
ಮೈಸೂರು, (ಫೆಬ್ರವರಿ 22): ಸಾರ್ವಜನಿಕರ ಜೀವ–ಆಸ್ತಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ, ಮೈಸೂರು (Mysuru) ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್ (helium balloons) ತುಂಬುವುದು, ಮಾರಾಟ ಮಾಡುವುದು, ಸಂಗ್ರಹ–ಸಾಗಣೆ ನಡೆಸುವುದನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು BNSS-2023 ಸೆಕ್ಷನ್ 152 ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಇನ್ನು ಈ ಬಗ್ಗೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿದ್ದು, ಬಹುತೇಕ ಬಲೂನ್ ಮಾರಾಟಗಾರರು ‘ಹೀಲಿಯಂ’ ಹೆಸರಿನಲ್ಲಿ ಅಪಾಯಕಾರಿ ಅನಿಲ ಬಳಸುತ್ತಾರೆ. ಎಷ್ಟು ಪ್ರಮಾಣದಲ್ಲಿ, ಹೇಗೆ ಬಳಸಬೇಕು ಅನ್ನೋ ತಿಳುವಳಿಕೆ ಅವರಿಗೆ ಇಲ್ಲ. ಅದರಿಂದಲೇ ಜನರಿಗೆ ಅಪಾಯ. ಹೀಗಾಗಿ ಹೀಲಿಯಂ ಬಲೂನ್ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೀಲಿಯಂ ದಹನಶೀಲವಲ್ಲ. ಆದರೆ ಅತ್ಯಧಿಕ ಒತ್ತಡದ ಸಿಲಿಂಡರ್‌ಗಳು, ಕಳಪೆ ವಾಲ್ವ್‌ಗಳು, ಅಪ್ರಮಾಣಿತ ಸಂಗ್ರಹ–ಬಳಕೆ ಸಿಲಿಂಡರ್ ಸ್ಫೋಟಕ್ಕೆ ಕಾರಣವಾಗಬಹುದು. ಜನಸಂದಣಿ ಪ್ರದೇಶಗಳಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದರೆ ಬಹಳ ಜನರಿಗೆ ಜೀವಾಪಾಯವಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಮಾಣಿತ ಹೀಲಿಯಂ ಅಥವಾ ಅನಿಲ ಬಳಕೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ. ಆಯೋಜಕರು ಅನುಮತಿ ಸುರಕ್ಷತಾ ಪ್ರಮಾಣಪತ್ರ ಇಲ್ಲದೆ ಹೀಲಿಯಂ ಬಳಕೆ ಮಾಡಿಸಬಾರದು. ಪೋಷಕರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಡಿಸೆಂಬರ್ 25 2025ರಂದು ಮೈಸೂರು ಅರಮನೆ ಸಮೀಪದ ಜಯಮಾರ್ತಾಂಡ ದ್ವಾರದ ಬಳಿ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ನಡೆದಿತ್ತು. ಅಷ್ಟೇ ಅಲ್ಲ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿದ್ದವು. ಅಂದು ಗುರುವಾರ ರಾತ್ರಿ ಬಲೂನ್ ಮಾರಾಟಗಾರ 40 ವರ್ಷದ ಸಲೀಂ ಕೈಯಲ್ಲಿದ್ದ ಹೀಲಿಯಂ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದ. ಗಂಭೀರವಾಗಿ ಗಾಯಗೊಂಡಿದ್ದ 42 ವರ್ಷದ ಮಂಜುಳಾ ಹಾಗೂ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿತ್ತು. ಕೊಟ್ರೇಶ್, ಶಹನಾ ಷಬ್ಬೀರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.
ಘಟನೆ ನಂತರ ಸ್ಪೋಟ ಆಕಸ್ಮಿಕವೇ ಅಥವಾ ಉದ್ದೇಶಿತವೇ ಎಂಬ ಬಗ್ಗೆ ತನಿಖೆ ನಡೆದಿತ್ತು. ಸಾಮಾನ್ಯವಾಗಿ ಮೂವರು ಸೇರಿ ಬಲೂನ್ ಮಾರಾಟಕ್ಕೆ ಬರುತ್ತಿದ್ದರೆ, ಆ ದಿನ ಸಲೀಂ ಒಬ್ಬನೇ ಬಂದಿದ್ದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಪ್ರಕರಣದ ಗಂಭೀರತೆಯನ್ನು ಗಮನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ಸಂಗ್ರಹಿಸಿತ್ತು. ದೇವರಾಜ ಠಾಣೆ ಪೊಲೀಸರು ಗಾಯಾಳು ಕೊಟ್ರೇಶ್ ನೀಡಿದ ಮಾಹಿತಿ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
Published On - 4:15 pm, Sun, 22 February 26