ರೈತರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ಕೃಷಿ ಅಧಿಕಾರಿಗಳು ಹಳ್ಳಿಗಳಿಗೆ ಹೋಗಬೇಕು. ಆಫೀಸ್ನಲ್ಲೆ ಕೂತು ಕೆಲಸ ಮಾಡಬೇಡಿ. ರೈತರ ಜೊತೆ ಗೌರವಯುತವಾಗಿ ನಡೆದುಕೊಳ್ಳಿ. ರೈತರ ಸಂಪರ್ಕ ಕೇಂದ್ರ ಇರುವುದು ಯಾಕೆ? ರೈತರು ಕೃಷಿ ಅಧಿಕಾರಿಗಳಿಗಿಂತ ಬುದ್ದಿವಂತರು. ಕೃಷಿ ವಿಶ್ವವಿದ್ಯಾಲಯದಲ್ಲಿ ಓದಿದ ಮಾತ್ರಕ್ಕೆ ಅಧಿಕಾರಿಗಳು ಬುದ್ದಿವಂತರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆ.28) ತವರು ಜಿಲ್ಲೆ ಮೈಸೂರಿಗೆ (Mysuru) ತೆರಳಿದ್ದು, ಮೂರು ದಿನಗಳ ಕಾಲ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಸಂಸದ ಮತ್ತು ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿದರು. ಸಭೆಯಲ್ಲಿ “ಯಾವ ರೈತರು ಕೂಡ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಏನೋ ಕಷ್ಟದಲ್ಲಿ ಆತುರದ ನಿರ್ಧಾರಕ್ಕೆ ಬಂದಿರುತ್ತಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಡಿ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ತಡ ಮಾಡಬೇಡಿ. ದುಡ್ಡು ಕೊಡುವುದು ಸರ್ಕಾರ ಅಲ್ಲ ನಾವು. ದಸರಾ ಇದೆ ಅಂತ ನೆಪ ಹೇಳಿಕೊಂಡು ರೈತರ ಕೆಲಸ ಮರೆಯಬೇಡಿ. ಪರಿಹಾರ ಕೊಟ್ಟು ಸುಮ್ಮನಾಗಬೇಡಿ, ಆತ್ಮಹತ್ಯೆಗೆ ಕಾರಣ ತಿಳಿದುಕೊಳ್ಳಿ. ರೈತರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಬರ ಘೋಷಣೆ ಮಾಡುವ ಸ್ಥಿತಿ ಇದ್ಯಾ? ಕೃಷಿ ಅಧಿಕಾರಿಗಳು ಹಳ್ಳಿಗಳಿಗೆ ಹೋಗಬೇಕು. ಆಫೀಸ್ನಲ್ಲೆ ಕೂತು ಕೆಲಸ ಮಾಡಬೇಡಿ. ರೈತರ ಜೊತೆ ಗೌರವಯುತವಾಗಿ ನಡೆದುಕೊಳ್ಳಿ. ರೈತರ ಸಂಪರ್ಕ ಕೇಂದ್ರ ಇರುವುದು ಯಾಕೆ? ರೈತರು ಕೃಷಿ ಅಧಿಕಾರಿಗಳಿಗಿಂತ ಬುದ್ದಿವಂತರು. ಕೃಷಿ ವಿಶ್ವವಿದ್ಯಾಲಯದಲ್ಲಿ ಓದಿದ ಮಾತ್ರಕ್ಕೆ ಅಧಿಕಾರಿಗಳು ಬುದ್ದಿವಂತರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇನ್ನು ಡೈರಿ ಬರೆಯುವ ಅಭ್ಯಾಸವೇ ಅಧಿಕಾರಿಗಳಿಗೆ ಇಲ್ಲ. ನಾವೆಲ್ಲಾ ಡೈರಿ ಬರೆಯುತ್ತೇವೆ. ಯಾರು ಡೈರಿ ಬರೆಯುತ್ತೀರಾ ಕೈ ಎತ್ತಿ ಎಂದರು. ಬಹುತೇಕ ಅಧಿಕಾರಿಗಳು ಕೈ ಎತ್ತಿದರು. ಆಯ್ತು ಡೈರಿ ತೆಗೆದುಕೊಂಡು ಬನ್ನಿ. ಒಂದು ಡೈರಿ ಕೊಡಿ ಏನೂ ಬರೆದಿದ್ದಾರಾ ನೋಡುತ್ತೇನೆ. ಈ ವೇಳೆ ಅಧಿಕಾರಿಗಳು ಯಾರು ಡೈರಿ ಕೊಡಲಿಲ್ಲ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗಿದ್ದಾರೆ ಸುಳ್ಳು ಹೇಳಿದ್ರಾ ? ಎಂದು ಅಧಿಕಾರಿಗಳಿಗೆ ಕಿಚಾಯಿಸಿದರು.
ಇದನ್ನೂ ಓದಿ: ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ, ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಎಷ್ಟು ವರ್ಷದಿಂದ ಮೈಸೂರಿನಲ್ಲಿ ಇದ್ದೀಯಾ ಎಂದು ಸಿಎಂ ಸಿದ್ದರಾಮಯ್ಯ ಕೃಷಿ ಅಧಿಕಾರಿಗೆ ಕೇಳಿದರು. ಒಂದು ವರ್ಷದಿಂದ ಇದ್ದೇನೆ ಎಂದು ಕೃಷಿ ಅಧಿಕಾರಿ ಹೇಳಿದರು. ಹಾಗಿದ್ದರೇ ನೀವು ಎಷ್ಟು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೀರಾ ? ಎಷ್ಟು ರೈತರನ್ನು ಭೇಟಿ ಮಾಡಿದ್ದೀರಾ ? ಪರ್ಯಾಯ ಬೆಳೆಗೆ ಸೂಚನೆ ನೀಡಿದ್ದೀರಾ? ಎಂದು ಪ್ರಶ್ನಿಸಿದರು.
ಇದಕ್ಕೆ ಅಧಿಕಾರಿ 1200 ಹಳ್ಳಿಗಳಿವೆ 120 ಹಳ್ಳಿಗಳ ಭೇಟಿ ಮಾಡಿರುವುದಾಗಿ ಹೇಳಿದರು. ಶೇ 10 ಪರ್ಸೆಂಟ್ ಮಾತ್ರ ಮಾಡಿದ್ದೀಯಾ ಊರಿನ ಹೆಸರು ಹೇಳು ನೊಡೋಣಾ ಎಂದು. ಈ ವೇಳೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ಹೆಸರು ಹೇಳಲು ಪರದಾಡಿದರು.
ನಮ್ಮನ್ನು ಖುಷಿಪಡಿಸಲು ನನಗೆ ಮಾಹಿತಿ ಕೊಡಬೇಡ. ಸರಿಯಾಗಿ ಇರುವ ಗ್ರೌಂಡ್ ರಿಯಾಲಿಟಿ ಏನಿದೆ ಅಂತ ಹೇಳು. ನೀನು ಹೋದಾಗ ಫೀಲ್ಡ್ ಅಲ್ಲಿ ಪರಿಸ್ಥಿತಿ ಹೇಗಿತ್ತು ಹೇಳು. ಇದಕ್ಕೆ ಅಧಿಕಾರಿ ಪೋಟೋ ಮೂಲಕ ಮಾಹಿತಿ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಪೋಟೋದಲ್ಲಿ ನೀನು ಇಲ್ಲ ನಿಮ್ಮ ಅಧಿಕಾರಿಗಳು ಇಲ್ಲ ಏಕೆ ? ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ