AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಹತ್ತು ಹಲವು ವಿಶೇಷತೆಗಳು: ಇಲ್ಲಿದೆ ಸಂಪೂರ್ಣ ಮಾಹಿತಿ

ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಅಂತಿಮ ಹಂತದ ಸಿದ್ಧತೆ ಜೋರಾಗಿ ನಡೆದಿದೆ. ಅಂಬಾರಿ ಹೊತ್ತು ಹೆಜ್ಜೆ ಹಾಕಲು ಗಜಪಡೆ ಸಿದ್ಧವಾಗಿದೆ. ಜಂಬೂಸವಾರಿಯ ಮೆರವಣಿಗೆಯಲ್ಲಿ 53 ಸ್ತಬ್ಧಚಿತ್ರಗಳು ಸಾಗಲಿವೆ. ಸ್ಯಾಂಡಲ್‌ವುಡ್ ತಾರೆಯರು ಮೆರವಣಿಗೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇನ್ನು 9 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.

ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಹತ್ತು ಹಲವು ವಿಶೇಷತೆಗಳು: ಇಲ್ಲಿದೆ ಸಂಪೂರ್ಣ ಮಾಹಿತಿ
ಮೈಸೂರು ದಸರಾ
ರಾಮ್​, ಮೈಸೂರು
| Edited By: |

Updated on: Oct 19, 2026 | 7:28 PM

Share

ಮುಖ್ಯಾಂಶಗಳು

  • ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ
  • ಜಂಬೂಸವಾರಿಯಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮೆರವಣಿಗೆ
  • ದಸರಾ ಭದ್ರತೆಗೆ 9 ಸಾವಿರ ಪೊಲೀಸರ ನಿಯೋಜನೆ

ಮೈಸೂರು, ಅಕ್ಟೋಬರ್​​ 19: ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅರಮನೆ ಅಂಗಳದಲ್ಲಿ ತಾಲೀಮು ಜೋರಾಗಿದೆ. ಚಿನ್ನದ ಅಂಬಾರಿ ಹೊರುವ ಗಜಪಡೆ ಸಿದ್ಧವಾಗುತ್ತಿದೆ. ಮತ್ತೊಂದೆಡೆ ಜಂಬೂಸವಾರಿಯಲ್ಲಿ ಸಾಗಲಿರುವ 53 ಸ್ತಬ್ಧಚಿತ್ರಗಳ ಅಂತಿಮ ಹಂತದ ಸಿದ್ಧತೆ ಕೂಡ ಭರದಿಂದ ಸಾಗಿದೆ. ಈ ಬಾರಿ ಸ್ಯಾಂಡಲ್‌ವುಡ್ ತಾರೆಯರೂ ಅಂಬಾರಿ ಬಸ್‌ ಮೆರವಣಿಗೆಯಲ್ಲಿ ಸಾಗುವ ಸಾಧ್ಯತೆ ಇದೆ.

ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ

ಮೈಸೂರು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ಜೋರಾಗಿ ನಡೆದಿದೆ. ಗಜಪಡೆ, ಅಶ್ವಾರೋಹಿ ದಳದ ಕುದುರೆಗಳು ಹಾಗೂ ಪೊಲೀಸ್ ಬ್ಯಾಂಡ್ ತಂಡ ತಾಲೀಮಿನಲ್ಲಿ ಭಾಗವಹಿಸಿವೆ. ಈ ಬಾರಿ ಜಂಬೂಸವಾರಿಯ ನಾಯಕತ್ವ ವಹಿಸಲಿರುವ ಆನೆ ಪ್ರಶಾಂತ್‌ಗೆ ಅರಣ್ಯಾಧಿಕಾರಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ತರಬೇತಿ ಪಡೆದ ಗಜಪಡೆ, ಅಂಬಾರಿ ಹೊರುವ ಜವಾಬ್ದಾರಿ ಸೇರಿದಂತೆ ಮೆರವಣಿಗೆಯ ವಿವಿಧ ಕಾರ್ಯಗಳಿಗೆ ಸಜ್ಜಾಗುತ್ತಿದೆ. ಅರಮನೆಯ ಸಾಂಪ್ರದಾಯಿಕ ವೈಭವವನ್ನು ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿವೆ 53 ಸ್ತಬ್ಧಚಿತ್ರಗಳು

ಮೈಸೂರಿನ ಬಂಡಿಪಾಳ್ಯ ಆರ್‌ಎಂಸಿ ವಾರ್ಡ್‌ನಲ್ಲಿ ಸ್ತಬ್ಧಚಿತ್ರಗಳ ಅಂತಿಮ ಹಂತದ ಸಿದ್ಧತೆ ಬಿರುಸಿನಿಂದ ಸಾಗಿದೆ. ಹಗಲು-ರಾತ್ರಿ ಎನ್ನದೆ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಳೆದ ಹತ್ತು ದಿನಗಳಿಂದ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಒಟ್ಟು 53 ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಇದನ್ನೂ ಓದಿ: ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಈ ಚಾನ್ಸ್ ಮಿಸ್ ಮಾಡ್ಕೋಬೇಡಿ

ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸುವ 11 ಸ್ತಬ್ಧಚಿತ್ರಗಳು, ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಯೋಜನೆಗಳನ್ನು ಪರಿಚಯಿಸುವ 18 ಸ್ತಬ್ಧಚಿತ್ರಗಳು, ಹೊರರಾಜ್ಯಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಏಳು ಸ್ತಬ್ಧಚಿತ್ರಗಳು, ಕರ್ನಾಟಕದ 16 ಜಿಲ್ಲೆಗಳ ಐತಿಹಾಸಿಕ ತಾಣ, ಸಂಸ್ಕೃತಿ, ಜೀವನಶೈಲಿ ಹಾಗೂ ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳು ಈ ಬಾರಿಯ ಮೆರವಣಿಗೆಯ ವಿಶೇಷವಾಗಲಿವೆ. ಅರಮನೆ ಆವರಣದಿಂದ ಆರಂಭವಾಗಿ ಬನ್ನಿಮಂಟಪದವರೆಗೆ ಸಾಗುವ ಈ ಮೆರವಣಿಗೆ, ನಾಡಿನ ವೈವಿಧ್ಯತೆಯ ಅನಾವರಣಕ್ಕೆ ಸಾಕ್ಷಿಯಾಗಲಿದೆ.

ಜಂಬೂಸವಾರಿಯಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮೆರವಣಿಗೆ

ಸ್ತಬ್ಧಚಿತ್ರಗಳ ಜೊತೆಗೆ ಸ್ಯಾಂಡಲ್‌ವುಡ್ ತಾರೆಯರು ವಿಶೇಷ ಅಂಬಾರಿ ಬಸ್‌ಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಸಾಧ್ಯತೆ ಇದೆ. ಇದಕ್ಕಾಗಿ ಬಂಡಿಪಾಳ್ಯದ ಆರ್‌ಎಂಸಿ ವಾರ್ಡ್‌ನಲ್ಲಿ ಎರಡು ವಿಶೇಷ ಅಂಬಾರಿ ಬಸ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ಸಾಧನೆ, ಸಿನಿಮಾ ಸಂಸ್ಕೃತಿ ಹಾಗೂ ಜನಪ್ರಿಯ ಕಲಾವಿದರ ನೆನಪುಗಳನ್ನು ಸಾರುವ ರೀತಿಯಲ್ಲಿ ಬಸ್‌ಗಳನ್ನು ಅಲಂಕರಿಸಲಾಗಿದೆ. ಶಂಕರ್ ನಾಗ್, ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭಾಕರ್, ವರನಟ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್​​ಅವರ ಭಾವಚಿತ್ರಗಳು ರಾರಾಜಿಸುತ್ತಿವೆ. ಯಶ್, ಶಿವರಾಜ್‌ ಕುಮಾರ್, ಸುದೀಪ್, ರಿಷಬ್ ಶೆಟ್ಟಿ, ದುನಿಯಾ ವಿಜಯ್, ರಚಿತಾ ರಾಮ್, ಸಪ್ತಮಿ ಗೌಡ ಸೇರಿದಂತೆ ಹಲವು ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.

ದಸರಾ ಭದ್ರತೆಗೆ 9 ಸಾವಿರ ಪೊಲೀಸರ ನಿಯೋಜನೆ

ಮೈಸೂರು ದಸರಾ ಮಹೋತ್ಸವದ ಭದ್ರತೆಗಾಗಿ ರಾಜ್ಯದ 30 ಜಿಲ್ಲೆಗಳಿಂದ ಸುಮಾರು 9 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್, ಬಾಂಬ್ ಪತ್ತೆ ದಳ, ಗರುಡ ಪಡೆ, ಬಾಂಬ್ ನಿಷ್ಕ್ರಿಯ ದಳ ಹಾಗೂ ಸುಮಾರು 1,800 ಹೋಂಗಾರ್ಡ್‌ಗಳು ಸೇರಿದಂತೆ ವಿವಿಧ ಭದ್ರತಾ ತುಕಡಿಗಳನ್ನು ನಿಯೋಜಿಸಲಾಗಿದೆ.

LIVE TV

ದಸರಾ ಭದ್ರತೆಯ ಹಿಂದೆ ಸಾವಿರಾರು ಪೊಲೀಸರ ಪರಿಶ್ರಮವಿದ್ದರೆ, ಅವರ ಹೊಟ್ಟೆ ತುಂಬಿಸುವ ಹೊಣೆ ಹೊತ್ತಿರುವ ಅಡುಗೆ ಸಿಬ್ಬಂದಿಯ ಸೇವೆಯೂ ಗಮನ ಸೆಳೆಯುತ್ತಿದೆ. ಹಬ್ಬದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸಮಯಕ್ಕೆ ಸರಿಯಾಗಿ ಆಹಾರ ಒದಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸುಮಾರು 10 ಸಾವಿರ ಸಿಬ್ಬಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

100 ಬಾಣಸಿಗರಿಂದ ಅಡುಗೆ ತಯಾರಿ: ಮೆನು ಹೀಗಿದೆ

ಇಡ್ಲಿ, ವಡೆ, ಚೌಚೌ ಬಾತ್, ಪೊಂಗಲ್, ಟೊಮೆಟೊ ಬಾತ್, ಅವಲಕ್ಕಿ ಸೇರಿದಂತೆ ವಿವಿಧ ತಿಂಡಿಗಳು ಬೆಳಗಿನ ಉಪಹಾರದ ಮೆನುವಿನಲ್ಲಿವೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಚಪಾತಿ, ಕುರ್ಮಾ, ಪಲ್ಯ, ಅನ್ನ, ಸಾಂಬಾರ್, ಮಜ್ಜಿಗೆ, ಸಿಹಿ ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ. ಸುಮಾರು 100 ಬಾಣಸಿಗರು ಹಾಗೂ 100 ಅಡುಗೆ ಸಿಬ್ಬಂದಿ ಆಹಾರ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರದ ಸುಮಾರು 15 ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಪಾರ್ಸೆಲ್ ಮೂಲಕ ಊಟ ತಲುಪಿಸಲಾಗುತ್ತಿದೆ.

ಬನ್ನಿಮಂಟಪದಲ್ಲಿ ಸೂರ್ಯಕಿರಣ್ ಏರ್ ಶೋ

ನಗರದ ಬನ್ನಿಮಂಟಪದಲ್ಲಿ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಿಂದ ಎರಡನೇ ದಿನದ ಏರ್ ಶೋ ಆಯೋಜಿಸಲಾಯಿತು. ಹಿಂದಿನ ದಿನ ಹವಾಮಾನ ವೈಪರೀತ್ಯದಿಂದಾಗಿ ಕೇವಲ 10 ನಿಮಿಷಗಳಿಗೆ ಸೀಮಿತವಾಗಿದ್ದ ಪ್ರದರ್ಶನ, ಇಂದು ಸುಮಾರು 20 ನಿಮಿಷಗಳ ಕಾಲ ನಡೆಯಿತು. ಆಕಾಶದಲ್ಲಿ ವಿಮಾನಗಳ ಸಾಹಸಮಯ ಹಾರಾಟ, ವೇಗದ ಚಲನೆ ಹಾಗೂ ವಿವಿಧ ವೈಮಾನಿಕ ಕಸರತ್ತುಗಳನ್ನು ಕಂಡು ಸಾವಿರಾರು ಜನರು ರೋಮಾಂಚನಗೊಂಡರು. ದಸರಾ ಸಂಭ್ರಮಕ್ಕೆ ವೈಮಾನಿಕ ಪ್ರದರ್ಶನ ಮತ್ತಷ್ಟು ಮೆರುಗು ನೀಡಿತು.

ಮಾವುತರು, ಕಾವಾಡಿಗಳ ಕುಟುಂಬದೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಹಾರ

ಮೈಸೂರು ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗಳ ಕುಟುಂಬದ ಸದಸ್ಯರಿಗಾಗಿ ಉಪಹಾರ ಕೂಟ ಆಯೋಜಿಸಲಾಗಿತ್ತು. ಪ್ರತಿವರ್ಷವು ಉಪಹಾರ ಕೂಟ ಆಯೋಜಿಸುವ ಶೋಭಾ ಕರಂದ್ಲಾಜೆ, ಈ ಬಾರಿ ಕೂಡ ಕುಟುಂಬದವರೊಂದಿಗೆ ಸಮಯ ಕಳೆದರು. ವಿಶೇಷವೆಂದರೆ, ಶೋಭಾ ಕರಂದ್ಲಾಜೆ ಅವರೇ ಮಾವುತರಿಗೆ ಒಬ್ಬಟ್ಟು ಸೇರಿದಂತೆ ಉಪಹಾರವನ್ನು ಬಡಿಸಿದರು. ಈ ಕಾರ್ಯಕ್ರಮದ ಮೂಲಕ ಜಂಬೂಸವಾರಿಯ ಯಶಸ್ಸಿನ ಹಿಂದೆ ಶ್ರಮಿಸುವ ಮಾವುತರು ಮತ್ತು ಕಾವಾಡಿಗಳ ಸೇವೆಯನ್ನು ಗೌರವಿಸಲಾಯಿತು.

ಮೈಸೂರಿನಲ್ಲಿ ಐದು ಸಾವಿರ ಗೊಂಬೆಗಳ ವೈಭವ

ಮೈಸೂರು ಭಾಗದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸಿ ಪೂಜಿಸುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಸಂಪ್ರದಾಯವನ್ನು ಇಂದಿಗೂ ಹಲವು ಕುಟುಂಬಗಳು ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿವೆ. ಮೈಸೂರಿನ ಗಿರಿದರ್ಶಿನಿ ಲೇಔಟ್‌ನ ಗೀತಾ ಶ್ರೀಹರಿ ಅವರ ಮನೆಯಲ್ಲಿ ಗೊಂಬೆಗಳ ವಿಶೇಷ ಪ್ರದರ್ಶನ ಗಮನ ಸೆಳೆಯಿತು. ಕಳೆದ 19 ವರ್ಷಗಳಿಂದ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಅವರು, ಈ ಬಾರಿ ಸುಮಾರು ಐದು ಸಾವಿರ ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಇದನ್ನೂ ಓದಿ: ದೀಪಾಲಂಕಾರದಿಂದ ಮೈಸೂರು ಝಗಮಗ: ಪ್ರವಾಸೊಗರ ಕಣ್ಣನ ಸೆಳೆಯುತ್ತಿದೆ ಲೈಟಿಂಗ್ಸ್​​

ಒಟ್ಟಾರೆ ಕಲೆ, ಸಂಸ್ಕೃತಿ, ಪರಂಪರೆ, ಸಾಹಸ ಹಾಗೂ ಮಾನವೀಯತೆಯ ಹಲವು ಮಜಲುಗಳನ್ನು ಒಳಗೊಂಡ ಮೈಸೂರು ದಸರಾ 2026 ಸಂಭ್ರಮದ ಅಂತಿಮ ಘಟ್ಟದತ್ತ ಸಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್