ಮೈಸೂರು, ಫೆ.14: ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ (Leopard) ಕಾಟ ಹೆಚ್ಚಾಗುತ್ತಿದ್ದು ಮೈಸೂರು ಜಿಲ್ಲೆಯ ಎರಡು ಗ್ರಾಮಗಳಲ್ಲಿ 2 ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ರಕ್ಷಿಸಿದೆ. ಚಿರತೆ ಕಾಟದ ಬಗ್ಗೆ ಹೆಚ್ಚು ದೂರುಗಳು ಹೇಳಿ ಬಂದ ಹಿನ್ನೆಲೆ ಅರಣ್ಯ ಇಲಾಖೆ (Forest Department) ಬೋನು ಇರಿಸಿತ್ತು. ಸದ್ಯ ಈಗ 2 ಚಿರತೆಗಳು ಬೋನಿಗೆ ಬಿದ್ದಿವೆ.
ನಂಜನಗೂಡು ತಾಲೂಕಿನ ರಾಂಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೋಮವಾರ ಬೆಳಗ್ಗೆ ನಂಜನಗೂಡು ವ್ಯಾಪ್ತಿಯ ಚಿಕ್ಕಯ್ಯನಛತ್ರ ಹೋಬಳಿಯ ಹತ್ಯಾಳು ಗ್ರಾಮದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ. ಬಲೆಗೆ ಬಿದ್ದ ಗಂಡು ಚಿರತೆಗೆ ಸುಮಾರು ಐದು ವರ್ಷ ವಯಸ್ಸಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದರಿಂದ ರೈತರು ಜಾನುವಾರುಗಳನ್ನು ಮೇಯಿಸಲು ಭಯಪಡುತ್ತಿದ್ದರು.
ಈ ಭಾಗದಲ್ಲಿ ಬೀಡುಬಿಟ್ಟಿರುವ ಇತರ ಚಿರತೆಗಳನ್ನು ಸೆರೆ ಹಿಡಿಯುವಂತೆ ಇಲ್ಲಿನ ನಿವಾಸಿಗಳು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಟಿ.ನರಸೀಪುರ ವ್ಯಾಪ್ತಿಯ ತಲಕಾಡು ಹೋಬಳಿಯ ಕುರುಬೋಳನಹುಂಡಿಯಲ್ಲಿ ಭಾನುವಾರ ರಾತ್ರಿ ಬಾಳೆ ತೋಟದಲ್ಲಿ ಹಾಕಲಾಗಿದ್ದ ಬಲೆಗೆ ಮತ್ತೊಂದು ಚಿರತೆ ಬಿದ್ದಿದೆ. ಇದು ಕೂಡ ಗಂಡು ಚಿರತೆಯಾಗಿದ್ದು, ಸುಮಾರು ನಾಲ್ಕು ವರ್ಷ ಪ್ರಾಯದ್ದಾಗಿದೆ.
ಇದನ್ನೂ ಓದಿ: Viral Video: ದಾಹ ನೀಗಿಸಲು ಬಂದ ಚಿರತೆಯ ಮೇಲೆರಗಿದ ಮೊಸಳೆ; ಮುಂದೆನಾಯ್ತು ನೋಡಿ
ಗ್ರಾಮಸ್ಥರು ಹಲವು ಬಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಇಲಾಖೆ ಬೋನ್ ಇರಿಸಿತ್ತು. ಮೈಕ್ರೊಚಿಪ್ ಅಳವಡಿಸಿ ಕಿವಿಗೆ ಚುಚ್ಚಿದ ಎರಡು ಚಿರತೆಗಳನ್ನು ಕಾಡಿಗೆ ಬಿಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ ಎನ್ ಬಸವರಾಜ್ ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ರೈತರು ಈ ಭಾಗದಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗಿದೆ. ಹಲವು ಚಿರತೆಗಳು ಈ ಭಾಗದಲ್ಲಿವೆ. ಇದರಿಂದ ನಾವು ಜಮೀನಿಗೆ ಮತ್ತು ಜಾನುವಾರಗಳನ್ನು ಮೇಯಿಸಲು ಭಯಪಡುವಂತಾಗಿದೆ. ಜೀವ ಭಯದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಇನ್ನುಳಿದ ಚಿರತೆಗಳನ್ನು ಸೆರೆಹಿಡಿಯುವಂತೆ ರೈತರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ