ಮೈಸೂರು: ಸಾರ್ವಜನಿಕ ಸ್ಥಳದಲ್ಲಿರುವ ಧಾರ್ಮಿಕ ಕೇಂದ್ರ, ಕಟ್ಟಡಗಳ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಒಂದಷ್ಟು ಗೊಂದಲ ಸೃಷ್ಟಿಯಾಗಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆ ಸದಸ್ಯರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಗ್ರಹಾರದ 101 ಗಣಪತಿ ದೇವಸ್ಥಾನ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, 1955 ರಿಂದ ಇರುವ ಈ ದೇವಸ್ಥಾನವನ್ನು ಸುಪ್ರೀಂಕೋರ್ಟ್ ಆದೇಶದಂತೆ ತೆರವುಗೊಳಿಸಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಸಂಸದ ಪ್ರತಾಪ್ಸಿಂಹ ಖಂಡಿಸಿದ್ದಾರೆ.
ತೆರವುಗೊಳಿಸಬೇಕೆಂಬ ಆದೇಶದ ಪಟ್ಟಿಯಲ್ಲಲಿರುವ ದೇಗುಲ, ಧಾರ್ಮಿಕ ಕೇಂದ್ರಗಳ ಸಂಖ್ಯೆ ಹೀಗಿದೆ:
ಹಿಂದೂ ದೇಗುಲಗಳು: 85
ಮಸೀದಿ ಅಥವಾ ಗೋರಿ: 05
ಚರ್ಚ್: 01
ಧಾರ್ಮಿಕ ಕಟ್ಟಡದ ಹೊರತಾಗಿರುವುದು: 02
ಒಟ್ಟಾರೆಯಾಗಿ ಇದುವರೆಗೂ 14 ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಸದ್ಯ 05 ಕಟ್ಟಡಗಳಿಗೆ ನ್ಯಾಯಾಲಯದ ತಡೆ ಇದೆ. ತೆರವುಗೊಳಿಸಬೇಕಾದ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿರುವ ಮೈಸೂರು ಅಗ್ರಹಾರದ 101 ಗಣಪತಿ ದೇಗುಲ ಮುಖ್ಯ ಧಾರ್ಮಿಕ ಸ್ಥಳವಾಗಿದ್ದು, 1955 ರಿಂದಲೂ ಆ ದೇವಸ್ಥಾನ ಇದೆ. ಅದಲ್ಲದೇ, ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇಗುಲ, ಇಟ್ಟಿಗೆಗೂಡು ಬಡಾವಣೆಯಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನ, ಸಯ್ಯಾಜಿರಾವ್ ರಸ್ತೆಯ ಪಂಚಮುಖಿ ಗಣಪತಿ ದೇವಸ್ಥಾನ, ವಿಜಯನಗರದ ಚಾಮುಂಡೇಶ್ವರಿ ದೇವಸ್ಥಾನ, ದೇವರಾಜ ಅರಸು ರಸ್ತೆಯಲ್ಲಿರುವ ಮುಸ್ಲಿಂ ಗೋರಿ, ರೋಟರಿ ಶಾಲೆ ಬಳಿ ಇರುವ ಹಜರತ ಹಿಮಾಮ್ ಶಾ ಗೋರಿ, ಕಾಂತರಾಜ ಅರಸು ಪಾರ್ಕ್ ಸಮೀಪದ ದರ್ಗಾ, ಗ್ರಾಮಾಂತರ ಬಸ್ ನಿಲ್ದಾಣದ ಪೀಪಲ್ಸ್ ಪಾರ್ಕ್ ಬಳಿಯ ಗೋರಿಯನ್ನು ತೆರವುಗೊಳಿಸಲು ಆದೇಶವಿದೆ.
ಮೈಸೂರಿನಲ್ಲಿ ಧಾರ್ಮಿಕ ಕಟ್ಟಡಗಳ ತೆರವಿನ ಕುರಿತು ತೀವ್ರ ಆಕ್ರೋಶ ಹೊರಹಾಕಿರುವ ಸಂಸದ ಪ್ರತಾಪ್ ಸಿಂಹ ಹಿಂದೂ ಸಮುದಾಯಕ್ಕೆ ಸೇರಿದ 90 ದೇವಸ್ಥಾನಗಳ ಪಟ್ಟಿ ಮಾಡುವಾಗ ಅಭಿಪ್ರಾಯ ಕೇಳಿದ್ದೀರಾ? ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಕೇಂದ್ರವನ್ನು ಕಟ್ಟಲು 2019ರಿಂದ ಅವಕಾಶವನ್ನೇ ಕೊಟ್ಟಿಲ್ಲವಾ? ಹಾಗಾದರೆ, ಕ್ಯಾತಮಾರನಹಳ್ಳಿಯಲ್ಲಿ ಅನಧಿಕೃತವಾಗಿ ಮಸೀದಿ ಹೇಗೆ ಬಂತು? ಅದನ್ನು ಏಕೆ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆದಂತೆ ಅಲ್ವಾ? ಎಂದು ಮೈಸೂರು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ.
ಎನ್.ಆರ್.ಕ್ಷೇತ್ರದಲ್ಲಿ ಅನಧಿಕೃತವಾಗಿ ಮಸೀದಿ, ಚರ್ಚ್‌ಗಳಿವೆ. ಅನಧಿಕೃತವಾಗಿ ಮಸೀದಿ, ಚರ್ಚ್ ಕಟ್ಟಲು ನೀವೇ ಬಿಟ್ಟಿದ್ದೀರಿ. ಇದು ಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇಗುಲಗಳ ಪಟ್ಟಿ ಮಾಡುವಾಗ ಅಭಿಪ್ರಾಯ ಕೇಳಿದ್ದೀರಾ? ಕೋರ್ಟ್ ನಿರ್ದೇಶನದಂತೆ ಜನರ ಅಭಿಪ್ರಾಯ ಕೇಳಿದ್ದೀರಾ? ನಾನು ಕೇಳಿದರೆ ಜಿಲ್ಲಾಡಳಿತಕ್ಕೆ ದಬಾಯಿಸಿದೆ ಎಂದು ಹೇಳ್ತಾರೆ. ನನ್ನ ಧರ್ಮಕ್ಕೆ ಅನ್ಯಾಯವಾದಾಗ ಆಕ್ರೋಶ ಸಹಜವಾಗಿ ಇರುತ್ತೆ. ಧರ್ಮ ಪ್ರೀತಿಸುವ ಎಲ್ಲರಿಗೂ ಆಕ್ರೋಶ ಸಹಜ. ‘ಸುಪ್ರೀಂ’ ಆದೇಶ ಎಂದು ಜಿಲ್ಲಾಡಳಿತ ಜನರ ದಾರಿ ತಪ್ಪಿಸುತ್ತಿದೆ. ಇಡೀ ರಾಜ್ಯಾದ್ಯಂತ ಸಾವಿರಾರು ದೇಗುಲಗಳಿಗೆ ಸಂಕಷ್ಟ ಬಂದಿದೆ. ಸಿಎಂ ಈ ಬಗ್ಗೆ ಪರಿಶೀಲಿಸಿ ಧಾರ್ಮಿಕ ಕೇಂದ್ರಗಳನ್ನ ಉಳಿಸಬೇಕು. ನ್ಯಾಯಾಲಯ ಸೂಚಿಸಿದ ನಿರ್ದೇಶನಗಳನ್ನ ಜಿಲ್ಲಾಡಳಿತ ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
ಇನ್ನೂ 92 ದೇಗುಲಗಳು ಇವೆ; ಅವುಗಳನ್ನು ಮುಟ್ಟಲು ಬಿಡಲ್ಲ- ನಂಜನಗೂಡು ದೇಗುಲ ತೆರವು ಬಳಿಕ ಪ್ರತಾಪ್ ಸಿಂಹ ವಾಗ್ದಾಳಿ
ನಂಜನಗೂಡು ದೇಗುಲ ತೆರವು ವಿಚಾರ: ದೇವಾಲಯ ಮರುನಿರ್ಮಾಣಕ್ಕೆ ಗ್ರಾಮಸ್ಥರ ತಯಾರಿ
(Mysuru MP Pratap Simha opposes demolition of Hindu temples)