ಮೈಸೂರು: ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ (Adil Khan) ವಿರುದ್ಧ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಮೈಸೂರಲ್ಲಿ ಅತ್ಯಾಚಾರವೆಸಗಿದ್ದನೆಂದು ಆದಿಲ್ ದುರಾನಿ ವಿರುದ್ಧ ಇರಾನಿ ಮೂಲದ ಯುವತಿ ಆರೋಪಿಸಿದ್ದಳು. ಈಗಾಗಲೇ ರಾಖಿ ಸಾವಂತ್ ನೀಡಿದ್ದ ವಂಚನೆ ಕೇಸ್ನಲ್ಲಿ ಆದಿಲ್ ಜೈಲುಪಾಲಾಗಿದ್ದು, ಇದೀಗ ಆತನ ವಿರುದ್ಧ ಮತ್ತೊಂದು FIR ದಾಖಲು ಮಾಡಲಾಗಿದೆ.
ರಾಖಿ ಸಾವಂತ್ ಪತಿ ಆದಿಲ್ ಖಾನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಂಡನ ವಿರುದ್ಧ ರಾಖಿ ಸಾವಂತ್ ಅವರು ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನುರಾಖಿ ಸಾವಂತ್ ಹೊರಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ವಿವರಿಸುತ್ತಿರುವಾಗ ಅವರು ಮಾಧ್ಯಮಗಳ ಕ್ಯಾಮೆರಾ ಎದುರಿನಲ್ಲೇ ಕುಸಿದು ಬಿದ್ದಿದ್ದರು.
ಇದನ್ನೂ ಓದಿ: Rakhi Sawant: ಬೀದಿಗೆ ಬಂತು ಆದಿಲ್ ಖಾನ್-ರಾಖಿ ಸಾವಂತ್ ಮದುವೆ ಗಲಾಟೆ; ಪತಿ ಮೇಲೆ ಅನೈತಿಕ ಸಂಬಂಧದ ಆರೋಪ
ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್ ಅವರ ತಾಯಿ ನಿಧನರಾದರು. ಅಂದಿನಿಂದ ಇಂದಿನತನಕ ಅವರು ಹಲವು ಬಗೆಯಲ್ಲಿ ಆಘಾತ ಎದುರಿಸುತ್ತಿದ್ದಾರೆ. ಗಂಡ ಆದಿಲ್ ಖಾನ್ ನೀಡಿದ ಕಿರುಕುಳಗಳು ಒಂದೆರಡಲ್ಲ ಎಂದು ಅವರು ಹೇಳಿದ್ದಾರೆ. ‘ಮೈಸೂರು ಮತ್ತು ಬೆಂಗಳೂರಿನಲ್ಲಿ ಆತನ ಕ್ರಿಮಿನಲ್ ರೆಕಾರ್ಡ್ ಇದೆ. ಮದುವೆಗೂ ಮುನ್ನ ಅದು ತಿಳಿದಿದ್ದರೆ ಈಗ ಇಂಥ ದಿನ ಬರುತ್ತಿರಲಿಲ್ಲ’ ಎಂದು ಅವರು ಕಣ್ಣೀರು ಹಾಕಿದ್ದರು.
ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ಪತಿ ಆದಿಲ್ ಖಾನ್ ಬಂಧನ; ‘ಸಾಯೋ ತನಕ ಕ್ಷಮಿಸಲ್ಲ’ ಎಂದು ತುತ್ತು ತಿನ್ನಿಸಿದ ನಟಿ
ಕಳೆದ ವರ್ಷ ರಾಖಿ ಸಾವಂತ್ ಅವರು ಮರಾಠಿ ಬಿಗ್ ಬಾಸ್ ಶೋಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರ ಪತಿ ಆದಿಲ್ ಖಾನ್ ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡರು ಎಂಬ ಆರೋಪ ಇದೆ. ‘ಆಕೆಯ ಜೊತೆಗಿನ ಸಂಬಂಧದ ಕಾರಣದಿಂದಾಗಿ ನಾನು ಮದುವೆ ಬಗ್ಗೆ ಮೌನವಾಗಿರುವಂತೆ ಆದಿಲ್ ಖಾನ್ ಒತ್ತಾಯಿಸಿದ. ಅಲ್ಲಿಯವರೆಗೆ ನಾನು ಸೈಲೆಂಟ್ ಆಗಿದ್ದೆ. ಮೊದಲಿಗೆ ನನ್ನ ಜೊತೆ ಮದುವೆ ಆಗಿದ್ದನ್ನೇ ಆತ ಒಪ್ಪಿಕೊಳ್ಳಲಿಲ್ಲ. ನಂತರ ಮಾಧ್ಯಮದ ಭಯದಿಂದ ಒಪ್ಪಿಕೊಂಡ’ ಎಂದು ರಾಖಿ ಸಾವಂತ್ ಇತ್ತೀಚೆಗೆ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 pm, Sat, 11 February 23