Santro Ravi: ಸ್ಯಾಂಟ್ರೋ ರವಿ ವಿರುದ್ಧ ಅಮಿತ್ ಶಾಗೆ ದೂರು ನೀಡಿದ ಮೈಸೂರಿನ ಒಡನಾಡಿ ಸಂಸ್ಥೆ

| Updated By: Rakesh Nayak Manchi

Updated on: Jan 10, 2023 | 11:40 AM

ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ಒಡನಾಡಿ ಸಂಸ್ಥೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ಗೂ ಪತ್ರ ರವಾನೆ ಮಾಡಿದ್ದಾರೆ.

Santro Ravi: ಸ್ಯಾಂಟ್ರೋ ರವಿ ವಿರುದ್ಧ ಅಮಿತ್ ಶಾಗೆ ದೂರು ನೀಡಿದ ಮೈಸೂರಿನ ಒಡನಾಡಿ ಸಂಸ್ಥೆ
ಸ್ಯಾಂಟ್ರೋ ರವಿ
Follow us on

ಮೈಸೂರು: ಸ್ಯಾಂಟ್ರೋ ರವಿ (Santro Ravi) ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿ ಕ್ರಮ ಕೈಗೊಳ್ಳುವಂತೆ ಒಡನಾಡಿ ಸಂಸ್ಥೆ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ. ಅನೈತಿಕ ಚಟುವಟಿಕೆ, ವರ್ಗಾವಣೆ ದಂಧೆ, ಅಕ್ರಮ ಹಣ ಸಂಪಾದನೆ, ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಎಫ್​ಐಆರ್ ವಿಚಾರ, ಸಂತ್ರಸ್ತೆ ನೀಡಿರುವ ದೂರು, ಸ್ಯಾಂಟ್ರೋ ರವಿಯ ಅಕ್ರಮ ಆಸ್ತಿಗಳ ವಿವರ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಹೊಂದಿರುವ ಮನೆಗಳ ಮಾಹಿತಿ ಮತ್ತು 2005ರಲ್ಲಿ ರವಿ ಮೇಲಿದ್ದ ಗೂಂಡಾ ಕಾಯ್ದೆ ಬಗ್ಗೆ ಉಲ್ಲೇಖಿಸಿ ಗೃಹಸಚಿವರಿಗೆ ಪತ್ರ ಕಳುಹಿಸಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೂ ಪತ್ರದ ಪ್ರತಿ ರವಾನಿಸಲಾಗಿದೆ.

ಸ್ಯಾಂಟ್ರೋ ರವಿ ರಾಜ್ಯ ರಾಜಕಾರಣದಲ್ಲಿ ಸುದ್ದು ಮಾಡಲು ಕಾರಣ ಆತ ಪ್ರಭಾವಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಯವರ ಪುತ್ರ ಸೇರಿದಂತೆ ಅನೇಕರೊಂದಿಗೆ ಇರುವ ಫೋಟೋಗಳು ಹಾಗೂ ಆತ ಗೋಲ್ಡ್ ಬಿಸ್ಕೇಟ್‌ಗಳು ಹಾಗೂ ಕಂತೆ ಕಂತೆ ಹಣದ ಜೊತೆಗೆ ತೆಗೆಸಿಕೊಂಡಿರುವ ಪೋಟೋಗಳನ್ನು ಕೂಡ ಒಡನಾಡಿ ಸಂಸ್ಥೆ ಪತ್ರದಲ್ಲಿ ಸೇರಿಸಿ ಕೇಂದ್ರ ಗೃಹಸಚಿವರಿಗೆ ರವಾನಿಸಿದೆ.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ ಮೈಸೂರಿನ ಒಡನಾಡಿ ಸಂಸ್ಥೆ

ಸ್ಯಾಂಟ್ರೋ ರವಿಗೆ ಸಾಥ್ ನೀಡಿದ ಇನ್ಸ್‌ಪೆಕ್ಟರ್​ಗೆ ಸಂಕಷ್ಟ

ನಕಲಿ ಪ್ರಕರಣ ದಾಖಲಿಸಿ ಸ್ಯಾಂಟ್ರೋ ರವಿಗೆ ಸಾಥ್ ನೀಡಿದ್ದ ಕಾಟಾನ್ ಪೇಟೆ ಠಾಣೆಯ ಹಿಂದಿನ ಇನ್ಸ್​​ಪೆಕ್ಟರ್ ಪ್ರವೀಣ್​ಗೆ ಸಂಕಷ್ಟ ಎದುರಾಗಿದೆ. ಸ್ಯಾಂಟ್ರೋ ರವಿ ಮಾತು ಕೇಳಿ ಆತನ ಹೆಂಡತಿ ವಿರುದ್ಧ ದರೋಡೆ ಕೇಸ್ ದಾಖಲಿಸಿದ ಆರೋಪ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರಿಂದ ವರದಿ ಕೇಳಿದ್ದರು. ಸದ್ಯ ಆಂತರಿಕ ತನಿಖಾ ವರದಿ ಆಯುಕ್ತರ ಕೈಸೇರಿ ಇದೀಗ ಡಿಜಿ ಅವರ ಕಚೇರಿಗೆ ತಲುಪಿದೆ.

ಸ್ಯಾಂಟ್ರೋ ರವಿ ಮಾತು ಕೇಳಿ ಪ್ರಕರಣ ದಾಖಲಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಇನ್ಸ್‌ಪೆಕ್ಟರ್ ಪ್ರವೀಣ್ ವಿರುದ್ಧದ ಆರೋಪದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ನಿನ್ನೆ ಮಧ್ಯಾಹ್ನ ನಗರ ಪೊಲೀಸ್ ಆಯುಕ್ತರ ಕೈಗೆ ಆಂತರಿಕ ತನಿಖಾ ವರದಿ ಸೇರಿದೆ. ಬಳಿಕ ಇದನ್ನು ಡಿಜಿ ಕಚೇರಿಗೆ ರವಾನಿಸಲಾಗಿದೆ.

ಇದನ್ನೂ ಓದಿ: Santro Ravi: ತನಿಖೆ ಚುರುಕುಗೊಳಿಸಿರುವ ಪೊಲೀಸರು, ರವಿ ಮದುವೆ ಮಾಡಿಸಿದ ಪುರೋಹಿತರ ವಿಚಾರಣೆ

ಮೈಸೂರು ಪೊಲೀಸರಿಂದ ಬೆಂಗಳೂರಲ್ಲಿ ಸ್ಥಳ ಮಹಜರು ಸಾಧ್ಯತೆ

ಮೈಸೂರಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಪತ್ನಿ ಕೇಸ್​ ದಾಖಲಿಸಿರುವ ಹಿನ್ನಲೆ ಇಂದು ಮೈಸೂರು ಪೊಲೀಸರು ಬೆಂಗಳೂರಿನಲ್ಲಿ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಬಲವಂತವಾಗಿ ಪತ್ನಿ ಜತೆ ಸ್ಯಾಂಟ್ರೋ ರವಿ ಲೈಂಗಿಕ ಸಂಪರ್ಕ ಮಾಡಿದ ಆರೋಪ ಸಂಬಂಧ ಸಂತ್ರಸ್ತ ಮಹಿಳೆಯನ್ನು ಕರೆತಂದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಬೆಂಗಳೂರಿನ ಶೇಷಾದ್ರಿಪುರಂನ ಖಾಸಗಿ ಅಪಾರ್ಟ್​​ಮೆಂಟ್​​​ ಫ್ಲ್ಯಾಟ್​​​​, ಬಸವನಗುಡಿ, ಟ್ರಿನಿಟಿ ಸರ್ಕಲ್​​​ನಲ್ಲಿರುವ ಫ್ಲ್ಯಾಟ್​​ನಲ್ಲಿ ಸ್ಥಳ ಮಹಜರು ಮಾಡಲು ಮುಂದಾಗಿದ್ದಾರೆ. ಬೆಂಗಳೂರು ಪೊಲೀಸರ ಸಹಕಾರವನ್ನು ಮೈಸೂರು ಪೊಲೀಸರು ಕೇಳಿದ್ದಾರೆ. ಈ ಬಗ್ಗೆ ನಿನ್ನೆ ಅಪಾರ್ಟ್‌ಮೆಂಟ್‌ ಸಿಬ್ಬಂದಿಯಿಂದ ಪೊಲೀಸರು ಮಾಹಿತಿ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Tue, 10 January 23