
ಮೈಸೂರು, ಜನವರಿ 02: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಣಸೂರು (Hunsur) ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಅಂಗಡಿ ದರೋಡೆ(Robbery) ನಡೆದು ಆರು ದಿನವಾದರೂ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಸರ್ಕಾರ ಎಸ್ಪಿಯನ್ನು ಬದಲಾಯಿಸಿರುವುದು ತನಿಖೆಗೆ ಹಿನ್ನೆಡೆ ಉಂಟಾಗುತ್ತಾ ಎನ್ನುವ ಚರ್ಚೆಗಳು ಕೂಡ ಕೇಳಿಬರುತ್ತಿವೆ. ಸದ್ಯ ದರೋಡೆ ಪ್ರಕರಣ ಮಾತ್ರ ಪೊಲೀಸರಿಗೆ ತಲೆ ನೋವಾಗಿದೆ.
ಡಿಸೆಂಬರ್ 27ರಂದು ನಡೆದ ಹುಣಸೂರು ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಜ್ಯುವೆಲರಿ ಶಾಪ್ನಲ್ಲಿ ಸುಮಾರು 10 ಕೋಟಿ ರೂ ಮೌಲ್ಯದ 7 ಕೆಜಿ ಚಿನ್ನ, ವಜ್ರ ದರೋಡೆ ಮಾಡಲಾಗಿತ್ತು. ಗ್ರಾಹಕರಂತೆ ಅಂಗಡಿ ಪ್ರವೇಶ ಮಾಡಿದ ಖದೀಮರು, ಏಕಾಏಕಿ ಗನ್ ತೋರಿಸಿ, ಎಲ್ಲರನ್ನು ಬೆದರಿಸಿ ದರೋಡೆ ಮಾಡಿದ್ದರು. ಖದೀಮರು ಅಂಗಡಿ ಪ್ರವೇಶ ಮಾಡಿದಾಗ ಗ್ರಾಹಕರು ಕೂಡ ವ್ಯಾಪಾರ ಮಾಡುತ್ತಿದ್ದು, ಖದೀಮರು ಬಂದ ನಂತರವೂ ಗ್ರಾಹಕರು ಅಂಗಡಿ ಒಳಗೆ ಬಂದಿದ್ದಾರೆ. ಎಲ್ಲರನ್ನೂ ಗನ್ ತೋರಿಸಿ ಹೆದರಿಸಿ ಒಂದೆಡೆ ಸೇರಿಸಿದ ಖದೀಮರು, 5 ನಿಮಿಷದಲ್ಲಿ ಕೈಗೆ ಸಿಕ್ಕಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ: ರಾಬರಿ ಆಗಿದ್ದು 7 ಕೆ.ಜಿ ಬಂಗಾರ; ಡೈಮಂಡ್ ಕೂಡ ಕಳವು
ಸ್ಕೈ ಗೋಲ್ಡ್ ಕಂಪನಿಯ ಒಟ್ಟು 10 ಅಂಗಡಿಗಳಿದ್ದು, ಕೇಂದ್ರ ಕಚೇರಿ ಕೇರಳದಲ್ಲಿದೆ. ಅಲ್ಲಿಂದಲೇ ಎಲ್ಲಾ ಹತ್ತು ಅಂಗಡಿಗಳ ಸಿಸಿ ಕ್ಯಾಮೆರಾಗಳನ್ನು ಮಾನಿಟರ್ ಮಾಡಲಾಗುತ್ತದೆ. ಅದೇ ರೀತಿ ಮಾನಿಟರ್ ಮಾಡಿ ಮ್ಯಾನೇಜರ್‌ಗೆ ಅಲರ್ಟ್ ಮಾಡುವಷ್ಟರಲ್ಲಿ ದರೋಡೆಕೋರರು ಸಿಕ್ಕಷ್ಟು ದೋಚಿ ಪರಾರಿಯಾಗಿದ್ದರು.
ದರೋಡೆ ಮಾಡಿದ ಅಷ್ಟು ಜನರ ಮುಖ ಚಹರೆ ಪೊಲೀಸರಿಗೆ ಸಿಕ್ಕಿತ್ತು. ಆದರೂ ಪೊಲೀಸರಿಗೆ ದರೋಡೆಕೋರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ದರೋಡೆಕೋರರು ಎಷ್ಟು ವ್ಯವಸ್ಥಿತವಾಗಿ ದರೋಡೆ ಮಾಡಿದ್ದರೋ ಅಷ್ಟೇ ವ್ಯವಸ್ಥಿತವಾಗಿ ಎಸ್ಕೇಪ್ ಪ್ಲ್ಯಾನ್ ಸಹ ಮಾಡಿಕೊಂಡಿದ್ದರು.
ದರೋಡೆ ಮಾಡಿದ ಖದೀಮರು ಅಲ್ಲಿಂದ ಎರಡು ಪಲ್ಸರ್ ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಅವರು ಪರಾರಿಯಾದ ದೃಶ್ಯ ಹುಣಸೂರು ಕೆ.ಆರ್.ನಗರ ರಸ್ತೆಯ ಲಕ್ಷ್ಮಣತೀರ್ಥ ಫಾರ್ಮ್ ಹೌಸ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು. ಒಂದು ಬೈಕ್‌ನಲ್ಲಿ ಮೂವರು, ಮತ್ತೊಂದು ಬೈಕ್‌ನಲ್ಲಿ ಇಬ್ಬರು ವೇಗವಾಗಿ ತೆರಳಿದ್ದರು.
ಇನ್ನು ಘಟನೆ ನಡೆದು 6ನೇ ದಿನವಾಗಿದೆ. ಸ್ಥಳದಲ್ಲಿ ಸಾಕಷ್ಟು ಸಾಕ್ಷಿ, ಆರೋಪಿಗಳ ಗುರುತು ಇದ್ದರೂ ಪೊಲೀಸರ ತನಿಖೆಗೆ ಅಂತಹ ಲೀಡ್ ಸಿಕ್ಕಿಲ್ಲ. ಪ್ರಮುಖವಾಗಿ ದರೋಡೆಕೋರರು ದರೋಡೆ ಮಾಡುವ ವೇಳೆ ಯಾವುದೇ ಮೊಬೈಲ್ ಬಳಸಿಲ್ಲ. ಹೀಗಾಗಿ ಅವರ ಜಾಡು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆ ನೋವಾಗಿದೆ. ಈ ಮಧ್ಯೆ ಸರ್ಕಾರ ತನಿಖೆಯ ನೇತೃತ್ವ ವಹಿಸಿದ್ದ ಮೈಸೂರು ಎಸ್ಪಿಯನ್ನು ಬದಲಿಸಿದೆ. ಎಸ್ಪಿಯಾಗಿದ್ದ ವಿಷ್ಣುವರ್ಧನ್ ಅವರನ್ನು ಕೆಪಿಎಗೆ ವರ್ಗಾಯಿಸಿ ಮೈಸೂರು ಜಿಲ್ಲಾ ಎಸ್ಪಿಯಾಗಿ ಮಂಡ್ಯ ಎಸ್ ಪಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ನೇಮಿಸಿದೆ. ಇದು ತನಿಖೆ ಹಿನ್ನೆಡೆಗೆ ಕಾರಣವಾಗಿದೆ.
ಇದನ್ನೂ ಓದಿ: ಹುಣಸೂರಿನಲ್ಲಿ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಹೇಳಿಕೇಳಿ ದರೋಡೆಯಾಗಿರುವುದು ಸಿಎಂ ತವರು ಜಿಲ್ಲೆಯಲ್ಲಿ, ಅದರಲ್ಲೂ ಮಟಮಟ ಮಧ್ಯಾಹ್ನ ಎಲ್ಲರ ಮುಂದೆ. ಆದರೂ ಪೊಲೀಸರು ದರೋಡೆಕೋರರನ್ನು ಬಂಧಿಸುವಲ್ಲಿ ವಿಫಲರಾಗಿರುವುದು ಖಾಕಿ ಕಾರ್ಯವೈಖರಿಗೆ ಬಗ್ಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.