಜಯದಶಮಿ ದಿನ ಬೆಳಗ್ಗೆಯೇ ತಡೆದ ಪೊಲೀಸರು?

ಉಸ್ತಾದ್ ಕೃಷ್ಣಾ ಜೆಟ್ಟಿ ಹೇಳಿರುವ ಪ್ರಕಾರ, ವಿಜಯದಶಮಿಯಂದು ವಜ್ರಮುಷ್ಟಿ ಕಾಳಗದ ಹಿನ್ನೆಲೆಯಲ್ಲಿ ಬೆಳಗ್ಗೆ ಸುಮಾರು 7 ಗಂಟೆಗೆ ಜಟ್ಟಿಗಳು ಮತ್ತು ಸಮವಸ್ತ್ರ ಧರಿಸಿದ್ದ ಪೈಲ್ವಾನರು ಅರಮನೆಯ ಗೇಟ್ ಬಳಿ ತೆರಳಿದ್ದರು. ಆದರೆ, ಕಾರು ಪಾಸ್ ಹಾಗೂ ಪ್ರವೇಶ ಪಾಸ್ ಇದ್ದರೂ ಪೊಲೀಸರು ಒಳಗೆ ಬಿಡದೆ ತಡೆದಿದ್ದಾರೆ. ಬೆಳಗ್ಗೆ 9 ಅಥವಾ 10 ಗಂಟೆಗೆ ಬರುವಂತೆ ಸೂಚಿಸಿದ್ದರಿಂದ ಪೂಜೆ ಹಾಗೂ ಕಾಳಗಕ್ಕೆ ಪೈಲ್ವಾನರನ್ನು ಸಿದ್ಧಪಡಿಸಿ ಅರಮನೆಯೊಳಗೆ ಕರೆತರುವ ಕಾರ್ಯಕ್ಕೆ ತೊಂದರೆಯಾಯಿತು ಎಂದು ಅವರು ಹೇಳಿದ್ದಾರೆ.

ಪೊಲೀಸರು ತಡೆದು ಮಾತನಾಡಿದಾಗ ತಾವು ಸ್ವಲ್ಪ ಕೋಪಗೊಂಡು ಜೋರಾಗಿ ಮಾತನಾಡಬೇಕಾಯಿತು. ಬಳಿಕ ಕೆಲವು ಇನ್ಸ್‌ಪೆಕ್ಟರ್‌ಗಳು ಸ್ಥಳಕ್ಕೆ ಬಂದು ಸಮಾಧಾನಪಡಿಸಿದರು. ಅಂತಿಮವಾಗಿ ಬೆಳಗ್ಗೆ ಸುಮಾರು 7.30ರ ವೇಳೆಗೆ ಅರಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು ಎಂದು ಕೃಷ್ಣಾ ಜೆಟ್ಟಿ ತಿಳಿಸಿದ್ದಾರೆ.

ಎಸಿಬಿ ಅಧಿಕಾರಿ ಚಂದ್ರಶೇಖರ್ ವಿರುದ್ಧವೂ ಆರೋಪ

ಅರಮನೆಯೊಳಗೆ ಹೋದ ಬಳಿಕವೂ ಪೂಜೆ ಮಾಡುವವರನ್ನು ಗೇಟ್‌ನಿಂದ ಒಳಗೆ ಕಳುಹಿಸಿಲ್ಲ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿ ಚಂದ್ರಶೇಖರ್ ಅವರನ್ನು ಸಂಪರ್ಕಿಸಿ, ಅವರನ್ನು ಬೇಗ ಒಳಗೆ ಕಳುಹಿಸುವಂತೆ ಮನವಿ ಮಾಡಿದ್ದಾಗಿ ಕೃಷ್ಣಾ ಜೆಟ್ಟಿ ಹೇಳಿದ್ದಾರೆ. ಆದರೆ, ತಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಕೃಷ್ಣಾ ಜೆಟ್ಟಿ ಮಾತಿನ ವಿಡಿಯೋ

ನಂತರ ರಾಜಮಾತೆಯವರ ಕಡೆಯವರು ಸ್ಥಳಕ್ಕೆ ಬಂದಿದ್ದರು. ಈ ಬೆಳವಣಿಗೆಗಳ ಹಿಂದೆ ಎಸಿಬಿ ಅಧಿಕಾರಿಗಳು ಹಾಗೂ ಅವರ ಹಿಂದೆ ಇರುವ ಇತರ ಪ್ರಮುಖರ ಕೈವಾಡವಿರಬಹುದು ಎಂಬ ಸಂಶಯವನ್ನೂ ಕೃಷ್ಣಾ ಜೆಟ್ಟಿ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಮುತ್ತಾತಂದಿರ ಕಾಲದ ಸಂಪ್ರದಾಯಕ್ಕೆ ಉದ್ದೇಶಪೂರ್ವಕ ಅಡ್ಡಿ?

ತಮ್ಮ ಮುತ್ತಾತಂದಿರ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಕಳೆದ ವರ್ಷ ಮತ್ತು ಈ ವರ್ಷ ಅಡ್ಡಿಪಡಿಸಲಾಗಿದೆ ಎಂದು ಉಸ್ತಾದ್ ಕೃಷ್ಣಾ ಜೆಟ್ಟಿ ಆರೋಪಿಸಿದ್ದಾರೆ. ಇದು ಕೇವಲ ಸಮನ್ವಯದ ಕೊರತೆಯಿಂದ ಉಂಟಾದ ಸಮಸ್ಯೆಯಲ್ಲ; ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ ಎಂಬುದು ಅವರ ಆರೋಪ.

ತಾಯಿ ಚಾಮುಂಡೇಶ್ವರಿ ದೇವಿಯ ಪ್ರಾರ್ಥನೆ ಹಾಗೂ ಕರ್ನಾಟಕದ ಶಾಂತಿ ಮತ್ತು ನಂಬಿಕೆಗಾಗಿ ನಡೆಸಿಕೊಂಡು ಬರುತ್ತಿರುವ ಆಚರಣೆಗೆ ಅಡ್ಡಿಪಡಿಸುತ್ತಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಗೆ ದೂರು ನೀಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಜಟ್ಟಿ ಕಾಳಗ ರದ್ದತಿ ಬಗ್ಗೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ಇನ್ನೊಂದೆಡೆ, ಜಟ್ಟಿ ಕಾಳಗ ರದ್ದಾಗಿರುವ ಕುರಿತು ಪ್ರಮೋದಾದೇವಿ ಒಡೆಯರ್ ಸೋಮವಾರ ಸ್ಪಷ್ಟನೆ ನೀಡಿದ್ದರು. ಜಟ್ಟಿ ಕಾಳಗ ರದ್ದಾಗಿರುವುದು ಇದೇ ಮೊದಲಲ್ಲ; 1970 ಮತ್ತು 1980ರಲ್ಲಿಯೂ ಎರಡು ಬಾರಿ ರದ್ದಾಗಿತ್ತು ಎಂದು ಅವರು ತಿಳಿಸಿದ್ದಾರೆ. ಜಟ್ಟಿ ಕಾಳಗಕ್ಕೆ ಪ್ರತ್ಯೇಕ ಧಾರ್ಮಿಕ ಮಹತ್ವ ಅಥವಾ ಸಂಕೇತಾರ್ಥವಿಲ್ಲ. ಅದು ಕುಸ್ತಿ ಪಂದ್ಯದ ಅಂತ್ಯವಾಗಿದ್ದು, ಬೂದುಕುಂಬಳಕಾಯಿ ಕತ್ತರಿಸುವ ವಿಧಿಯೇ ಅರಮನೆಯ ಆಚರಣೆಯ ಸೂಚಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಸರಾ ಅಂಬಾರಿ ಆನೆ ಆಯ್ಕೆ ವಿಚಾರ ನನ್ನಿಂದ ಮುಚ್ಚಿಡಲಾಗಿತ್ತು, ಪ್ರಮೋದಾದೇವಿ ಒಡೆಯರ್ ಬೇಸರ

ಪೊಲೀಸರು ಮತ್ತು ಜಟ್ಟಿ ಉಸ್ತಾದರ ನಡುವೆ ಸಮನ್ವಯದ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಇಂತಹ ಸಮಸ್ಯೆ ಪ್ರತಿ ವರ್ಷವೂ ಎದುರಾಗುತ್ತಿದ್ದು, ಇದು ಹೊಸದಲ್ಲ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Tue, 27 October 26

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More