ಮೈಸೂರು, ನ.4: ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ, ಜೆಡಿಎಸ್ ಮೈತ್ರಿಗೆ ವಿಘ್ನ ಎದುರಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ (BJP-JDS Alliance) ನಡುವೆ ಮೈತ್ರಿಯಿಲ್ಲ ಎಂದು ಹೇಳಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa), ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಈಶ್ವರಪ್ಪ ಅವರು ಆಕಾಂಕ್ಷಿಗಳ ಜೊತೆ ಸಭೆ ನಡೆಸಿದರು. ಚುನಾವಣೆ ಸಂಬಂಧ ಆಕಾಂಕ್ಷಿಗಳಿಂದ ಮಾಹಿತಿ ಸಂಗ್ರಹಿಸಿದರು. ಸಭೆಯಲ್ಲಿ ಸಂಸದ ಪ್ರತಾಪಸಿಂಹ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ ಸೇರಿ ಹಲವು ಬಿಜೆಪಿ ನಾಯಕರು ಇದ್ದರು.
ಬಳಿಕ ಮಾತನಾಡಿದ ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ಮಾತ್ರ ಮೈತ್ರಿ ಮಾಡಿಕೊಳ್ಳಲಾಗುತ್ತದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಿಜೆಪಿ ಬೆಂಬಲ ನೀಡುವುದಿಲ್ಲ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ 12 ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್: ಸಚಿವ ಪ್ರಿಯಾಂಕ್ ಖರ್ಗೆಗೆ ಕೆಎಸ್ ಈಶ್ವರಪ್ಪ ತಿರುಗೇಟು
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ JDSಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಈಶ್ವರಪ್ಪ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ. ಯಾರೇ ಅಭ್ಯರ್ಥಿಯಾದರೂ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಕಾಂಗ್ರೆಸ್ ಹೈಕಮಾಂಡ್ಗೆ ತಾಕತ್ ಇದ್ದರೆ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು. ಸಿಎಂ ಹುದ್ದೆ ವಿಚಾರದಲ್ಲಿ ಯಾರು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ರಣದೀಪ್ ಸಿಂಗ್ ಸುರ್ಜೇವಾಲಾ, ಕೆ ಸಿ ವೇಣುಗೋಪಾಲ್ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಅವರು ವಾಪಸ್ಸು ಹೋಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಜಣ್ಣ ಬಹಿರಂಗ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ಗೆ ತಾಕತ್ ಇದ್ದರೇ ಇವರೆಲ್ಲರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ