ಯದುವೀರ್ ಒಡೆಯರ್ (ಸಂಗ್ರಹ ಚಿತ್ರ)
ಮೈಸೂರು, ಮಾರ್ಚ್ 13: ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ಗೆ (Yaduveer Wadiyar) ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸಲು ಬಿಜೆಪಿ (BJP) ಟಿಕೆಟ್ ನೀಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಫೇಸ್ಬುಕ್ ಲೈವ್ನಲ್ಲಿ ಬಂದು ಕಣ್ಣೀರು ಹಾಕಿರುವುದೂ ದೊಡ್ಡ ಸುದ್ದಿಯಾಗಿದೆ. ಈ ಮಧ್ಯೆ, ರಾಜಮನೆತನದ ಹಿರಿಮೆಯೊಂದಿಗೆ ಆರಾಮವಾಗಿದ್ದ ಯದುವೀರ್ ಒಡೆಯರ್ ರಾಜಕೀಯ ಪ್ರವೇಶಕ್ಕೆ ಕಾರಣಗಳೇನಿರಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಯದುವೀರ್ ಒಡೆಯರ್ ಅವರನ್ನೇ ಬಿಜೆಪಿ ಆಯ್ಕೆ ಮಾಡಲು (ಒಂದು ವೇಳೆ ಲೋಕಸಭೆ ಚುನಾವಣೆ ಟಿಕೆಟ್ ನೀಡಿದರೆ) ಕಾರಣಗಳು ಏನು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
- ಯದುವೀರ್ ಒಡೆಯರ್ ಅವರನ್ನು ರಾಜಕೀಯಕ್ಕೆ ಕರೆತರಲು ಇರುವ ಮುಖ್ಯ ಕಾರಣ ಮೈಸೂರು ರಾಜಮನೆತನದ ಬಗ್ಗೆ ಅಲ್ಲಿನ ಜನರಿಗೆ ಇರುವ ಗೌರವ.
- ಮೈಸೂರು ಚಾಮರಾಜನಗರ ಮಂಡ್ಯ ಹಾಸನ ಭಾಗದ ಜನರಿಗೆ ಯದುವಂಶದ ಬಗ್ಗೆ ಅಪಾರ ಗೌರವವಿದೆ.
- ಮೈಸೂರು ಅರಸರ ಅಭಿವೃದ್ಧಿ ಕಾರ್ಯಗಳು, ದೂರದೃಷ್ಟಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 100 ವರ್ಷದ ಅಭಿವೃದ್ಧಿ ಚಿಂತನೆ ಬಗ್ಗೆ ಜನರಲ್ಲಿ ಪ್ರೀತಿ ಇದೆ.
- ಕೆಆರ್ಎಸ್ ಜಲಾಶಯ, ವಿದ್ಯುತ್ ಉತ್ಪಾದನಾ ಘಟಕ, ಆಸ್ಪತ್ರೆಗಳು ಸೇರಿ ಹತ್ತು ಹಲವು ಕಾರ್ಖಾನೆಗಳ ಸ್ಥಾಪನೆಗೆ ಅರಸರ ಕೊಡುಗೆ ಇದೆ.
- ಜನರು ಯದುವಂಶದವರನ್ನು ದೇವರ ಸ್ಥಾನದಲ್ಲಿ ನೋಡುತ್ತಿರುವುದು ಕೂಡ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಯೋಚಿಸಲು ಪ್ರಮುಖ ಕಾರಣವಾಗಿದೆ.
- ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ರಾಜ್ಯದ ಬಿಜೆಪಿ ನಾಯಕರ ಜೊತೆಗೆ ಒಡೆಯರ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.
- ಒಡೆಯರ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಬಾಂಧವ್ಯ ಅಷ್ಟೊಂದು ಸರಿಯಿಲ್ಲ ಎನ್ನಲಾಗಿದೆ.
- ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಅರಮನೆ ಸ್ವಾಧೀನ ಕಾಯ್ದೆ (PALACE ACQUISITION ACT ) ಜಾರಿಗೆ ತಂದಿದ್ದರು. ಹಲವು ಸಂದರ್ಭಗಳಲ್ಲಿ ರಾಜಮನೆತದ ವಿರುದ್ದವಾಗಿ ಪರೋಕ್ಷ ವಾಗ್ದಾಳಿ ನಡೆಸಿದ್ದರು.
- ಯದುವೀರ ಈ ಹಿಂದೆ ಬಿಜೆಪಿ ನಾಯಕರ ಜೊತೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೆ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.
- ಅಂತರಾಷ್ಟ್ರಿಯ ಯೋಗ ದಿನಾಚರಣೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಸೇರಿ ಹಲವಾರು ಬಿಜೆಪಿ ಪ್ರಮುಖರ ಜೊತೆ ಒಡೆಯರ್ ಭಾಗಿಯಾಗಿದ್ದಾರೆ.
- ಜನರಿಗೆ ಯದುವೀರ ರಾಜಪರಂಪರೆ ಮುಂದುವರಿಸಿದರು ಎಂಬ ಪ್ರೀತಿ ಇದೆ. ಜತೆಗೆ, ಯದುವೀರ ಯಾವುದೇ ವಿವಾದಗಳಿಗೆ ಸಿಲುಕದೆ ಇರುವುದು ಅವರ ಪ್ಲಸ್ ಪಾಯಿಂಟ್ ಆಗಿದೆ.
- ತೂಕ ಹಾಗೂ ಪ್ರಬುದ್ದವಾದ ಮಾತು. ಇದುವರೆಗೂ ರಾಜಕೀಯವಾಗಿ ಯಾರನ್ನೂ ಟೀಕಿಸದೇ ಅಂತರ ಕಾಯ್ದುಕೊಂಡಿದ್ದಾರೆ.
- ಪಕ್ಷಾತೀತವಾಗಿ ಯದುವಂಶ ಹಾಗೂ ಯದುವೀರ ಅವರಿಗೆ ಅಭಿಮಾನಿಗಳು ಇದ್ದಾರೆ. ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳ ಬಗ್ಗೆ ಕಳಕಳಿ ಹೊಂದಿದ್ದಾರೆ.
- ಯದು ವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿದ್ದರು. 1984, 1986, 1996, 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಸಂಸದರಾಗಿದ್ದರು. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ 1991 ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಚಂದ್ರಪ್ರಭ ಅರಸ್ ವಿರುದ್ಧ ಸೋಲು ಕಂಡಿದ್ದರು.
ಇದನ್ನೂ ಓದಿ: ಮಹಾರಾಜರನ್ನೇ ರಾಜಕೀಯಕ್ಕೆ ತಂದ ಪಕ್ಷದ ಮುಖಂಡರಿಗೆ ನಮೋ! ಯದುವೀರ್ ರಾಜಕೀಯ ಪ್ರವೇಶ ಬಗ್ಗೆ ಪ್ರತಾಪ್ ಸಿಂಹ ಟಾಂಗ್
ಈ ಮಧ್ಯೆ, ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿ ಮೈಸೂರಿನ ರಾಜಕೀಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಾಪ್ ಅವರ ಬೆಂಬಲಿಗರು, ಒಕ್ಕಲಿಗ ಸಂಘದವರು ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಆಗ್ರಹ ಜೋರಾಗಿದೆ. ಮಂಗಳವಾರವಷ್ಟೇ ಯದುವೀರ್ ಅವರ ರಾಜಕೀಯ ಪ್ರವೇಶದ ಬಗ್ಗೆ ಪ್ರತಾಪ್ ಸಿಂಹ ವ್ಯಂಗ್ಯವಾಗಿ ಮಾತನಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ