ಮೈಸೂರು, ಅ.06: ಇತ್ತೀಚೆಗೆ ಕಾಂಗ್ರೆಸ್ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ನವರು ‘ಸರ್ಕಾರ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಮಾಡುತ್ತಿದೆ ಎಂದಿದ್ದರು. ಅವರ ಹೇಳಿಕೆಗೆ ಸ್ವತಃ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತಾಗಿ ಇದೀಗ ‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ಸಮುದಾಯಕ್ಕೂ ಅನ್ಯಾಯವಾಗಿಲ್ಲ ಎಂದು ಬಸವಜಯಂತಿ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಅವರು ಪರೋಕ್ಷವಾಗಿ ಶಾಮನೂರು ಅವರ ವಿಚಾರ ಪ್ರಸ್ತಾಪಿಸಿದ್ದಾರೆ.
ಇಂದು (ಅ.07) ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ನಮ್ಮ ಸರ್ಕಾರದಲ್ಲಿ ಯಾವ ಸಮುದಾಯದ ಕಡೆಗಣನೆಯೂ ಆಗಿಲ್ಲ, ಸಮುದಾಯವನ್ನು ಕಡೆಗಣಿಸುವುದಕ್ಕೆ ಸಿಎಂ ಅವಕಾಶ ಕೊಡಲ್ಲ. ಈ ಮಾತನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಿ. ಎಲ್ಲಾ ಯೋಜನೆಗಳು ಜಾತಿರಹಿತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನ ತತ್ವದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರವನ್ನು ಕಡ್ಡಾಯಗೊಳಿಸಿದ್ದಾರೆ ಎಂದರು.
ಇದನ್ನೂ ಓದಿ:ನನ್ನ ತಂದೆ ಲಿಂಗಾಯತ ಅಧಿಕಾರಿಗಳ ಬಗ್ಗೆ ಮಾತಾಡಿದ್ದು ಮುಗಿದ ಅಧ್ಯಾಯ: ಎಸ್ ಎಸ್ ಮಲ್ಲಿಕಾರ್ಜುನ, ಸಚಿವ
ಇನ್ನು ಬಳ್ಳಾರಿಯಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್ ‘ ನಮ್ಮ ಸರ್ಕಾರದಲ್ಲಿ ಎಲ್ಲಾ ಸಮುದಾಯಕ್ಕೂ ಸ್ಥಾನಮಾನ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. 2013 ಮತ್ತು 2023ರಲ್ಲಿ ಎಲ್ಲರಿಗೂ ಸಮನಾದ ಅವಕಾಶ ನೀಡಲಾಗಿದೆ. ಎಲ್ಲಾ ಜಾತಿಯವರಿಗೂ ಸಿಎಂ ಸಿದ್ದರಾಮಯ್ಯ ನ್ಯಾಯ ಒದಗಿಸಿದ್ದಾರೆ. ನಮ್ಮ ಪಕ್ಷದ ತತ್ವ, ಸಿದ್ಧಾಂತವೂ ಕೂಡ ಅದೇ ಆಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Sat, 7 October 23