ಮೈಸೂರು, ಮಾರ್ಚ್.16: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ ಸಿಂಹಗೆ (Pratap Simha) ಈ ಬಾರಿಯ ಬಿಜೆಪಿ ಟಿಕೆಟ್ ಕೈತಪ್ಪಿದೆ. ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್ (Yaduveer Krishnadatta Chamaraja Wadiyar) ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಎರಡು ಬಾರಿ ಸಂಸದರಾಗಿ 10 ವರ್ಷ ಸೇವೆ ಸಲ್ಲಿಸಿದ್ದ ಪ್ರತಾಪ್ ಸಿಂಹ ಅವರು ಮೂರನೆ ಸಲವೂ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. 10 ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಅನ್ನು ಕ್ಷೇತ್ರದ ಮತದಾರರಿಗೆ ತಲುಪಿಸಿದ್ದರು. ಆದರೆ ಬಿಜೆಪಿ ಹೊಸ ಅಭ್ಯರ್ಥಿಗೆ ಗಾಳ ಹಾಕಿದ್ದು ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ. ಸದ್ಯ ಡಿವಿಜಿ (D. V. Gundappa) ಸಾಲು ಹಂಚಿಕೊಂಡು ವಿರೋಧಿಗಳಿಗೆ ಪ್ರತಾಪ್ಸಿಂಹ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಟಿಕೆಟ್ನಿಂದ ವಂಚಿತರಾದ ಪ್ರತಾಪ್ ಸಿಂಹ ಮಂಕಾಗಿದ್ದಾರೆ. ಸದ್ಯ ಪ್ರತಾಪ್ ಸಿಂಹ ಅವರು ಮಂಕು ತಿಮ್ಮನ ಕಗ್ಗ ಒಂದನ್ನು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಿವಿಜಿ ನನ್ನ ನೆಚ್ಚಿನ ಬರಹಗಾರ ಎಂದು ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.
ಸತ್ತೆನೆಂದೆನಬೇಡ, ಸೋತೆನೆಂದನಬೇಡ, ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ಮೃತ್ಯುವೆನ್ನುವುದೊಂದು ತೆರೆಯಿಳಿತ, ತೆರೆಯೇರು, ಮತ್ತೆ ತೋರ್ಪುದು ನಾಳೆ ಸೋಲು ಗೆಲುವು ಸ್ವಾಭಾವಿಕವೇ, ಒಂದು ಸೋಲಾಗಬಹುದು ಒಂದು ಸಲ ಗೆಲುವಾಗಬಹುದು, ಇಂದು ಬಿದ್ದ ಅಲೆ ನಾಳೆ ಏಳುತ್ತದೆ ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ
ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಎಸಿ ರೂಮ್ನಿಂದ ಜನರ ಮಧ್ಯೆ ಬರುವುದು ಕಷ್ಟವೇನಲ್ಲ: ಪ್ರತಾಪ್ ಸಿಂಹಗೆ ಯದುವೀರ್ ಟಾಂಗ್
ಬ್ರಹ್ಮವಸ್ತುವು ಆನಂದಪಡುವುದಕ್ಕೋಸ್ಕರ ಪ್ರಕೃತಿಯ ಮೂಲಕವಾಗಿ ಆಟವನ್ನು ನಡೆಸುತ್ತಿದೆ. ತ್ರಿಗುಣಗಳ ವ್ಯತ್ಯಾಸದಿಂದ ಸೋಲು, ಗೆಲವು ಸ್ವಾಭಾವಿಕವೇ. ಈ ಲೀಲೆ ಸತತವಾಗಿ ಕೊನೆಯಿಲ್ಲದೆ ನಡೆಯುತ್ತಿರುವುದರಿಂದ ಇಲ್ಲಿ ಒಂದು ಸಲ ಸೋಲಾಗಬಹುದು, ಇನ್ನೊಂದು ಸಲ ಗೆಲುವಾಗಬಹುದು. ಆದದ್ದರಿಂದ ಈ ತತ್ತ್ವವನ್ನು ಮನದಟ್ಟು ಮಾಡಿಕೊಂಡು, ನನ್ನ ಜೀವನ ಕೆಟ್ಟಿತು, ನಾನು ಸಾಧಿಸಬೇಕಾದದ್ದನ್ನು ಸಾಧಿಸದೆಯೇ ಸಾಯುತ್ತಿದ್ದೇನೆ, ನಾನು ಸೋತೆ. ನನ್ನ ಒಳಸತ್ಯ ಬತ್ತಿಹೋಗಿದೆ, ನಾನು ಕೆಲಸಕ್ಕೆ ಬಾರದವನಾದೆ ಎಂದು-ನಿರಾಸೆಯ ಮನೋಭಾವವನ್ನು ತಳೆಯುವುದು ತಪ್ಪು ಎನ್ನುತ್ತಾರೆ ತಿಮ್ಮಗುರು.
ಮೃತ್ಯು ಎಂಬುದು ಒಂದು ಅಲೆಯಂತೆ, ಅಲೆ ಮೇಲೇಳುತ್ತದೆ ಮತ್ತೆ ಬೀಳುತ್ತದೆ, ಇನ್ನೊಂದು ಸಲ ಏಳುತ್ತದೆ. ಹೀಗೆ ನಮ್ಮ ಜೀವನ ಒಂದೇ ಜನ್ಮದಲ್ಲಿ ಮುಗಿದುಹೋಗುವುದಿಲ್ಲ. ಇಂದು ಬಿದ್ದ ಅಲೆ ನಾಳೆ ಏಳುತ್ತದೆ. ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ.
ಈ ಹಿಂದೆ 2020ರಲ್ಲಿ ಸಿ.ಟಿ. ರವಿ ಅವರು ಕೂಡ ಇದೇ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:04 am, Sat, 16 March 24