Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ ಹೆಸರಿಡಲು ಸಂಸದರ ನಡುವೆ ಪೈಪೋಟಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣವಾಗಿದ್ದು, ಹೈವೆಗೆ ಹೆಸರಿಡುವ ವಿಚಾರವಾಗಿ ಮೈಸೂರು ಮಂಡ್ಯ ಸಂಸದರ ನಡುವೆ ಪೈಪೋಟಿ ಶುರುವಾಗಿದೆ.

ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ದಶಪಥ ಹೈವೆಗೆ ಹೆಸರಿಡುವ ವಿಚಾರವಾಗಿ ಇದೀಗ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ಕಾವೇರಿ ಮತ್ತು ಕೃಷ್ಣರಾಜ ಒಡೆಯರ್ ಹೆಸರಿಡಿಸಲು ಮೈಸೂರು ಮಂಡ್ಯ ಸಂಸದರ ಪೈಪೋಟಿ ನಡೆಯುತ್ತಿದೆ. ಕಾವೇರಿ ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ(Pratap Simha) ಒತ್ತಾಯ ಮಾಡುತ್ತಿದ್ದರೆ. ಇತ್ತ ನಾಲ್ವಡಿ ಹೆಸರಿಡುವಂತೆ ಮಂಡ್ಯ ಸಂಸದೆ ಸುಮಲತಾ(Sumalatha) ಸಿಎಂಗೆ ಪತ್ರ ಬರೆದಿದ್ದಾರೆ. ಇದಕ್ಕೆ ಎಂಎಲ್ಸಿ ದಿನೇಶ್ ಗೂಳಿಗೌಡ ಸಹಮತ ನೀಡಿದ್ದಾರೆ. ಕಾವೇರಿ ಅಥವಾ ಒಡೆಯರ್ ಯಾವ ಹೆಸರಿಡಬೇಕು ಎಂಬ ಗೊಂದಲದಲ್ಲಿ ಸಿ.ಎಂ. ಬೊಮ್ಮಾಯಿ ಇದ್ದಾರೆ.
ಇನ್ನು ಈ ವರ್ಷ ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಲೋಕಾರ್ಪಣೆಯಾಗಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿ ಅಥವಾ ರಾಷ್ಟ್ರಪತಿಗಳನ್ನು ಆಹ್ವಾನಿಸುತ್ತೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೆಡೆ ಇನ್ನೂ ಕೆಲಸಗಳು ಬಾಕಿ ಉಳಿದಿವೆ.
4,473 ಕೋಟಿ ರೂ. ವೆಚ್ಚದಲ್ಲಿ ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ