ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 43 ವರ್ಷ ಜೈಲು ಶಿಕ್ಷೆ ವಿಧಿಸಿದ ಪೊಕ್ಸೊ ನ್ಯಾಯಾಲಯ

ಮೈಸೂರಿನ ಟಿ.ನರಸೀಪುರ ರಸ್ತೆಯ ತೋಟದ ಮನೆಯಲ್ಲಿ ಪೈಶಾಚಿಕ ಕೃತ್ಯ ನಡೆದಿತ್ತು.

ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 43 ವರ್ಷ ಜೈಲು ಶಿಕ್ಷೆ ವಿಧಿಸಿದ ಪೊಕ್ಸೊ ನ್ಯಾಯಾಲಯ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Nov 23, 2022 | 11:02 AM

ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ನಗರದ ಪೊಕ್ಸೊ ವಿಶೇಷ ನ್ಯಾಯಾಲಯವು 43 ವರ್ಷಗಳ ಕಠಿಣ ಶಿಕ್ಷೆ, ₹ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಅಪರಾಧಿಯು ಬಿಹಾರ ಮೂಲದವನು. ವಿಶೇಷ ಕೋರ್ಟ್​ನ ನ್ಯಾಯಾಧೀಶೆ ಶೈಮಾ ಕಮರೋಜ್ ಈ ತೀರ್ಪು ನೀಡಿದ್ದಾರೆ. ಇದೇ ವೇಳೆ ಸಂತ್ರಸ್ತ ಬಾಲಕಿಗೆ ₹ 7 ಲಕ್ಷ ಪರಿಹಾರ ನೀಡುವಂತೆ ಸಲಹೆ ಮಾಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು. 2021ರಲ್ಲಿ 10 ವರ್ಷದ ಬಾಲಕಿ ಮೇಲೆ ಆರೋಪಿಯು ನಿರಂತರ ಅತ್ಯಾಚಾರ ಎಸಗಿದ್ದ. ಮೈಸೂರು ಗ್ರಾಮಾಂತರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್​ಸ್ಪೆಕ್ಟರ್ ​​ಕೆ.ಜೀವನ್​ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರಿನ ಟಿ.ನರಸೀಪುರ ರಸ್ತೆಯ ತೋಟದ ಮನೆಯಲ್ಲಿ ಪೈಶಾಚಿಕ ಕೃತ್ಯ ನಡೆದಿತ್ತು.

ಏನಿದು ಪೊಕ್ಸೊ ಕಾಯ್ದೆ?

ಮಕ್ಕಳ ಮೇಲೆ ಲೈಂಗಿಕ ಹಾಗೂ ಇತರ ದೌರ್ಜನ್ಯಗಳನ್ನು ತಡೆಯಲೆಂದು 2012ರಲ್ಲಿ ಜಾರಿಗೆ ಪೊಕ್ಸೊ ಕಾಯ್ದೆ (POCSO Act) ಜಾರಿಗೊಳಿಸಲಾಯಿತು. ಮಕ್ಕಳ ರಕ್ಷಣೆ ಕುರಿತು ಸಂವಿಧಾನದ 21ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿದೆ. ‘ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಮಸೂದೆ 2011′ ಅನ್ನು ಮೇ 22, 2012ರಂದು ಸಂಸತ್ತು ಒಂದು ಕಾಯ್ದೆಯಾಗಿ ಅಂಗೀಕರಿಸಿತು. 2012ರಿಂದ ಈ ಕಾಯ್ದೆಯು ಭಾರತದಲ್ಲಿ ಜಾರಿಯಾಯಿತು.

ಈ ಕಾಯ್ದೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ‘ಮಗು’ ಎಂದು ವ್ಯಾಖ್ಯಾನಿಸುತ್ತದೆ. ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಸುರಕ್ಷೆಗೆ ಕಾಯ್ದೆಯು ಪ್ರತಿ ಹಂತದಲ್ಲಿಯೂ ಆದ್ಯತೆ ನೀಡುತ್ತದೆ. ಮರಣ ದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆಗೆ ಅವಕಾಶ ವಿಧಿಸಲು ಕಾಯ್ದೆಯಡಿ ಅವಕಾಶವಿದೆ. ಪ್ರಾಕೃತಿಕ ವಿಕೋಪ ಮತ್ತು ವಿಪತ್ತುಗಳ ಸಂದರ್ಭಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಅಂಶಗಳನ್ನು ಸೇರಿಸಲಾಗಿದೆ.

ಮಕ್ಕಳನ್ನು ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ. ಮಗುವಿನ ಗುರುತು ಬಹಿರಂಗವಾಗದಂತೆ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು. ಮಗುವಿನ ಹೇಳಿಕೆಯನ್ನು ಮಗುವಿಗೆ ನಂಬಿಕೆ ಇರುವ ವ್ಯಕ್ತಿಯ ಉಪಸ್ಥಿತಿಯಲ್ಲಿ ದಾಖಲಿಸಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada