ಮೈಸೂರು: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಮರಿ ಸ್ಥಳಾಂತರಕ್ಕೆ ಗ್ರಾಮದ ಯುವಕರಿಂದ ತಕರಾರು
ಅರಣ್ಯ ಇಲಾಖೆ ಬೋನು ಇರಿಸಿತ್ತು. ಹಲವು ಚಿರತೆಗಳ ಪೈಕಿ ಒಂದು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಈ ವೇಳೆ ಗ್ರಾಮದ ಯುವಕರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿಯಾಗಿದೆ.
ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಬದನಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಮರಿ ಬಿದ್ದಿದ್ದು ಅದರ ಸ್ಥಳಾಂತರಕ್ಕೆ ಗ್ರಾಮದ ಯುವಕರು ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಜತೆ ಯುವಕರು ವಾಗ್ವಾದಕ್ಕೆ ಇಳಿದಿದ ಘಟನೆ ನಡೆದಿದೆ.
ಕಳೆದ ಮೂರು ತಿಂಗಳಿನಿಂದ ಗ್ರಾಮದಲ್ಲಿ ಚಿರತೆಗಳ ಕಾಟ ಹೆಚ್ಚಾಗಿತ್ತು. ಸಾಕು ಪ್ರಾಣಿಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಹಲವು ಚಿರತೆಗಳ ಪೈಕಿ ಒಂದು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಈ ವೇಳೆ ಗ್ರಾಮದ ಯುವಕರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿಯಾಗಿದೆ. ಸಾಕು ಪ್ರಾಣಿಗಳನ್ನು ಕೊಂದಿರುವುದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲಿಯವರೆಗೂ ಚಿರತೆ ತೆಗೆದುಕೊಂಡು ಹೋಗದಿರುವಂತೆ ಪಟ್ಟು ಹಿಡಿದಿದ್ದಾರೆ. ಆಗ ಯುವಕರನ್ನು ಸಮಾಧಾನ ಮಾಡಿದ ಗ್ರಾಮದ ಮುಖಂಡರು, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆ ಮರಿ ರವಾನಿಸಲಾಗಿದೆ.
ಇದನ್ನೂ ಓದಿ: ಮೈಸೂರಲ್ಲಿ ಚಿರತೆ ಭೀತಿ ಮಧ್ಯೆ ಹುಲಿ ದಾಳಿ: ಓರ್ವ ರೈತನಿಗೆ ಗಾಯ
ಬಂಡೀಪುರ ಬಳಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಸಾವು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಗ್ರಾಮದ ಬಳಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಮೃತಪಟ್ಟಿದೆ. ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ. ರಾತ್ರಿ ಸಂಚಾರ ನಿಷೇಧ ಇರುವುದರಿಂದ ರಭಸವಾಗಿ ಲಾರಿ ಹೋಗಿದ್ದು ಈ ವೇಳೆ ರಸ್ತೆಯ ಮಧ್ಯದಲ್ಲಿ ಇದ್ದ ಆನೆಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಿಂದ ರಸ್ತೆಯಲ್ಲೇ ಆನೆ ಮೃತಪಟ್ಟಿದೆ. ತಮಿಳುನಾಡು ಮೂಲದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಘಟನೆಗೆ ಪರಿಸರವಾದಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಾಹನಗಳ ಅತಿ ವೇಗವೇ ಅಪಘಾತಕ್ಕೆ ಕಾರಣ. ರಾತ್ರಿ 9ರಿಂದ ಬೆಳಿಗ್ಗೆ 6 ರವರೆಗೆ ವಾಹನ ಸಂಚಾರ ನಿಷೇಧ ಇರೋದ್ರಿಂದ ಸಂಜೆ ವೇಳೆ ಬೇಗ ಹೋಗಲು ವಾಹನಗಳು ಇಲ್ಲಿ ವೇಗವಾಗಿ ಸಂಚಾರ ಮಾಡ್ತಿವೆ. ರಾತ್ರಿ 9 ರ ಬದಲು ಸಂಜೆ 6 ರಿಂದಲೇ ವಾಹನ ಸಂಚಾರಕ್ಕೆ ನಿಷೇಧ ಹೇರಬೇಕು. ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು. ಕಾಡಿನ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಡುಬ್ಬಗಳನ್ನು( Road Humps) ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಂದಿಗಳ ಹಾವಳಿಗೆ ರೈತರು ಕಂಗಾಲು
ಕಲಬುರಗಿ: ಚಿತ್ತೂರು ತಾಲೂಕಿನ ವಾಡಿ ಪಟ್ಟಣದಲ್ಲಿ ಸಾಕು ಹಂದಿಗಳ ಹಾವಳಿಗೆ ರೈತರು ಕಂಗಾಲಾಗಿದ್ದಾರೆ. ಹಂದಿಗಳು ವಾಡಿ ಪಟ್ಟಣದ ಸುತ್ತಮುತ್ತಲಿನ ಹೊಲ ಗದ್ದೆಗಳಲ್ಲಿನ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಜೋಳ, ತೊಗರಿ ಸೇರಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಂದಿಗಳನ್ನು ಮೇಯಲು ಬಿಟ್ಟಿರುವ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ರೈತರು ಆಗ್ರಹಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:05 am, Wed, 14 December 22