ಮೈಸೂರು: ಟಿ.ನರಸೀಪುರ (T. Narasipur) ತಾಲೂಕಿನಲ್ಲಿ ಇಟ್ಟ ಬೋನುಗಳಿಗೂ ಬೀಳದೆ, ಯಾರ ಕಣ್ಣಿಗೂ ಬೀಳದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ನಿಂತಿರುವ ಚಿರತೆಯು ಇದೀಗ ಮತ್ತೊಮ್ಮೆ ಸಾಕು ಪ್ರಾಣಿಗಳ ಮೇಲೆ ದಾಳಿ (Leopard Attack) ನಡೆಸಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭವಾದ ನಂತರ ಸಾಕು ಪ್ರಾಣಿಗಳ ಮೇಲಿನ ಎರಡನೇ ದಾಳಿ ಇದಾಗಿದೆ. ಟಿ.ನರಸೀಪುರ ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ರೈತ ಮಹಿಳೆ ಸೌಭಾಗ್ಯ ಅವರು ಮೇಕೆಗಳನ್ನ ಮೇಯಿಸುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.
ಕುರಿಗಳು ಮೇಯುತ್ತಿದ್ದಾಗ ದಾಳಿ ನಡೆಸಿದ ಚಿರತೆ ಕುರಿ ಮರಿಯನ್ನು ಎಳೆದುಕೊಂಡು ಕಬ್ಬಿನ ಗದ್ದೆ ಒಳಗೆ ಹೋಗಿದೆ. ಈ ಹಿಂದೆ ಅಂದರೆ ಡಿಸೆಂಬರ್ 12ರಂದು ಟಿ.ನರಸೀಪುರ ತಾಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ಕುರಿ, ಮೇಕೆ ಮೇಲೆ ಚಿರತೆ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ತಿಂಗಳ ಅವಧಿಯಲ್ಲಿ ಯುವಕ ಮತ್ತು ಯುವತಿಯನ್ನು ಚಿರತೆ ಬಲಿ ಪಡೆದಿತ್ತು.
ಇದನ್ನೂ ಓದಿ: ಮೈಸೂರು: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಮರಿ ಸ್ಥಳಾಂತರಕ್ಕೆ ಗ್ರಾಮದ ಯುವಕರಿಂದ ತಕರಾರು
ಚಿರತೆ ಹಾವಳಿ ಇದ್ದ ಕಡೆಗಳಲ್ಲಿ ಸಿಬ್ಬಂದಿ ಬೋನ್ ಇರಿಸಿದ್ದಾರೆ. ಅದರಂತೆ ಹೆಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ದಿನದ ಹಿಂದೆಯಷ್ಟೇ ಚಿರತೆ ಮರಿ ಬಿದ್ದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಯುವಕರು ಚಿರತೆ ಸ್ಥಳಾಂತರಕ್ಕೆ ಅಡ್ಡಪಡಿಸಿದ್ದಾರೆ. ಚಿರತೆ ದಾಳಿಯಿಂದ ಸಾಕುಪ್ರಾಣಿಗಳು ಸಾವನ್ನಪ್ಪಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿದ್ದರು.
ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿ ಭೀತಿ ಎದುರಾಗಿದೆ. ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿತ್ತು. ಬಳ್ಳೂರುಹುಂಡಿ ಗ್ರಾಮದ ದಾಸಯ್ಯ ಎಂಬುವರು ಹಸು ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 am, Thu, 15 December 22