Mysuru: ಹಾಫ್ ಹೆಲ್ಮೆಟ್ ಧರಿಸಿ ಮೈಸೂರಿನಲ್ಲಿ ಸಂಚರಿಸುತ್ತಿದ್ದೀರಾ? ಕಾದಿದೆ 500 ರೂ. ದಂಡ
ಮೈಸೂರಿನ ಹಲವೆಡೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದ್ದಾರೆ.
ಮೈಸೂರು: ಸಂಚಾರ ಪೊಲೀಸರಿಂದ (Traffic Police) ದಂಡ ತಪ್ಪಿಸಿಕೊಳ್ಳುವುದಕ್ಕಾಗಿ ಹೇಗೋ ಒಂದು ಹೆಲ್ಮೆಟ್ (Helmet) ಧರಿಸಿಕೊಂಡು ಹೋದರಾಯಿತು ಎಂದು ಭಾವಿಸಿದ್ದೀರಾ? ಖಂಡಿತಾ ನಿಮ್ಮ ಊಹೆ ತಪ್ಪು. ಅರ್ಧ ಹೆಲ್ಮೆಟ್ ಅಥವಾ ಹಾಫ್ ಹೆಲ್ಮೆಟ್ ಧರಿಸಿಕೊಂಡು ನೀವಿನ್ನು ಮೈಸೂರು (Mysuru) ನಗರದಲ್ಲಿ ಸಂಚರಿಸಿದರೆ 500 ರೂ. ದಂಡ ಪಾವತಿಸಬೇಕಾದೀತು. ಐಎಸ್ಐ ಚಿಹ್ನೆ ಇಲ್ಲದ ಅರ್ಧ ಹೆಲ್ಮೆಟ್ ಧರಿಸುವವರಿಗೆ 500 ರೂ. ದಂಡ ವಿಧಿಸಲು ಮೈಸೂರು ನಗರ ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಸೋಮವಾರ ಬೆಳಿಗ್ಗೆ ನಗರದ ಹಲವೆಡೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದ್ದಾರೆ. ನಗರದ ದೇವರಾಜ, ಕೃಷ್ಣರಾಜ, ನರಸಿಂಹರಾಜ, ವಿವಿ ಪುರಂ ಹಾಗೂ ಸಿದ್ಧಾರ್ಥನಗರದ ಸಂಚಾರ ಪೊಲೀಸ್ ವಿಭಾಗದ ಇನ್ಸ್ಪೆಕ್ಟರ್ಗಳು, ಸಬ್-ಇನ್ಸ್ಪೆಕ್ಟರ್ಗಳು, ಸಹಾಯಕ ಎಸ್ಐ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಐದು ಠಾಣೆಗಳಲ್ಲಿ ತಲಾ 10 ಪ್ರಕರಣಗಳು ದಾಖಲಾಗಿವೆ.
ಅರ್ಧ ಹೆಲ್ಮೆಟ್ ಧರಿಸಿರುವುದನ್ನು ಹೆಲ್ಮೆಟ್ ರಹಿತ ಚಾಲನೆ ಎಂದೇ ಪರಿಗಣಿಸಲಾಗುತ್ತದೆ. ಇದಕ್ಕೆ 500 ರೂ. ದಂಡ ವಿಧಿಸುತ್ತೇವೆ. ಹಿಂಬದಿ ಸವಾರರಿಗೂ ಇದು ಅನ್ವಯವಾಗುತ್ತದೆ ಎಂದು ಪೊಲೀಸರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಚಿಹ್ನೆ, ಬಿಜೆಪಿಯ ಭರವಸೆಗಳು ರಾರಾಜಿಸುತ್ತಿದ್ದ ಗೋಡೆ ಬರಹಕ್ಕೆ ಕೆಂಪು ಮಸಿ ಬಳಿದ ಮೈಸೂರು ಪಾಲಿಕೆ ಸಿಬ್ಬಂದಿ!
ನಗರ ಪೊಲೀಸ್ ಆಯುಕ್ತ ಬಿ ರಮೇಶ್ ಅವರ ನಿರ್ದೇಶನಕ್ಕೆ ಅನುಸಾರ ಈ ಕಾರ್ಯಾಚರಣೆ ನಡೆಸಲಾಗಿದೆ ಮತ್ತು ನಡೆಸಲಾಗುತ್ತಿದೆ. ಟ್ರಿಪಲ್ ರೈಡಿಂಗ್ ವಿರುದ್ಧವೂ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಡ ಮಾತ್ರವಲ್ಲದೆ, ಪುನರಾವರ್ತಿತ ಅಪರಾಧದ ಸಂದರ್ಭದಲ್ಲಿ ಸವಾರರ ಪರವಾನಗಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಅಮಾನತುಗೊಳಿಸಲು ಶಿಫಾರಸು ಮಾಡಿ ಸಂಬಂಧಿತ ಆರ್ಟಿಒಗೆ ಕಳುಹಿಸಲಾಗುತ್ತದೆ. ಕೇವಲ ಶೇ 44ರಷ್ಟು ದ್ವಿಚಕ್ರ ವಾಹನ ಸವಾರರು ಮಾತ್ರ ಐಎಸ್ಐ ಗುರುತು ಹೊಂದಿರುವ ಹೆಲ್ಮೆಟ್‌ಗಳನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ