ಮೈಸೂರು, ಸೆಪ್ಟೆಂಬರ್ 29: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ (Mysore Dasara) ತಯಾರಿ ಜೋರಾಗಿ ನಡೆದಿದೆ. ಅಕ್ಟೋಬರ್ 3 ರಂದು ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಆದರೆ, ಇದರ ನಡುವೆ ಮೈಸೂರು ಹೊರವಲಯದಲ್ಲಿ ರೇವ್ ಪಾರ್ಟಿ (Reva Party) ನಡೆದಿದೆಯಾ ಅನುಮಾನ ವ್ಯಕ್ತವಾಗಿದೆ. ಕೆಆರ್ಎಸ್ ಬ್ಯಾಕ್ ವಾಟರ್ನಲ್ಲಿ ತಡರಾತ್ರಿವರೆಗೂ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮೈಸೂರು ಪೊಲೀಸರಿಗೆ ಮಾಹಿತಿ ದೊರೆತಿದೆ.
ಕೂಡಲೆ ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ತಮ್ಮ ತಂಡದ ಸಮೇತ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕೆಲವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಾರ್ಟಿಯಲ್ಲಿದ್ದ 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದೆ.
ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಯುವಕ, ಯುವತಿಯರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಅಲ್ಲದೇ, ಪಾರ್ಟಿಗೆ ಇಸ್ರೇಲ್ನಿಂದ ರ್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದನು ಎನ್ನಲಾಗಿದೆ. ಆಯೋಜಕರು ಪಾರ್ಟಿಗೆ ಒಬ್ಬರಿಗೆ 2 ಸಾವಿರ ರೂ. ನಿಗದಿ ಮಾಡಿದ್ದರು.
ಇದನ್ನೂ ಓದಿ: ರೇವ್ಪಾರ್ಟಿ ಮೇಲೆ ಸಿಸಿಬಿ ದಾಳಿ, ಐವರ ಬಂಧನ
ಪ್ರಕರಣ ಸಂಬಂಧ ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಮದ್ಯ ಮತ್ತು ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತೇವೆ. ಎಫ್ಎಸ್ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಎರಡೂ ವರದಿ ಬಂದ ನಂತರ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.
ಇತ್ತೀಚಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಿಂಗೇನಾ ಅಗ್ರಹಾರದ ಫಾರ್ಮ್ ಹೌಸ್ವೊಂದರಲ್ಲಿ ರೇವ್ ಪಾರ್ಟಿ ನಡೆದಿತ್ತು. ಪಾರ್ಟಿ ನಡೆಯುತ್ತಿದ್ದ ವೇಳೆಯೇ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್, ಮಾದಕ ವಸ್ತುಗಳು ಪತ್ತೆಯಾಗಿದ್ದವು. ಈ ಪಾರ್ಟಿಯಲ್ಲಿ ತೆಲಗು ನಟಿಯರು, ಮಾಡಲ್ಗಳು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ತೆಲಗು ನಟಿ ಹೇಮಾ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Sun, 29 September 24