- Kannada News Photo gallery Union Minister Nitin Gadkari Visited Bengaluru-Mysuru Expressway Greenfield Corridors project Today Karnataka News
Nitin Gadkari Karnataka Visit: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ವೀಕ್ಷಿಸಿದ ನಿತಿನ್ ಗಡ್ಕರಿ
ಬೆಂಗಳೂರಿನಿಂದ-ಶ್ರೀರಂಗಪಟ್ಟಣದವರೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ, ಇದೇ ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಎಕ್ಸ್ಪ್ರೆಸ್ವೇಯನ್ನು ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.
Updated on: Jan 05, 2023 | 4:07 PM

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವೀಕ್ಷಿಸಿದ್ದಾರೆ.

ಹೆಲಿಕಾಪ್ಟರ್ನಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಬಂದಿಳಿದ ನಿತಿನ್ ಗಡ್ಕರಿ

ರಾಮನಗರ ಜಿಲ್ಲೆಯ ಬಳಿಯ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಹೆಲಿಕಾಪ್ಟರ್ನಲ್ಲಿ ಇಳಿದ ನಿತಿನ್ ಗಡ್ಕರಿ ಹೆದ್ದಾರಿಯ ಕಾಮಗಾರಿಯನ್ನು ಪರಿಶೀಲಿಸಿದರು.

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯ ವೈಮಾನಿಕ ದೃಶ್ಯ

ಈಗಾಗಲೇ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೆಡೆ ಇನ್ನೂ ಕೆಲಸಗಳು ಬಾಕಿ ಉಳಿದಿವೆ.

ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. 8,453 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿಯನ್ನು ನಿತಿನ್ ಗಡ್ಕರಿ ವೀಕ್ಷಿಸಿದ್ದಾರೆ.

ಬೆಂಗಳೂರಿನಿಂದ-ಶ್ರೀರಂಗಪಟ್ಟಣದವರೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ, ಇದೇ ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಎಕ್ಸ್ಪ್ರೆಸ್ವೇಯನ್ನು ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.

4,473 ಕೋಟಿ ರೂ. ವೆಚ್ಚದಲ್ಲಿ 118 ಕಿ.ಮೀ. ಉದ್ದದ ಈ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯನ್ನು ನಿರ್ಮಿಸಲಾಗುತ್ತಿದೆ.

NHAI (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಬೆಂಗಳೂರಿನಿಂದ ಮಂಡ್ಯಕ್ಕೆ ವಾಹನಗಳನ್ನು ಚಲಾಯಿಸಲು ಅನುಮತಿ ನೀಡಿದ್ದು, ಉಳಿದ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಈ ರಸ್ತೆಯು 118 ಕಿಲೋಮೀಟರ್ ಉದ್ದವನ್ನು ಹೊಂದಿದೆ.

ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನ ವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ.

ಇದಕ್ಕೂ ಮೊದಲು ನಿತಿನ್ ಗಡ್ಕರಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯ ವೈಮಾನಿಕ ಪರಿಶೀಲನೆ ನಡೆಸಿದರು,

ಈಗಾಗಲೇ 36% ಬೆಂಗಳೂರು-ಚೆನ್ನೈ ಕಾಮಗಾರಿ ಪೂರ್ಣಗೊಂಡಿದೆ. ಈಗ ಚೆನ್ನೈಗೆ ತೆರಳಲು 5 ಗಂಟೆ ಬೇಕಾಗುತ್ತಿದೆ. ಆದರೆ, ಈ ಹೆದ್ದಾರಿಯಿಂದ 2 ಗಂಟೆ 15 ನಿಮಿಷಕ್ಕೆ ಬೆಂಗಳೂರಿನಿಂದ ಚೆನ್ನೈಗೆ ತೆರಳಬಹುದು. 2024ರ ಮಾರ್ಚ್ ಒಳಗೆ ನಾವು ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ.

ಇದು ಮೊದಲ ಹಂತದ ಯೋಜನೆಯಾಗಿದೆ. ಈ ಹಂತದಲ್ಲಿ ಕರ್ನಾಟಕದಲ್ಲಿ ಒಟ್ಟು 71 ಕಿ.ಮೀ. ಹೆದ್ದಾರಿ ನಿರ್ಮಾಣ ಆಗಲಿದೆ. 539 ಕೋಟಿ ರೂ. ಯೋಜನೆ ಇದಾಗಿದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಮೇ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದರ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದ್ದರು. 14,870 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡ ನಂತರ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಸಾಗಲಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಕರ್ನಾಟಕದ ಪಿಡಬ್ಲುಡಿ ಸಚಿವ ಸಿಸಿ ಪಾಟೀಲ್ ಕೂಡ ವೈಮಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡರು.

ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಯಾಟಲೈಟ್ ರಿಂಗ್ ರೋಡ್ ಪ್ರಾಜೆಕ್ಟ್ ಮಾಡಲಿದ್ದೇವೆ. 288 ಕಿ.ಮೀ ರಿಂಗ್ ರೋಡ್ ಇದಾಗಲಿದ್ದು, ಇದರಿಂದ ಬಹಳಷ್ಟು ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರು ನಗರದ ಹೊರವಲಯದ ಪಟ್ಟಣಗಳಿಗೆ ಈ ರಿಂಗ್ ರಸ್ತೆ ಸಂಪರ್ಕ ಕಲ್ಪಿಸಲಿದೆ. ಹೊಸಕೋಟೆ, ದೊಡ್ಡಬಳ್ಳಪುರ, ದೇವನಹಳ್ಳಿ, ಆನೇಕಲ್ ಮುಖಾಂತರ ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಿದೆ. ಯಾವುದೇ ಫ್ಲೈಓರ್ ಮಾಡಿದರೂ ಡಬಲ್ ಡೆಕ್ಕರ್ ಮಾಡಲು ಚರ್ಚೆ ನಡೆಯುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರಿನಿಂದ ಶೇಖರಿಸಲ್ಪಟ್ಟ ತಾಜ್ಯಗಳಿಂದ ರಸ್ತೆಗಳ ನಿರ್ಮಾಣ ಮಾಡಬಹುದಾ? ಎಂಬ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಇದೇನಾದರೂ ಸಾಧ್ಯವಾದರೆ ಮಾಲಿನ್ಯ ಕಡಿಮೆ ಆಗೋದರ ಜತೆಗೆ ಕಾಮಗಾರಿಯ ವೆಚ್ಚ ಕಡಿಮೆ ಆಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.



















