ಮೈಸೂರು: ಶಾಸಕ ಜಿ.ಟಿ. ದೇವೇಗೌಡ ಅವರ ಮೂರು ವರ್ಷದ ಮೊಮ್ಮಗಳು ಗೌರಿ, ಧೀರ್ಘ ಕಾಲದ ಅನಾರೋಗ್ಯದಿಂದ (ಮೇ 15)ರಂದು ನಿಧನ ಹೊಂದಿದ್ದರು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೌರಿ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಕೊನೆಯುಸಿರೆಳೆದಳು. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಶಾಸಕ ಜಿ.ಟಿ ದೇವೇಗೌಡಗೆ ಪತ್ರ ಬರೆಯುವ ಮೂಲಕ ಸಾಂತ್ವನ ಹೇಳಿದ್ದಾರೆ. ಜಿ.ಟಿ ದೇವೇಗೌಡ ಅವರೇ ನಿಮ್ಮ ಮೊಮ್ಮಗಳು ಗೌರಿ ಅವರ ನಿಧನದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ ಮತ್ತು ತೀವ್ರ ನೋವಾಗಿದೆ. ಇಷ್ಟು ಇಳಿವಯಸ್ಸಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಾಳೆ ಎಂದರೆ ನಂಬುವುದು ಅಸಾಧ್ಯ. ತೀವ್ರ ದುಃಖದ ಈ ಸಮಯದಲ್ಲಿ ನನ್ನ ಹೃತ್ಪೂರ್ವಕ ಸಂತಾಪಗಳು. ಅಂತಹ ಚಿಕ್ಕ ವಯಸ್ಸಿನಲ್ಲಿ ಮಗುವಿನ ನಷ್ಟವು ಪೋಷಕರಿಗೆ ಮತ್ತು ಅಜ್ಜನಾದ ನಿಮಗೆ ಅತ್ಯಂತ ಕಷ್ಟಕರ ಸಮಯವಾಗಿದೆ.
ಕುಟುಂಬಕ್ಕೆ ಆದ ನಷ್ಟ ಪದಗಳಿಗೆ ಮೀರಿದೆ. ಗೌರಿ ಬಿಟ್ಟು ಹೋಗಿರುವ ನೆನಪುಗಳು ಕುಟುಂಬಕ್ಕೆ ಸಾಂತ್ವನ ನೀಡಲಿ. ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Fri, 27 May 22