ಶಿವಮೂರ್ತಿ ಮುರುಘಾ ಶರಣನ ವಿರುದ್ಧ ಮಾದಕ ವಸ್ತು ಬಳಕೆ, ಮಾನವ ಸಾಗಣೆ, ಅತ್ಯಾಚಾರ, ಕೊಲೆ ಆರೋಪ: ಸಮಗ್ರ ತನಿಖೆಗೆ ‘ಒಡನಾಡಿ’ ಒತ್ತಾಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 07, 2022 | 1:34 PM

ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವುದು, ಮಾನವ ಸಾಗಣೆ, ಅತ್ಯಾಚಾರ, ಕೊಲೆಯಂತಹ ಆರೋಪಗಳು ಕೇಳಿಬಂದಿವೆ. ಶಿವಮೂರ್ತಿ ಮುರುಘಾ ಶರಣ ಸಹ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಇದೆ ಎಂದು ಅವರು ತಿಳಿಸಿದರು.

ಶಿವಮೂರ್ತಿ ಮುರುಘಾ ಶರಣನ ವಿರುದ್ಧ ಮಾದಕ ವಸ್ತು ಬಳಕೆ, ಮಾನವ ಸಾಗಣೆ, ಅತ್ಯಾಚಾರ, ಕೊಲೆ ಆರೋಪ: ಸಮಗ್ರ ತನಿಖೆಗೆ ‘ಒಡನಾಡಿ’ ಒತ್ತಾಯ
ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ (ಎಡಚಿತ್ರ), ಆತ್ಯಾಚಾರ ಆರೋಪಿ ಶಿವಮೂರ್ತಿ ಮುರುಘಾ ಶರಣ
Follow us on

ಮೈಸೂರು: ‘ಚಿತ್ರದುರ್ಗದ ಮುರುಘಾ ಮಠದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದದ್ದು ಅಷ್ಟೇ ಅಲ್ಲ, ಇತರ ಹಲವು ಅಪರಾಧ ಕೃತ್ಯಗಳು ನಡೆದಿವೆ. ವಿಸ್ತೃತ ತನಿಖೆ ನಡೆದರೆ ನಿಜ ಸಂಗತಿ ಬಹಿರಂಗವಾಗಲಿದೆ’ ಎಂದು ಎಂದು ಒಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಅವರು ಹೇಳಿದರು. ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವುದು, ಮಾನವ ಸಾಗಣೆ, ಅತ್ಯಾಚಾರ, ಕೊಲೆಯಂತಹ ಆರೋಪಗಳು ಕೇಳಿಬಂದಿವೆ. ಶಿವಮೂರ್ತಿ ಮುರುಘಾ ಶರಣ ಸಹ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಇದೆ ಎಂದು ಅವರು ತಿಳಿಸಿದರು.

ಮಠದಲ್ಲಿದ್ದ ಮಗುವಿನ ಮೇಲೆ ಅತ್ಯಾಚಾರ ನಡೆದು ನಂತರ ಕೊಲೆಯಾಗಿದೆ. ಆ ಮಗುವಿನ ಶವ ರೈಲ್ವೆ ಹಳಿಗಳ ಮೇಲೆ ಸಿಕ್ಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರು ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಮಠದ ಆವರಣದಲ್ಲಿ ಕಾಂಡೋಮ್ ಮತ್ತು ಸಿರಂಜ್​ಗಳು ಸಿಕ್ಕಿವೆ. ಈ ಬಗ್ಗೆಯೂ ತನಿಖೆ ನಡೆಯಬೇಕಿದೆ. ಮಾನವ ಸಾಗಣೆ, ಮಾದಕ ದ್ರವ್ಯ ಬಳಕೆಯ ಕಲಂಗಳನ್ನೂ ಲಗತ್ತಿಸಿ ಪ್ರಕರಣ ಮುನ್ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಸಾಮಾನ್ಯ ಪುರುಷನೊಬ್ಬ ಇಷ್ಟು ಕ್ರೂರವಾಗಿ, ಕೆಟ್ಟದಾಗಿ ವರ್ತಿಸಲು ಸಾಧ್ಯವಿಲ್ಲ. ವಿಕೃತಕಾಮಿಗಳನ್ನೂ ಮೀರಿಸುವ ರೀತಿಯಲ್ಲಿ ಶಿವಮೂರ್ತಿ ಮುರುಘಾ ವರ್ತನೆ ಇದೆ. ಆತ ಶಕ್ತಿವರ್ಧಕ ಅಥವಾ ಬೇರೆ ಯಾವುದಾದರೂ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆಯೂ ನಮಗೆ ಅನುಮಾನಗಳಿವೆ ಎಂದರು. ಮಠದಲ್ಲಿರುವ ಪಿಟ್ ಬಗ್ಗೆಯೂ ಪರಿಶೀಲನೆ ಆಗಬೇಕಿದೆ. 15 ವರ್ಷಗಳ ಹಿಂದೆ ಪಿಟ್ ಅನ್ನು ಸ್ವಾಮೀಜಿ ಸ್ವತಃ ಸ್ವಚ್ಛಗೊಳಿಸಿದ್ದರು. ಈ ಸಂದರ್ಭದಲ್ಲಿ ಕಾಂಡೋಮ್, ಸಿರಿಂಜ್ ಸೇರಿ ಹಲವು ವಸ್ತುಗಳು ಸಿಕ್ಕಿದ್ದವು. ಇವು ಮಠದ ಅತಿಥಿಗಳ ಕೃತ್ಯ ಎಂದು ಆ ಸಂದರ್ಭದಲ್ಲಿ ಸ್ವಾಮೀಜಿ ಹೇಳಿದ್ದರಂತೆ. ಈಗಲೂ ಆ ಪಿಟ್ ಮಠದಲ್ಲಿಯೇ ಇದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಇದು ಕೇವಲ ದೂರು ನೀಡಿದ ಬಾಲಕಿಯರಿಗೆ ಮಾತ್ರ ಸೀಮಿತವಾದ ಪ್ರಕರಣವಲ್ಲ. ದೂರು ನೀಡದ ಹಲವು ಬಾಲಕಿಯರು ಮಹಿಳೆಯರಿಗೂ ಸಂಬಂಧಪಟ್ಟಿದೆ. ಈ ನಿಟ್ಟಿನಲ್ಲಿ ಮಠದಲ್ಲಿರುವ ಹಾಗೂ ಮಠದಿಂದ ಹೋಗಿರವವರಿಂದಲೂ ಮಾಹಿತಿ ಪಡೆಯಬೇಕು. ಇದು ಕೇವಲ ಆರಂಭ ಮಾತ್ರ. ಆದರೆ ಪೊಲೀಸರು ಪರಿಪೂರ್ಣವಾಗಿ ಸರಿಯಾದ ಹಾದಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದು ಐತಿಹಾಸಿಕ ಪ್ರಕರಣ. ಈ ಪ್ರಕರಣದಲ್ಲಿ ಬರುವ ತೀರ್ಪು ಎಲ್ಲರಿಗೂ ಪಾಠವಾಗುತ್ತದೆ. ಸದ್ಯದ ಬೆಳವಣಿಗೆಯಿಂದ ಮತ್ತಷ್ಟು ಸಂತ್ರಸ್ತರು ದೂರು ನೀಡಲು ಮುಂದೆ ಬರುತ್ತಾರೆ. ಇಂಥವರ ಬೆಂಬಲಕ್ಕೆ ಮತ್ತಷ್ಟು ಜನರು ನಿಲ್ಲಬೇಕಾದ ಅಗತ್ಯವಿದೆ. ಅಕ್ರಮ ಎಸಗಿದವರಿಗೆ ಹಾರ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಇನ್ನಾದರೂ ಇದು ನಿಲ್ಲಬೇಕು ಎಂದು ಅವರು ವಿನಂತಿಸಿದರು.

ಕಾನೂನಿನ ಪ್ರಕಾರ ಕ್ರಮ

ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಾನೂನು ತನ್ನ ಕ್ರಮ ಜರುಗಿಸುತ್ತದೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಉಡುಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.