ಹುಣಸೂರು: ಗ್ರಾಮೀಣ ಪ್ರತಿಭೆ, ಭೌತಶಾಸ್ತ್ರ ಉಪನ್ಯಾಸಕ ಗಿರೀಶ್​​ಗೆ ರಾಜ್ಯ ಪ್ರಶಸ್ತಿ, ಅಪ್ಪನ ಕನಸು ನನಸು ಮಾಡಿದ ಮಗ!

| Updated By: ಸಾಧು ಶ್ರೀನಾಥ್​

Updated on: Sep 04, 2023 | 10:08 AM

HN Girish: ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕ, ಗ್ರಾಮೀಣ ಪ್ರತಿಭೆ ಹೆಚ್ ಎನ್ ಗಿರೀಶ್ ಅವರಿಗೆ ರಾಜ್ಯ ಸರ್ಕಾರದ 2023ನೇ ಸಾಲಿನ ಉತ್ತಮ ಉಪನ್ಯಾಸಕ ಪ್ರಶಸ್ತಿ ಸಂದಾಯವಾಗಿದೆ. ಹುಣಸೂರು ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಗಿರೀಶ್ ಹನಗೋಡು ಹೋಬಳಿಯ ಹಿಂಡಗೂಡ್ಲು ಹುಟ್ಟಿದ ಊರು. ಕಾಡಂಚಿನ ಗ್ರಾಮವಾದ ಹಿಂಡಗೂಡ್ಲುವಿನಲ್ಲಿ ಹುಟ್ಟಿ ರಾಜ್ಯ ಪ್ರಶಸ್ತಿ ಪಡೆಯುವವರೆಗಿನ ಅವರ ಹಾದಿ ನಿಜಕ್ಕೂ ಅದ್ಬುತ, ಎಲ್ಲರಿಗೂ ಆದರ್ಶ.

ಹುಣಸೂರು: ಗ್ರಾಮೀಣ ಪ್ರತಿಭೆ, ಭೌತಶಾಸ್ತ್ರ ಉಪನ್ಯಾಸಕ ಗಿರೀಶ್​​ಗೆ ರಾಜ್ಯ ಪ್ರಶಸ್ತಿ, ಅಪ್ಪನ ಕನಸು ನನಸು ಮಾಡಿದ ಮಗ!
ಹುಣಸೂರು: ಭೌತಶಾಸ್ತ್ರ ಉಪನ್ಯಾಸಕ ಗಿರೀಶ್​​ಗೆ ರಾಜ್ಯ ಪ್ರಶಸ್ತಿ
Follow us on

ರಾಜ್ಯ ಸರ್ಕಾರದ 2023ನೇ ಸಾಲಿನ ಉತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹೆಚ್ ಎನ್ ಗಿರೀಶ್ ಪಡೆದುಕೊಂಡಿದ್ದಾರೆ. ಹೆಚ್ ಎನ್ ಗಿರೀಶ್ ಅಪ್ಪಟ ಗ್ರಾಮೀಣ ಪ್ರತಿಭೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹನಗೋಡು ಹೋಬಳಿಯ ಹಿಂಡಗೂಡ್ಲು ಹೆಚ್ ಎನ್ ಗಿರೀಶ್ ಹುಟ್ಟಿದ ಊರು. ಕಾಡಂಚಿನ ಗ್ರಾಮವಾದ ಹಿಂಡಗೂಡ್ಲುವಿನಲ್ಲಿ ಹುಟ್ಟಿ ರಾಜ್ಯ ಪ್ರಶಸ್ತಿ ಪಡೆಯುವವರೆಗಿನ ಅವರ ಹಾದಿ ನಿಜಕ್ಕೂ ಅದ್ಬುತ ಹಾಗೂ ಎಲ್ಲರಿಗೂ ಆದರ್ಶ.

ತುಂಬಿದ ಕುಟುಂಬ – ಅಪ್ಪನ ಕನಸು ನನಸು ಮಾಡಿದ ಮಗ

ಹೆಚ್ ಎನ್ ಗಿರೀಶ್ ಹುಟ್ಟಿದ್ದು ತುಂಬಿದ ಕುಟುಂಬದಲ್ಲಿ. ತಂದೆ ಹೆಚ್ ಎನ್ ನಿಂಗೇಗೌಡ ಅವರಿಗೆ ಒಟ್ಟು 9 ಜನ ಸಹೋದರ ಸಹೋದರಿಯರು. ತಂದೆ ಹೆಚ್ ಎನ್ ನಿಂಗೇಗೌಡ ಶಿಕ್ಷಕರಾಗಿದ್ದರು. ತಾಯಿ ಎಂ. ಟಿ ಲಲಿತಮ್ಮ ಗೃಹಿಣಿ. ತಂದೆ ಹೆಚ್ ಎನ್ ನಿಂಗೇಗೌಡರಿಗೆ ಮಕ್ಕಳಿಗೆ ಪಾಠ ಕಲಿಸುವುದು ಅಂದರೆ ಎಲ್ಲಿಲ್ಲದ ಆಸಕ್ತಿ. ಶಾಲೆಯಲ್ಲಿ ಮಾತ್ರ ಇವರು ಪಾಠ ಮಾಡುತ್ತಿರಲಿಲ್ಲ. ಬದಲಿಗೆ ಶಾಲೆ ಮುಗಿದ ಮೇಲೆ ತಮ್ಮ ಗ್ರಾಮ ಹಿಂಡಗೂಡ್ಲು ಮಾತ್ರವಲ್ಲ ಬದಲಿಗೆ ಹನಗೋಡು ಹೋಬಳಿಯ ಎಲ್ಲಾ ಮಕ್ಕಳನ್ನು ಗುಡ್ಡೆ ಹಾಕಿಕೊಂಡು ಉಚಿತವಾಗಿ ಪಾಠ ಹೇಳಿ ಕೊಡುತ್ತಿದ್ದರು. ಇದಕ್ಕೆ ಸಾಕ್ಷಿ ನೀವು ಹನಗೋಡು ಹೋಬಳಿಯಲ್ಲಿ 40 ರಿಂದ 50 ವರ್ಷದ ಯಾರನ್ನೇ ನಿಲ್ಲಿಸಿ ಕೇಳಿದರು ಅವರು ನಾವು ನಿಂಗೇಗೌಡ ಮಾಸ್ಟರ್ ಅವರ ಶಿಷ್ಯರು ಅಂತಾ ಹೆಮ್ಮೆಯಿಂದ‌ ಹೇಳಿಕೊಳ್ಳುತ್ತಾರೆ.

ನಿಂಗೇಗೌಡರು ಊರ ಮಕ್ಕಳಿಗೆ ಮಾತ್ರವಲ್ಲ ತಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರ, ಶಿಕ್ಷಣವನ್ನು ನೀಡಿದರು. ನಿಂಗೇಗೌಡರಿಗೆ ಒಟ್ಟು ನಾಲ್ಕು ಮಕ್ಕಳು ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗ ಹೆಚ್ ಎನ್ ವೆಂಕಟೇಶ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇನ್ನು ಕಿರಿಯ ಮಗ ಹೆಚ್ ಎನ್ ಗಿರೀಶ್ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ಅದರಲ್ಲೂ ತಂದೆ ಹೆಚ್ ಎನ್ ನಿಂಗೇಗೌಡರಿಗೆ ಕಿರಿಯ ಮಗ ತನ್ನಂತೆ ಶಿಕ್ಷಣ ಕ್ಷೇತ್ರದಲ್ಲಿರಬೇಕೆಂಬ ಆಸೆಯಿತ್ತು. ಅದರಂತೆ ಗಿರೀಶ್ ಕಷ್ಟಪಟ್ಟ ಓದಿ ಉಪನ್ಯಾಸಕರಾದರು. ಅಷ್ಟೇ ಅಲ್ಲ ತಂದೆಗೆ ತಕ್ಕ ಮಗ ಎಂಬತೆ ಶಿಕ್ಷಣ ಕ್ಷೇತ್ರವನ್ನು ಕೇವಲ ವೃತ್ತಿಯನ್ನಾಗಿಸಿಕೊಳ್ಳದೇ ಸೇವೆಯೆಂದು ಪರಿಗಣಿಸಿ ದುಡಿದವರು ಅದರ ಪ್ರತಿಫಲವೇ ಇಂದು ಅವರಿಗೆ ಸಿಕ್ಕ ಉತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ.

ಶಿಕ್ಷಕನ ಸಾಧನೆ – ಹುಡುಕಿ ಬಂದ ಪ್ರಶಸ್ತಿಗಳು……!

ಹೆಚ್ ಎನ್ ಗಿರೀಶ್ ಕಳೆದ 29 ವರ್ಷಗಳಿಂದ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಸಮಯ ಪಾಲನೆ, ಸೌಜನ್ಯ ವರ್ತನೆ, ಸಮಾಜಮುಖಿ ಸೇವೆಗಳಿಂದ ವೃತ್ತಿ ಹಾಗೂ ಇಲಾಖೆಯ ಗೌರವ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗಲಿ ಅನ್ನೋ ಕಾರಣದಿಂದ ದ್ವಿತೀಯ ಪಿಯುಸಿ NCERT ಜೀವಶಾಸ್ತ್ರ ಪಠ್ಯಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿರುತ್ತಾರೆ. ಜೀವಶಾಸ್ತ್ರ ಪಠ್ಯಪುಸ್ತಕ ಭಾಷಾಂತರ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಪುಸ್ತಕವನ್ನು ಸರಳೀಕರಿಸಿ ಸರ್ಕಾರಿ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪುಸ್ತಕವನ್ನು ಬರೆದಿದ್ದಾರೆ. ತಾಲ್ಲೂಕು ಮಟ್ಟದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳ ಸಂಯೋಜಕನಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.

ಜೀವಶಾಸ್ತ್ರ ಶಿಕ್ಷಕರ ಕೈಪಿಡಿ (Biology Handbook) ಲೇಖಕ ಹಾಗೂ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಜೀವಶಾಸ್ತ್ರ ಪ್ರಶ್ನೆಪತ್ರಿಕೆ ತಯಾರಿಸಿದ ಅನುಭವ ಹೊಂದಿದ್ದಾರೆ. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆಯ ಉಪಾಧ್ಯಾಕ್ಷರಾಗಿ ಕಳೆದ 5 ವರ್ಷಗಳಿಂದ ಅನೇಕ ಜೀವಶಾಸ್ತ್ರ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜ್ಯಮಟ್ಟದ LOW COST – NO COST ಪಾಠೋಪಕರಣ ತಯಾರಿಸುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ NEET ಮತ್ತು K – CET ಗೆ ಪರೀಕ್ಷಾ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ವಿಜ್ಞಾನವನ್ನು ಸಂತಸದಾಯಕ ಹಾಗೂ ಪರಿಣಾಮಕಾರಿ ಬೋಧನೆಗೆ ಅನುಕೂಲವಾಗುವಂತೆ ಪಾಠೋಪಕರಣಗಳನ್ನು ಸಿದ್ಧಪಡಿಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಎಂ. ಎಸ್ಸಿ (Molecular Biology) ವಿಭಾಗಕ್ಕೆ 2023 ರಲ್ಲಿ ನಡೆದ ಪ್ರವೇಶ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.

ಕಾಲೇಜಿನ ಬಡ ಪ್ರತಿಭಾವಂಥ ಮಕ್ಕಳಿಗೆ ಸರ್ಕಾರದ ಸವಲತ್ತುಗಳು, ವಿದ್ಯಾರ್ಥಿವೇತನ ಮತ್ತು ಸಿ ಎಸ್ ಆರ್ ನಿಧಿಗಳಿಂದ ಧನ ಸಹಾಯ ಕೊಡಿಸುವಲ್ಲಿ ಶ್ರಮಿಸಿ ಅವರ ಮುಂದಿನ ಶಿಕ್ಷಣಕ್ಕೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಅನೇಕ ಸಂಘ ಸಂಸ್ಥೆ ಪತ್ರಿಕೆಗಳು ವಿದ್ಯಾರ್ಥಿಗಳಿಗೆ ನಡೆಸಿದ ವಿಭಾಗೀಯ ಮಟ್ಟದ ವೃತ್ತಿ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇಲಾಖೆ ವಹಿಸಿದ ಹೆಚ್ಚುವರಿ ಕಾರ್ಯಭಾರಗಳಾದ ವಿಭಾಗ ಮಟ್ಟದ ಕಾರ್ಯಾಗಾರ, ಜಿಲ್ಲಾ ಮಟ್ಟದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಇಕೊ – ಕ್ಲಬ್, ರೆಡ್ ರಿಬ್ಬನ್ ಕ್ಲಬ್ ಮತ್ತು ಸ್ಟೆಂಡರ್ಡ್-ಕ್ಲಬ್ ಸಂಯೋಜಕನಾಗಿ ಮಕ್ಕಳಲ್ಲಿ ಶೈಕ್ಷಣಿಕ ಸಾಮಾಜಿಕ ಆರೋಗ್ಯ ನೈರ್ಮಲ್ಯ ಪರಿಸರ ವಿಷಯಗಳಲ್ಲಿ ಜಾಗೃತಿ ಮೂಡಿಸಿರುತ್ತಾರೆ.

ಗ್ರಾಮೀಣ ಪ್ರತಿಭೆ ಹೆಚ್ ಎನ್ ಗಿರೀಶ್​​ಗೆ ಸಂದ ಪ್ರಶಸ್ತಿ-ಸನ್ಮಾನಗಳು

1. ಶಿಕ್ಷಣ ರಕ್ಷಕ ಪ್ರಶಸ್ತಿ – 2023 ತಾಲೋಕು ಪತ್ರಕರ್ತರ ಸಂಘ, ಹುಣಸೂರು
2. ಶಿಷ್ಯರು ಮೆಚ್ಚಿದ ಶಿಕ್ಷಕ ಪ್ರಶಸ್ತಿ 2021 – ನೇಗಿಲ ಯೋಗಿ ಟ್ರಸ್ಟ್ (ರಿ.), ಮೈಸೂರು.
3. ದಕ್ಷಿಣ ಕೇಸರಿ ಉತ್ತಮ ಶಿಕ್ಷಕ ಪ್ರಶಸ್ತಿ – ರೋಟರಿ ಸಂಸ್ಥೆ, ಮೈಸೂರು.
4. ಗುರುಕುಲ ರಾಜ್ಯ ಪ್ರಶಸ್ತಿ – ಸಾಹಿತ್ಯ ಶಿಕ್ಷಣ ಸಂಸ್ಥೆ (ರಿ.), ಬೆಳಗಾವಿ. ಮುಂತಾದವು.

ಪರಿಸರ ಮತ್ತು ಆರೋಗ್ಯ ಕಾರ್ಯಕ್ರಮಗಳು:

1. ಕಾಲೇಜಿನಲ್ಲಿ ಇಕೊ-ಕ್ಲಬ್ ನಿರ್ಮಿಸಿ, ಸಂಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿರಂತರವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿರುತ್ತಾರೆ.

2. ರೆಡ್ ರಿಬ್ಬನ್ ಕ್ಲಬ್, ಕರ್ನಾಟಕ ಸರ್ಕಾರ, ಕರ್ನಾಟಕ ಏಡ್ಸ್ ಪ್ರಿವೆನ್‌ಶನ್ ಸೊಸೈಟಿ ಸಂಪನ್ಮೂಲ ವ್ಯಕ್ತಿಯಾಗಿ ನೂರಕ್ಕು ಹೆಚ್ಚು ಶಾಲಾ, ಕಾಲೇಜು ಮತ್ತು ಎನ್ ಎಸ್ ಎಸ್ ಶಿಬಿರಗಳಲ್ಲಿ ಜಾಗೃತಿ ಉಪನ್ಯಾಸಗಳನ್ನು ನೀಡಿರುತ್ತಾರೆ.

3. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಬೆಂಗಳೂರು ಶಾಖೆಯಿಂದ ತರಬೇತಿ ಪಡೆದು, ಕಳೆದ ಎರಡು ವರ್ಷಗಳಿಂದ Standard Club ರಚಿಸಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಗ್ರಾಹಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

4. ಮೈಸೂರು ವಿಶ್ವವಿದ್ಯಾನಿಲಯದ ಜೆನಿಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಸಹಯೋಗದಲ್ಲಿ ಕೋವಿಡ್ ನಂತರ ಮಕ್ಕಳ ಶೈಕ್ಷಣಿಕ ಹಿನ್ನಡೆ, ಕಾರಣ ಮತ್ತು ಪರಿಹಾರ ಎಂಬ ತರಬೇತಿಯನ್ನು ಮೈಸೂರು ಜಿಲ್ಲೆಯ 300ಕ್ಕು ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ನಡೆದ ತರಬೇತಿಗೆ ಸಂಯೋಜಕನಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.

5. ನಮ್ಮ ಕಾಲೇಜಿನ ಇಕೋ – ಕ್ಲಬ್ ಆಶ್ರಯದಲ್ಲಿ ಗ್ರೀನ್ ಆಸ್ಕರ್ ವಿಜೇತ ಹಾಗೂ ಪರಿಸರ ತಜ್ಞರುಗಳಾದ ಶ್ರೀ ಕೃಪಕರ ಮತ್ತು ಶ್ರೀ ಸೇನಾನಿ ರವರಿಂದ ಪರಿಸರ ಜಾಗೃತಿ ಬಗ್ಗೆ ಸಂವಾದ ಏರ್ಪಡಿಸಿ ಯಶಸ್ವಿಯಾಗಿದ್ದಾರೆ.

5. ವಿವಿಧ ಕಾಲೇಜುಗಳಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಲ್ಲಿ ವಿದ್ಯಾಥಿಗಳಿಗೆ ಹಾಗೂ ಸಮುದಾಯದಲ್ಲಿ ಏಡ್ಸ್ ಹಾಗೂ ಪರಿಸರ ಜಾಗೃತಿ ಉಪನ್ಯಾಸಗಳನ್ನು ನೀಡಿರುತ್ತಾರೆ.

7. ವಿಶ್ವ ವನ್ಯಜೀವಿ ನಿಧಿಯ (WWE) ಸಹಯೋಗದಲ್ಲಿ ನಡೆದ ಬಂಧನದಲ್ಲಿರುವ ಆನೆಗಳ ಗಣತೀಕರಣ ಪ್ರಾಜೆಕ್ಟ್‌ನಲ್ಲಿ ಸೇವೆ ಸಲ್ಲಿಸಿರುತ್ತಾರೆ‌.

8. ಹಂದಿಜ್ವರ (HINI) ರೋಗದ ಬಗ್ಗೆ ಜನಜಾಗೃತಿಗಾಗಿ ವೈಜ್ಞಾನಿಕ ಮಾಹಿತಿಯುಳ್ಳ ಸಿ ಡಿ ಸಿದ್ಧಪಡಿಸಿ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಮಣಿವಣ್ಣನ್ ಅವರಿಂದ ಬಿಡುಗಡೆಗೊಳಿಸಿ ಉಚಿತವಾಗಿ ಶಾಲಾ-ಕಾಲೇಜುಗಳಿಗೆ ಹಂಚಿರುತ್ತಾರೆ‌.

ಶಿಕ್ಷಣ ಇಲಾಖೆಯಲ್ಲಿ ಇವರು ಸಲ್ಲಿಸಿದ ವಿಶೇಷ ವಿಶಿಷ್ಠ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಇವರಿಗೆ ರಾಜ್ಯದ ಉತ್ತಮ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸಿದೆ.

ನನಗೆ ಬಂದಿರುವ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಜೊತೆಗೆ ಶಿಕ್ಷಣ ಸುಧಾರಣೆಗೆ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ಬಂದಿದೆ. ಖಂಡಿತಾ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡುತ್ತೇನೆ. ನನ್ನ ಈ ಪ್ರಶಸ್ತಿಯನ್ನು ನನ್ನನ್ನು ತಿದ್ದಿ ತೀಡಿ ಶಿಕ್ಷಕನನ್ನಾಗಿ ರೂಪಿಸಿದ ನನ್ನ ಪೂಜ್ಯ ತಂದೆ ಹೆಚ್ ಎನ್ ನಿಂಗೇಗೌಡ ಮಮತೆಯನ್ನು ನೀಡಿದ ತಾಯಿ ಎಂ ಟಿ ಲಲಿತಮ್ಮ. ನನ್ನ ಪತ್ನಿ ಮಕ್ಕಳು, ನನ್ನ ಸಹೋದರ ಹಿರಿಯ ವಕೀಲರಾದ ಹೆಚ್ ಎನ್ ವೆಂಕಟೇಶ್ ಹಾಗೂ ನನ್ನ ಸಹೋದರಿಯರು ನನ್ನ ಕುಟುಂಬ ವರ್ಗ, ನನ್ನ ಪ್ರೀತಿಯ ವಿದ್ಯಾರ್ಥಿಗಳು, ನನ್ನ ಸಹೋದ್ಯಗಿಗಳು, ನನ್ನ ಬಂಧುಗಳು ಸ್ನೇಹಿತರಿಗೆ ಅರ್ಪಿಸುತ್ತೇನೆ ಎನ್ನುತ್ತಾರೆ ಹೆಚ್ ಎನ್ ಗಿರೀಶ್, ಭೌತಶಾಸ್ತ್ರ ಉಪನ್ಯಾಸಕರು, ರಾಜ್ಯ ಪ್ರಶಸ್ತಿ ಪುರಸ್ಕೃತರು, ಮೈಸೂರು.