ಮೈಸೂರು ಫಿನಾಯಿಲ್ ಫ್ಯಾಕ್ಟರಿ ಕೇಸ್​ಗೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಎನ್​ಸಿಬಿ, ಸರ್ಕಾರಕ್ಕೆ ಮುಖಭಂಗ

ಮೈಸೂರಿನಲ್ಲಿ ಫಿನಾಯಿಲ್ ಫ್ಯಾಕ್ಟರಿ ಸೋಗಿನಲ್ಲಿದ್ದ ಹೈಟೆಕ್ ಡ್ರಗ್ಸ್ ಲ್ಯಾಬ್ ಭೇದಿಸಿರುವುದಾಗಿ ದೆಹಲಿಯ ಎನ್​ಸಿಬಿ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ. ಜೈಲಿನಿಂದ ಬಿಡುಗಡೆಯಾದ ಮಾಸ್ಟರ್ ಮೈಂಡ್ ಡ್ರಗ್ಸ್ ತಯಾರಿಕೆ ಕಲಿತು ಈ ಮೈಸೂರಿನಲ್ಲಿ ರಹಸ್ಯ ಲ್ಯಾಬ್ ಆರಂಭಿಸಿದ್ದ ಎಂದೂ ಎನ್​ಸಿಬಿ ತಿಳಿಸಿದೆ.

ಮೈಸೂರು ಫಿನಾಯಿಲ್ ಫ್ಯಾಕ್ಟರಿ ಕೇಸ್​ಗೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಎನ್​ಸಿಬಿ, ಸರ್ಕಾರಕ್ಕೆ ಮುಖಭಂಗ
ಮೈಸೂರು ಡ್ರಗ್ಸ್ ಫ್ಯಾಕ್ಟರಿ
Edited By:

Updated on: Jan 31, 2026 | 11:39 AM

ಮೈಸೂರು, ಜನವರಿ 31: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ಮಾಡಿದಾಗ ಸಿಕ್ಕಿದ್ದು ಫಿನಾಯಿಲ್ ಫ್ಯಾಕ್ಟರಿ ಎಂಬ ಗೃಹ ಸಚಿವ ಜಿ ಪರಮೇಶ್ವರ (G Prameshwara) ಹೇಳಿಕೆಗೆ ಈಗ ತೀವ್ರ ಹಿನ್ನಡೆಯಾಗಿದೆ. ಅಲ್ಲದೆ, ದಾಳಿ ನಡೆಸಿದ್ದ ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಹೈಟೆಕ್ ಡ್ರಗ್ಸ್ ಲ್ಯಾಬ್ ಪತ್ತೆಯಾಗಿರುವುದನ್ನು ಖಚಿತಪಡಿಸಿದೆ. ಇದರೊಂದಿಗೆ, ಕರ್ನಾಟಕ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.

ಮೈಸೂರು ಡ್ರಗ್ಸ್ ಫ್ಯಾಕ್ಟರಿ ಬಗ್ಗೆ ಎನ್​​ಸಿಬಿ ಹೇಳಿದ್ದೇನು?

ಗುಜರಾತ್ ಮತ್ತು ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಮಾದಕ ದ್ರವ್ಯ ಜಾಲವನ್ನು ಭೇದಿಸಲಾಗಿದೆ. ಸುಮಾರು 10 ಕೋಟಿ ರೂಪಾಯಿ ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಮತ್ತು 25.6 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎನ್​​ಸಿಬಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಫಿನಾಯಿಲ್ ಫ್ಯಾಕ್ಟರಿ ಹೆಸರಲ್ಲಿ ರಹಸ್ಯ ಡ್ರಗ್ಸ್ ಲ್ಯಾಬ್!

ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಸೋಗಿನಲ್ಲಿ ಈ ಡ್ರಗ್ಸ್ ಘಟಕ ಕಾರ್ಯನಿರ್ವಹಿಸುತ್ತಿತ್ತು. ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ವಸ್ತುಗಳು ದೊರೆತಿವೆ ಎಂಬುದು ಎನ್​​ಸಿಬಿ ಪತ್ರಿಕಾ ಪ್ರಕಟಣೆಯಿಂದ ತಿಳಿದುಬಂದಿದೆ.

ಜೈಲಿನಿಂದ ಹೊರಬಂದು ಮೈಸೂರಿನಲ್ಲಿ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಆರೋಪಿ

ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆಯನ್ನು ಕಲಿತಿದ್ದ ಮಾಸ್ಟರ್ ಮೈಂಡ್ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ಬಳಿಕ ಮೈಸೂರಿನಲ್ಲಿ ಈ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಎಂದು ಎನ್​ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ

ಈ ಪ್ರಕರಣದ ಆರಂಭದಲ್ಲಿ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಮೈಸೂರಿನಲ್ಲಿ ಪತ್ತೆಯಾಗಿರುವುದು ಕೇವಲ ಫಿನಾಯಿಲ್ ಫ್ಯಾಕ್ಟರಿ ಎಂದು ಹೇಳಿಕೆ ನೀಡಿದ್ದರು. ಅಲ್ಲಿ ಯಾವುದೇ ಮಾದಕ ವಸ್ತು ಅಥವಾ ತಯಾರಿಕಾ ಕಚ್ಚಾ ವಸ್ತುಗಳು ಸಿಕ್ಕಿಲ್ಲ ಎಂದು ಸ್ಥಳೀಯ ಪೊಲೀಸರ ವರದಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಈಗ ಕೇಂದ್ರ ಸಂಸ್ಥೆಯಾದ ಎನ್​ಸಿಬಿ, ಇದು ಪೂರ್ಣ ಪ್ರಮಾಣದ ‘ರಹಸ್ಯ ಡ್ರಗ್ಸ್ ಲ್ಯಾಬ್’ ಎಂದು ಸಾಕ್ಷ್ಯ ಸಮೇತ ಬಹಿರಂಗಪಡಿಸಿರುವುದು ರಾಜ್ಯ ಸರ್ಕಾರದ ಗುಪ್ತಚರ ಮತ್ತು ಸ್ಥಳೀಯ ತನಿಖಾ ವೈಫಲ್ಯವನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿ: ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಮೈಸೂರಲ್ಲಿ ದಾಳಿ ಬೆನ್ನಲ್ಲೇ ಅಶೋಕ್ ವಾಗ್ದಾಳಿ

ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ಈ ಘಟಕಕ್ಕೆ ರಾಸಾಯನಿಕ ಪೂರೈಸುತ್ತಿದ್ದ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ. ‘ನಶಾ ಮುಕ್ತ ಭಾರತ’ ಅಭಿಯಾನದಡಿ ದೇಶಾದ್ಯಂತ ಇಂತಹ ರಹಸ್ಯ ಘಟಕಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ ಎಂದು ಎನ್​ಸಿಬಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ